ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಜನವರಿ 16 ರಂದು ತನ್ನ ಬಾಂದ್ರಾ ನಿವಾಸದಲ್ಲಿ ಚಾಕು ದಾಳಿಗೊಳಗಾಗಿದ್ದರು. ಲೀಲಾವತಿ ಆಸ್ಪತ್ರೆಯಲ್ಲಿ ಐದು ದಿನಗಳ ಶಸ್ತ್ರಚಿಕಿತ್ಸೆಯ ನಂತರ ಸೈಫ್ ಅಲಿ ಖಾನ್ Saif Ali Khan) ಅವರನ್ನು ಡಿಶ್ಚಾರ್ಜ್ ಮಾಡಲಾಯಿತು. ಸದ್ಯ ಸೈಫ್ ಗಾಯಗಳಿಂದ ಚೇತರಿಸಿಕೊಂಡಂತಿದೆ. ಸೈಫ್ ಮತ್ತು ಕರೀನಾ ಅವರಿಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ವೈರಲ್ ವಿಡಿಯೋದಲ್ಲಿ ದಾಳಿಗೊಳಗಾದ ಬಳಿಕ ಸೈಫ್ ಅಲಿ ಖಾನ್ ಅವರ ಪತ್ನಿ ಕರೀನಾ ಕಪೂರ್ ಖಾನ್ ಜತೆ ಭಾರೀ ಭದ್ರತೆಯೊಂದಿಗೆ ಭಾನುವಾರ (ಜನವರಿ 26)ತಮ್ಮ ಅಪಾರ್ಟ್ಮೆಂಟ್ನಿಂದ ಹೊರಬರುವುದನ್ನು ನೋಡಬಹುದು. ಭಯಾನಕ ದಾಳಿಯ ಘಟನೆಯ ನಂತರ ಸೈಫ್ ಅವರು ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಕರೀನಾ ಬೂದು ಬಣ್ಣದ ಜಂಪರ್ ಮತ್ತು ಕಪ್ಪು ಪ್ಯಾಂಟ್‌ನೊಂದಿಗೆ ಕ್ಯಾಪ್ ಧರಿಸಿದ್ದರೆ, ಸೈಫ್ ಅಲಿ ಖಾನ್ ನೀಲಿ ಡೆನಿಮ್ ಮತ್ತು ಟಿ-ಶರ್ಟ್‌ನಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡರು. ಈ ವೇಳೆ ಸುತ್ತ ಮುತ್ತ ಬಿಗಿ ಭದ್ರತೆ ಏರ್ಪಡಿಸಿದ್ದು ಎಲ್ಲರ ಗಮನ ಸೆಳೆಯುತ್ತಿದೆ.
ಜನವರಿ 16 ರಂದು ಸೈಫ್ ಅಲಿ ಖಾನ್ ಮೇಲೆ ಹಲ್ಲೆ ನಡೆದ ಘಟನೆ ನಡೆದಿದೆ. ಅಪರಿಚಿತನೊಬ್ಬ ನಟನ ಮನೆಗೆ ನುಗ್ಗಿ ಸೈಫ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಆರು ಬಾರಿ ಇರಿದಿದ್ದಾನೆ. ಈ ದಾಳಿಗಳಲ್ಲಿ ಒಂದು ಅವರ ಬೆನ್ನುಹುರಿಯ ಬಳಿ ನಡೆದಿದೆ, ಇದು ಅತ್ಯಂತ ಅಪಾಯಕಾರಿಯಾಗಿದೆ ಎಂದು ವೈದ್ಯರು ತಿಳಿಸಿದ್ದರು. ಆದರೆ, ಸಮಯಕ್ಕೆ ಸರಿಯಾಗಿ ಸೈಫ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಅವರ ಜೀವವನ್ನು ಉಳಿಸಲಾಯಿತು. ಈ ದಾಳಿಯ ನಂತರ ಪೊಲೀಸರು ದಾಳಿಕೋರನನ್ನು ಬಂಧಿಸಿದ್ದಾರೆ. ಬಾಂಗ್ಲಾದೇಶದ ಪ್ರಜೆ ಶರೀಫುಲ್ ಈ ದಾಳಿಯ ಆರೋಪಿ ಎಂದು ಗುರುತಿಸಲಾಗಿದೆ.(ಏಜೆನ್ಸೀಸ್)