ಮುಂಬೈ: ಟಾಲಿವುಡ್ನ ರೆಬೆಲ್ ಸ್ಟಾರ್, ಡಾರ್ಲಿಂಗ್ ಪ್ರಭಾಸ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷನ್ನಲ್ಲಿ ಮೂಡಿಬಂದ ಬಹುನಿರೀಕ್ಷಿತ 'ಸಲಾರ್' ಇದೀಗ ಬ್ಲಾಕ್ಬಸ್ಟರ್ ಚಿತ್ರವಾಗಿ ಹೊರಹೊಮ್ಮಿದ್ದು, ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಗಳಿಕೆ ಕಾಣುವ ಮೂಲಕ ಚಿತ್ರತಂಡದ ನಿರೀಕ್ಷೆಯನ್ನು ಉಳಿಸಿದೆ. ಇದೀಗ ಸಿನಿಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡ ಸಲಾರ್ ಅಂತಾರಾಷ್ಟ್ರೀಯ ಭಾಷೆಯೊಂದರಲ್ಲಿ ರಿಲೀಸ್ ಆಗಲು ಸಜ್ಜಾಗಿದೆ. ಅಷ್ಟಕ್ಕೂ ಯಾವ ಭಾಷೆ? ಎಲ್ಲಿ ಎಂಬುದರ ವಿವರ ಹೀಗಿದೆ.
ಆ್ಯಕ್ಷನ್ ಜಾನರ್ ಒಳಗೊಂಡ 'ಸಲಾರ್ ಭಾಗ 1' ಸೀಜ್ ಫೈರ್ ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಅಬ್ಬರಿಸಿದ್ದು, ಪ್ರಭಾಸ್ ಮತ್ತು ಮಾಲಿವುಡ್ ನಟ ಪೃಥ್ವಿರಾಜ್ ಸುಕುಮಾರನ್ ಪಾತ್ರಗಳಿಗೆ ಪ್ರೇಕ್ಷಕರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಚಿತ್ರವು ಸ್ಪ್ಯಾನಿಷ್ ಭಾಷೆಯಲ್ಲಿ ರಿಲೀಸ್ ಆಗಲು ಎದುರು ನೋಡುತ್ತಿದೆ.
ಮಾರ್ಚ್ 7, 2024 ರಂದು ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಸಲಾರ್' ಲ್ಯಾಟಿನ್ ಅಮೇರಿಕಾದಲ್ಲಿ ಸ್ಪ್ಯಾನಿಷ್ ಭಾಷೆಯಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಈ ಭಾಷೆಯಲ್ಲಿ ಚಿತ್ರವನ್ನು ಸಿನಿಪ್ರೇಕ್ಷಕರು ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದನ್ನು ಸದ್ಯ ಕಾದು ನೋಡಬೇಕಿದೆ.
ಚಿತ್ರದಲ್ಲಿ ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್, ಶ್ರೀಯಾ ರೆಡ್ಡಿ, ಬಾಬಿ ಸಿಂಹ, ಜಗಪತಿ ಬಾಬು ಮುಂತಾದವರ ತಾರಾಗಣವಿದೆ. ಚಿತ್ರಕ್ಕೆ 'ಕೆಜಿಎಫ್' ಖ್ಯಾತಿಯ ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ,(ಏಜೆನ್ಸೀಸ್).