ನ್ಯೂಸ್

ಸ್ವಾವಲಂಬಿ ಭಾರತಕ್ಕಾಗಿ ಸ್ವದೇಶಿ

kumarvrl

ಪ್ರಧಾನಿ ನರೇಂದ್ರ ಮೋದಿ ಮೇ 12ರಂದು ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ‘ಆತ್ಮನಿರ್ಭರ ಭಾರತ’ದ ಕನಸನ್ನು ಬಿಚ್ಚಿಟ್ಟಿದ್ದಾರೆ. ಆತ್ಮನಿರ್ಭರ ಭಾರತ ಎಂದರೆ ‘ಸ್ವಾವಲಂಬಿ ಭಾರತ’ ಎಂದು ಅರ್ಥ. ಸ್ವಾವಲಂಬನೆಯನ್ನು ಸಾಧಿಸುವ ಮಾರ್ಗ, ಸ್ವದೇಶಿ ಎಂದು ಸಹ ಹೇಳಿದ್ದಾರೆ.

ಏನಿದು ಸ್ವದೇಶಿ?: ಆರ್ಥಿಕ ಆಯಾಮದ ದೃಷ್ಟಿಯಿಂದ ಹೇಳುವುದಾದರೆ, ‘ಶುದ್ಧ ದೇಶಭಕ್ತಿಯ ಪ್ರಕಟಿತ ರೂಪವೇ ಸ್ವದೇಶಿ’. ಸ್ವದೇಶಿ ಎಂಬುದು ಎಲ್ಲ ದೇಶಗಳೊಂದಿಗೆ ಸಂಬಂಧಗಳನ್ನು ಕಡಿದುಕೊಂಡು ಒಂಟಿಯಾಗಿ ಇರುವುದೂ ಅಲ್ಲ. ತನ್ನ ಅಸ್ತಿತ್ವಕ್ಕೆ ಭಂಗ ಬರದಂತೆ ಸಮಾನತೆಯ ಆಧಾರದಲ್ಲಿ ಎಲ್ಲ ದೇಶಗಳೊಂದಿಗೆ ವ್ಯವಹರಿಸುವುದನ್ನು ಸ್ವದೇಶಿ ಬೆಂಬಲಿಸುತ್ತದೆ. ಗಾಂಧೀಜಿ ಹೇಳಿದ್ದರು-‘ನನ್ನ ಮನೆಯೊಳಗೆ ಎಲ್ಲ ಕಿಟಕಿಗಳಿಂದಲೂ ಗಾಳಿ ಬರಲಿ. ಆದರೆ ನನ್ನ ದೇಹವೇ ಆಯ ತಪ್ಪಿ ಕೆಳಗೆ ಬೀಳುವಂಥ ಬಿರುಗಾಳಿ ಅದಾಗದಿರಲಿ’. ಇದು ಸ್ವದೇಶಿ.

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸ್ವದೇಶಿ ಪ್ರಮುಖ ಪಾತ್ರ ವಹಿಸಿದೆ. ಗಾಂಧಿ ಕೈಯಲ್ಲಿ ಸ್ವದೇಶಿ ಸ್ವಾತಂತ್ರ್ಯ ಹೋರಾಟದ ಒಂದು ಪ್ರಬಲ ಅಸ್ತ್ರವಾಗಿ ಬಳಕೆಯಾಯಿತು. ವಿದೇಶಿ ಬಟ್ಟೆಗಳ ಬಹಿಷ್ಕಾರ, ಚರಕಾದಲ್ಲಿ ನೂಲುವುದು ಹಾಗೂ ಖಾದಿ ಬಳಕೆ ಇವು ಸ್ವಾತಂತ್ರ್ಯ ಹೋರಾಟಗಾರರ ಜೀವನದ ಅವಿಭಾಜ್ಯ ಅಂಗವಾಗಿದ್ದವು. ಸ್ವಾತಂತ್ರ್ಯ ಬಂದ ನಂತರ ನೆಹರು ನೇತೃತ್ವದಲ್ಲಿ ಸ್ವದೇಶಿ ಮೂಲೆಗೆ ಬಿತ್ತು.

ಈಗ ಮತ್ತೊಮ್ಮೆ ಸ್ವದೇಶಿ ಹುಟ್ಟಿ ಬಂದಿದೆ. ಅದರ ಹೆಸರು ಸ್ವದೇಶಿ ಜಾಗರಣ ಮಂಚ್. ಸ್ಥಾಪನೆಯಾದದ್ದು 1991ರ ನವೆಂಬರ್ 22ರಂದು. ಸ್ಥಾಪಕರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾಗಿದ್ದ ದತ್ತೋಂಪತ್ ಟೇಂಗಡಿ. 1991ರಲ್ಲೇ ಭಾರತ ಸರ್ಕಾರ ಜಾಗತೀಕರಣ ನೀತಿಯನ್ನು ಅಪ್ಪಿಕೊಂಡಿತು. ಈ ನೀತಿಯ ಪರಿಣಾಮವಾಗಿ ಭಾರತದ ಆರ್ಥಿಕತೆಯ ಮೇಲೆ ಆಗಬಹುದಾದ ದುಷ್ಪರಿಣಾಮಗಳನ್ನು ಸರಿಯಾಗಿಯೇ ಊಹಿಸಿ ಟೇಂಗಡಿಯವರು ಜಾಗತೀಕರಣದ ವಿರುದ್ಧ ಹೋರಾಡುವ ಉದ್ದೇಶದಿಂದ ಸ್ವದೇಶಿ ಜಾಗರಣ ಮಂಚ್ ಎಂಬ ವೇದಿಕೆಯನ್ನು ಸ್ಥಾಪಿಸಿದರು.

ಸ್ವದೇಶಿ ಜಾಗರಣ ಮಂಚ್ ಮೂರು ಧ್ಯೇಯಗಳನ್ನು ಹೊಂದಿದೆ. ಅವು ಸ್ವಾಭಿಮಾನ, ಸ್ವಾವಲಂಬನೆ, ಸಾರ್ವಭೌಮತೆ. ಭಾರತದ ಪ್ರತಿಯೊಬ್ಬ ಪ್ರಜೆಗೆ ತನ್ನ ದೇಶದ ಕೃಷಿ, ಕೈಗಾರಿಕೆ ಹಾಗೂ ಅವುಗಳ ಉತ್ಪನ್ನಗಳ ಬಗ್ಗೆ ಅಭಿಮಾನ ಇರಬೇಕು. ಸಾಧ್ಯವಾದ ಮಟ್ಟಿಗೆ ಭಾರತದಲ್ಲಿ ಉತ್ಪಾದನೆಯಾದ ವಸ್ತುಗಳನ್ನೇ ಬಳಸಬೇಕು. ಸ್ಥಳೀಯ ಉತ್ಪನ್ನಗಳಿಗೆ ಮೊದಲ ಆದ್ಯತೆ. ವಿದೇಶಿ ಕಂಪನಿಗಳಿಗೆ ಮತ್ತು ಆಮದು ಪದಾರ್ಥಗಳಿಗೆ ಬಾಯಿ ಬಿಡಬಾರದು. ಇದು ಸ್ವಾಭಿಮಾನ. ಪ್ರತಿಯೊಬ್ಬ ವ್ಯಕ್ತಿ ಮತ್ತು ಪ್ರತಿಯೊಂದು ಕುಟುಂಬ ಸ್ವದೇಶಿ ವಸ್ತುಗಳ ಬಳಕೆಯ ವ್ರತ ತೊಡಬೇಕು. ಸ್ಥಳೀಯ ವಸ್ತುಗಳ ಬಳಕೆ ಹೆಚ್ಚಿದ ಹಾಗೆಲ್ಲ ಅವು ಬೆಳೆದು ಜಾಗತಿಕ ಬ್ರಾಂಡ್​ಗಳಾಗುತ್ತವೆ. ‘ವೋಕಲ್ ಫಾರ್ ಲೋಕಲ್’, ‘ಲೋಕಲ್ ಸೆ ಗ್ಲೋಬಲ್’ ಎಂದು ಪ್ರಧಾನಿಯವರು ಹೇಳಿದ್ದರ ಅರ್ಥ ಇದೇನೇ.

ಸ್ವಾಭಿಮಾನ ಬೆಳೆದಂತೆ ಸ್ವಾವಲಂಬನೆ ಹೆಚ್ಚುತ್ತ ಹೋಗುತ್ತದೆ. ಪರಾವಲಂಬನೆ ಅತ್ಯಂತ ಅಪಾಯಕಾರಿ. ಸ್ವಾವಲಂಬನೆ ಒಂದು ಪವಿತ್ರ ಧ್ಯೇಯ. ನಮ್ಮ ಆಹಾರ, ಅಗತ್ಯ ವಸ್ತುಗಳು, ತಂತ್ರಜ್ಞಾನ ಎಲ್ಲವನ್ನೂ ನಾವೇ ಉತ್ಪಾದಿಸತೊಡಗಿದರೆ ಭಾರತ ಒಂದು ಸ್ವಾವಲಂಬಿ ರಾಷ್ಟ್ರವಾಗುತ್ತದೆ. ಮೋದಿಯವರು ‘ಆತ್ಮನಿರ್ಭರ ಭಾರತ’ ಎಂದು ಹೇಳುವುದು ಇದನ್ನೇ. ಸ್ವಾವಲಂಬನೆಯ ಸಾಧನೆ ಒಂದು ದೇಶಕ್ಕೆ ಅತ್ಯಂತ ಅಮೂಲ್ಯ ಗುರಿ.

ಸ್ವಾವಲಂಬನೆಯಿಂದ ಭಾರತದ ಆಮದು ಪ್ರಮಾಣ ತೀವ್ರವಾಗಿ ಕಡಿಮೆ ಆಗುತ್ತದೆ ಮತ್ತು ವ್ಯಾಪಾರದ ಕೊರತೆ ಕಡಿಮೆಯಾಗುತ್ತದೆ. 1950ರಿಂದ 2020ರವರೆಗಿನ 70 ವರ್ಷಗಳ ಅವಧಿಯಲ್ಲಿ 68 ವರ್ಷಗಳ ಕಾಲ ನಾವು ವ್ಯಾಪಾರ ಕೊರತೆಯನ್ನು ಅನುಭವಿಸಿದ್ದೇವೆ. ಅಂದರೆ, ಆಮದು ಜಾಸ್ತಿ, ರಫ್ತು ಕಡಿಮೆ. 1991-92ರಲ್ಲಿ ನಮ್ಮ ವ್ಯಾಪಾರದ ಕೊರತೆ 2.6 ಬಿಲಿಯನ್ ಡಾಲರ್ ಆಗಿತ್ತು. 2017-18ಕ್ಕೆ ಅದು 176 ಬಿಲಿಯನ್ ಡಾಲರ್ ಆಯಿತು. ನಮ್ಮ ಶತ್ರುದೇಶ ಚೀನಾ ಜತೆ ವ್ಯಾಪಾರದಲ್ಲಿ ನಮ್ಮ ವ್ಯಾಪಾರ ಕೊರತೆ 2019-20ರಲ್ಲಿ 53 ಬಿಲಿಯನ್ ಡಾಲರ್. ಇದು ಭಾರತದ ಪರಾವಲಂಬನೆಯ ಸ್ಥಿತಿ. ಈ ಸ್ಥಿತಿಯಿಂದ ಪಾರಾಗಿ ಸ್ವಾವಲಂಬನೆಯ ಸ್ಥಿತಿಗೆ ತಲುಪಲು ಸ್ವದೇಶಿ ಅತ್ಯಂತ ಅಗತ್ಯ. ಯಾವ ದೇಶ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸುತ್ತದೋ, ಆ ದೇಶಕ್ಕೆ ಅಂತಾರಾಷ್ಟ್ರೀಯ ಗೌರವ ಹಾಗೂ ಮಾನ್ಯತೆ ದೊರೆಯುತ್ತದೆ. ನಮ್ಮ ತಂಟೆಗೆ ಯಾರೂ ಬರುವುದಿಲ್ಲ. ಆಗ ಭಾರತ ನಿಜವಾಗಿಯೂ ಸಾರ್ವಭೌಮ ರಾಷ್ಟ್ರವಾಗುತ್ತದೆ.

ಸ್ವಾವಲಂಬಿ ಭಾರತದಲ್ಲಿ ಸಣ್ಣ ಉದ್ದಿಮೆಗಳ ಪಾತ್ರ: ಪುರಾತನ ಕಾಲದಿಂದಲೂ ಭಾರತ ಉದ್ಯಮಶೀಲ ರಾಷ್ಟ್ರವಾಗಿದೆ. ಸಮಕಾಲಿನ ಭಾರತದಲ್ಲಿಯೂ ಸಣ್ಣ ಉದ್ದಿಮೆ ಕ್ಷೇತ್ರ ಪ್ರಬಲವಾಗಿಯೇ ಇದೆ. ಈ ಕ್ಷೇತ್ರಕ್ಕೆ MಖMಉ ಎನ್ನುತ್ತಾರೆ. ಅಂದರೆ ಮೈಕ್ರೋ, ಸ್ಮಾಲ್ ಮತ್ತು ಮೀಡಿಯಂ ಎಂಟರ್​ಪ್ರೖೆಸಸ್. ಎನ್​ಎಸ್​ಎಸ್​ಯುು ಸಮೀಕ್ಷೆ ಪ್ರಕಾರ, 2015-16ರಲ್ಲಿ ಭಾರತದಲ್ಲಿ 6 ಕೋಟಿ 34 ಲಕ್ಷ ಸಣ್ಣ ಉದ್ದಿಮೆಗಳು ಇದ್ದವು. ಇವುಗಳಲ್ಲಿ ಶೇಕಡ 99ರಷ್ಟು ಮೈಕ್ರೋ ಅತಿ ಸಣ್ಣ ಉದ್ಯಮಗಳು. ಇವುಗಳಲ್ಲಿ ಶೇಕಡ 51 ಉದ್ಯಮಗಳು ಗ್ರಾಮೀಣ ಪ್ರದೇಶದಲ್ಲೂ ಶೇಕಡ 49 ಉದ್ಯಮಗಳು ನಗರ ಪ್ರದೇಶಗಳಲ್ಲೂ ಇದ್ದವು. ಇವುಗಳಲ್ಲಿ ಶೇ.66 ಉದ್ಯಮಗಳು ಎಸ್.ಸಿ, ಎಸ್.ಟಿ. ಮತ್ತು ಒಬಿಸಿ ವರ್ಗಗಳಿಗೆ ಸೇರಿದವು.

ರಾಷ್ಟ್ರೀಯ ಆದಾಯಕ್ಕೆ ಕಿರು ಉದ್ಯಮಗಳ ಕೊಡುಗೆ ಶೇ.45ರಷ್ಟು. ಶೇ.90ರಷ್ಟು ಉದ್ಯೋಗ ಸೃಷ್ಟಿಯಾಗುವುದು ಇಲ್ಲಿಯೇ. ಭಾರತದ ರಫ್ತು ಕ್ಷೇತ್ರಕ್ಕೆ ಶೇ.50ರಷ್ಟು ಕೊಡುಗೆ ಬರುವುದು ಕಿರು ಉದ್ಯಮ ಕ್ಷೇತ್ರದಿಂದಲೇ. ಆದರೂ ಈವರೆಗೆ ಕಿರು ಉದ್ಯಮ ಕ್ಷೇತ್ರ ಸರ್ಕಾರದ ಹಾಗೂ ಮಾಧ್ಯಮಗಳ ತಿರಸ್ಕಾರಕ್ಕೆ ಪಾತ್ರವಾಗಿವೆ. ಇವು ನಿಜವಾದ ಅರ್ಥದಲ್ಲಿ ಸ್ವದೇಶಿ ಉದ್ಯಮಗಳು. ಮೋದಿಯವರ ಸ್ವಾವಲಂಬಿ ಭಾರತ ಯೋಜನೆಯಲ್ಲಿ ಕಿರು ಉದ್ಯಮ ಕ್ಷೇತ್ರಕ್ಕೆ ಅತಿ ಹೆಚ್ಚಿನ ಮಹತ್ವ ನೀಡಲಾಗಿದೆ. 3 ಲಕ್ಷ ಕೋಟಿ ರೂಪಾಯಿಗಳ ಸಹಾಯಧನವನ್ನು ಎಂಎಸ್​ಎಂಇ ಕ್ಷೇತ್ರಕ್ಕೆ ನೀಡಲಾಗಿದೆ. ಯಾವುದೇ ಭದ್ರತೆ ನೀಡದೆಯೆ ಕಿರು ಉದ್ಯಮಗಳು ಅತಿ ಕಡಿಮೆ ಬಡ್ಡಿದರದ ಬ್ಯಾಂಕ್ ಸಾಲ ಪಡೆಯಬಹುದಾಗಿದೆ. ನಾಲ್ಕು ವರ್ಷಗಳ ಅವಧಿಯಲ್ಲಿ ಸಾಲ ತೀರಿಸಬಹುದಾಗಿದೆ.

ಮೋದಿಯವರ ಸ್ವಾವಲಂಬಿ ಭಾರತ ಯೋಜನೆ ಯಶಸ್ವಿ ಆಗಬೇಕಾದರೆ ಭಾರತದ ಪ್ರತಿಯೊಂದು ಕುಟುಂಬವೂ ಸ್ವದೇಶಿ ಕುಟುಂಬವಾಗಬೇಕಿದೆ. ಸ್ವದೇಶಿ ಬಳಸೋಣ-ಸ್ವದೇಶಿ ಬೆಳೆಸೋಣ. ಸ್ವಾವಲಂಬಿ ಭಾರತ ನಿರ್ವಿುಸೋಣ.

(ಲೇಖಕರು ಸ್ವದೇಶಿ ಜಾಗರಣ ಮಂಚ್ ಪ್ರಮುಖರು, ಆರ್ಥಿಕ ತಜ್ಞರು)