ನ್ಯೂಸ್

ಸ್ಕ್ರ್ಯಾಪ್ ತಾಮ್ರ ಮಾರಾಟ ; ನೆಪ, 2.70 ಲಕ್ಷ ಮೋಸ

ಬೆಂಗಳೂರು: ಬೆಳ್ಳಿ ಆಭರಣ ತಯಾರಿಸಿ ಮಾರಾಟ ಮಾಡುತ್ತಿದ್ದ ಅಕ್ಕಸಾಲಿಗ, ಆನ್‌ಲೈನ್‌ನಲ್ಲಿ ಸ್ಕ್ರ್ಯಾಪ್ ತಾಮ್ರವನ್ನು ಖರೀದಿಸಲು ಮುಂದಾಗಿ 2.70 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಬೆಳ್ಳಿ ಆಭರಣ ತಯಾರಿಸುವಾಗ ಅಗತ್ಯವಿದ್ದ ಕಾರಣಕ್ಕೆ ಸ್ಕ್ರ್ಯಾಪ್ ತಾಮ್ರವನ್ನು ಖರೀದಿಸಲು ಆನ್‌ಲೈನ್‌ನಲ್ಲಿ ಹುಡುಕಾಟ ನಡೆಸುತ್ತಿದ್ದಾಗ ಬಿಎಚ್‌ಪಿ ಇಂಟರ್‌ನ್ಯಾಷನಲ್ ಟ್ರೇಡ್ ಕಂಪನಿ ಹೆಸರು ಲಭ್ಯವಾಗಿತ್ತು. ಅದರಲ್ಲಿದ್ದ ಮೊಬೈಲ್ ನಂಬರ್‌ಗೆ ಕರೆ ಮಾಡಿ ವಿಚಾರಿಸಿದಾಗ ಸ್ಕ್ರ್ಯಾಪ್ ತಾಮ್ರ ಪೂರೈಕೆ ಮಾಡುವುದಾಗಿ ಭರವಸೆ ಕೊಟ್ಟು, ನಕಲಿ ಬಿಲ್ ಕಳುಹಿಸಿ ಅಕ್ಕಸಾಲಿಗನಿಂದ 2.70 ಲಕ್ಷ ರೂ. ಪಡೆದುಕೊಂಡಿದ್ದರು.

ಆದರೆ, ಯಾವುದೇ ಸರಕು ಪಾರ್ಸೆಲ್ ಮಾಡಿಲ್ಲ. ವಾಪಸ್ ಕಂಪನಿ ನಂಬರ್‌ಗೆ ಕರೆ ಮಾಡಿದಾಗ ಸಂಪರ್ಕ ಕಡಿತವಾಗಿತ್ತು. ಇದರಿಂದ ಮೋಸಕ್ಕೆ ಒಳಗಾಗಿರುವುದು ಗೊತ್ತಾಗಿ ಉಪ್ಪಾರಪೇಟೆ ಠಾಣೆಗೆ ದೂರು ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.