Sai Pallavi Ramayana: ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದಲ್ಲಿ ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಅವರ ಸಿನಿ ಜರ್ನಿಗೆ ಮತ್ತೊಂದು ದೊಡ್ಡ ಮೈಲಿಗಲ್ಲು ಸೇರ್ಪಡೆಯಾಗಿದೆ. ಆದರೆ, ಸಾಯಿ ಪಲ್ಲವಿ ಚಿತ್ರರಂಗಕ್ಕೆ ಬಂದ ಕಥೆಯೇ ಸಖತ್ ಕುತೂಹಲಕಾರಿಯಾಗಿದೆ.
ಸಿನಿಮಾಕ್ಕೆ ಎಂಟ್ರಿ ಕೊಡುವ ಮುನ್ನ ಸಾಯಿ ಪಲ್ಲವಿ ಜಾರ್ಜಿಯಾದಲ್ಲಿ ವೈದ್ಯಕೀಯ ಓದುತ್ತಿದ್ದರು. ಈ ವೇಳೆ ಆನ್‌ಲೈನ್‌ನಲ್ಲಿದ್ದ ಅವರ ಡ್ಯಾನ್ಸ್ ವಿಡಿಯೋ ನಿರ್ದೇಶಕ ಅಲ್ಫೋನ್ಸ್ ಪುತ್ಥರೇನ್ ಅವರ ಗಮನ ಸೆಳೆಯಿತು. ಬಳಿಕ ‘ಪ್ರೇಮಂ’ ಸಿನಿಮಾದ ಮಲರ್ ಪಾತ್ರಕ್ಕೆ ಸಾಯಿ ಪಲ್ಲವಿಯನ್ನು ಸಂಪರ್ಕಿಸಿದ್ದರು.
‘ಪ್ರೇಮಂ’ ಸಿನಿಮಾದ ಆಫರ್‌ಗಾಗಿ ಕರೆ ಬಂದಾಗ ಸಾಯಿ ಪಲ್ಲವಿ ಅದನ್ನು ಪ್ರ್ಯಾಂಕ್ ಅಥವಾ ಸ್ಕ್ಯಾಮ್ ಇರಬಹುದು ಎಂದುಕೊಂಡಿದ್ದರು. ಬಳಿಕ ಚಿತ್ರತಂಡವೇ ಕೊಯಮತ್ತೂರಿಗೆ ತೆರಳಿ ಅವರನ್ನು ಆಡಿಷನ್ ಮಾಡಿದಾಗ ಇದು ನಿಜವಾದ ಸಿನಿಮಾ ಅವಕಾಶ ಎಂಬುದು ಗೊತ್ತಾಯಿತು.
ಇನ್ನು, ಮಲರ್ ಪಾತ್ರಕ್ಕೆ ಆರಂಭದಲ್ಲಿ ನಟಿ ಆಸಿನ್ ಅವರನ್ನು ಆರಿಸಲಾಗಿತ್ತು. ಆದರೆ ನಂತರ ಪಾತ್ರವನ್ನು ತಮಿಳು ಹುಡುಗಿಯಾಗಿ ಬದಲಾಯಿಸಿದ್ದರಿಂದ ಸಾಯಿ ಪಲ್ಲವಿಗೆ ಆ ಪಾತ್ರ ಸೂಕ್ತವಾಯಿತು.
ಸಾಯಿ ಪಲ್ಲವಿಯನ್ನು ನಿರ್ದೇಶಕ ಶೇಖರ್ ಕಮ್ಮುಲಾ ಅವರು ‘ಪ್ರೇಮಂ’ಗೂ ಹಲವು ವರ್ಷಗಳ ಮುನ್ನವೇ ಗಮನಿಸಿದ್ದರು. ‘ಧೀ’ (Dhee) ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಅವರನ್ನು ನೋಡಿ 2012ರ ‘ಲೈಫ್ ಈಸ್ ಬ್ಯೂಟಿಫುಲ್’ ಸಿನಿಮಾದಲ್ಲಿ ಅವಕಾಶ ನೀಡಲು ಮುಂದಾಗಿದ್ದರು. ಆದರೆ ಸಾಯಿ ಪಲ್ಲವಿಯ ತಾಯಿ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಿದ್ದರಿಂದ ಆ ಅವಕಾಶ ಕೈಗೂಡಿರಲಿಲ್ಲ.
ವರ್ಷಗಳ ಬಳಿಕ ಇಬ್ಬರೂ ಮತ್ತೆ ಒಂದಾದರು. ‘ಪ್ರೇಮಂ’ ಮೂಲಕ ಜನಪ್ರಿಯರಾದ ಸಾಯಿ ಪಲ್ಲವಿಯನ್ನು ಕಮ್ಮುಲಾ ‘ಫಿದಾ’ ಸಿನಿಮಾದಲ್ಲಿ ಭಾನುಮತಿಯಾಗಿ ಪಾತ್ರ ಮಾಡಿದರು. ತೆಲಂಗಾಣದ ಹಳ್ಳಿ ಹುಡುಗಿಯ ಪಾತ್ರಕ್ಕಾಗಿ ಅವರು ಅಲ್ಲಿನ ಭಾಷಾ ಶೈಲಿಯನ್ನೂ ಅಭ್ಯಾಸ ಮಾಡಿದ್ದರು. ಈ ಪಾತ್ರ ಸಾಯಿ ಪಲ್ಲವಿಗೆ ಮತ್ತಷ್ಟು ಜನಪ್ರಿಯತೆ ತಂದುಕೊಟ್ಟಿತು.
ಈಗ ಸಾಯಿ ಪಲ್ಲವಿ ‘ರಾಮಾಯಣ’ದಲ್ಲಿ ಸೀತೆಯಾಗಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ‘ರಾಮಾಯಣ: ಪಾರ್ಟ್ 1’ ಸಿನಿಮಾ 2026ರ ನವೆಂಬರ್ 8ರಂದು ದೀಪಾವಳಿಗೆ ತೆರೆಗೆ ಬರಲಿದೆ.(ಏಜೆನ್ಸೀಸ್)