ನ್ಯೂಸ್

ಪವನ್​ ಕಲ್ಯಾಣ್​ ಫ್ಯಾನ್ಸ್​ಗೆ ಕೈಮುಗಿದು ಮನವಿ ಮಾಡಿದ ಸಾಯಿ ಧರಮ್ ತೇಜ್!

ಆಂಧ್ರಪ್ರದೇಶ: ಟಾಲಿವುಡ್​​ನ ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತು ಸಾಯಿ ಧರಮ್ ತೇಜ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ 'ಬ್ರೋ' ಚಿತ್ರದ ರಿಲೀಸ್​ಗೆ ಕ್ಷಣಗಣನೆ ಆರಂಭಗೊಂಡಿದ್ದು, ಈ ಮಧ್ಯೆ ಸಾಯಿ ಅವರು ಅಭಿಮಾನಿಗಳಲ್ಲಿ ಒಂದು ವಿನಂತಿ ಮಾಡಿದ್ದಾರೆ.

ಸಮುದ್ರಕನಿ ನಿರ್ದೇಶನದ ಬಹುನಿರೀಕ್ಷಿತ ತೆಲುಗು ಸಿನಿಮಾ 'ಬ್ರೋ', ನಾಳೆ (ಜುಲೈ 28) ರಂದು ವಿಶ್ವದಾದ್ಯಂತ ಬಹುತೇಕ ಚಿತ್ರಮಂದಿರಗಳಲ್ಲಿ ಭರ್ಜರಿ ಓಪನಿಂಗ್​ ಪಡೆಯಲು ಸಜ್ಜಾಗಿದೆ. ಸದ್ಯ ಸಿನಿಮಾ ಬಿಡುಗಡೆಗೊಳ್ಳಲಿದೆ ಎಂದು ಭಾರೀ ಕುತೂಹಲದಿಂದ ಥಿಯೇಟರ್ ಬಳಿ ಜಮಾಯಿಸಿರುವ ಪವನ್​ ಕಲ್ಯಾಣ್ ಅಭಿಮಾನಿಗಳು, ಬ್ಯಾನರ್​​, ಪೋಸ್ಟರ್​ ಹಾಕುವಲ್ಲಿ ನಿರತರಾಗಿದ್ದಾರೆ.

ಈ ಸಂಗತಿಯನ್ನು ಅರಿತ ಸಾಯಿ ಧರಮ್ ತೇಜ್, ಅಭಿಮಾನಿಗಳು ಬ್ಯಾನರ್ ಮತ್ತು ಕಟೌಟ್‌ಗಳನ್ನು ಹಾಕುವಾಗ ಎಚ್ಚರಿಕೆ ಮತ್ತು ಜವಾಬ್ದಾರಿ ವಹಿಸಿ. ನಿಮ್ಮ ಸುರಕ್ಷತೆಯೇ ನನಗೆ ಜಗತ್ತು, ಸಂಭ್ರಮಾಚರಣೆಯ ಮಧ್ಯೆ ಯಾವುದೇ ಹಾನಿಗೆ ಒಳಗಾಗಬೇಡಿ, ನಾನು ಅದನ್ನು ಸಹಿಸುವುದಿಲ್ಲ ಎಂದು ಒತ್ತಿ ಹೇಳುವ ಮುಖೇನ ಮನವಿ ಮಾಡಿದ್ದಾರೆ. ನಟನ ಈ ಕಾಳಜಿ, ಪ್ರೀತಿಗೆ ಫ್ಯಾನ್ಸ್ ಧನ್ಯವಾದ ಎಂದು ತಿಳಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ​

ಫ್ಯಾಂಟಸಿ ಕಾಮಿಡಿ ಜಾನರ್​ ಹೊಂದಿರುವ ಚಿತ್ರದಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್ ಮತ್ತು ಕೇತಿಕಾ ಶರ್ಮಾ ನಾಯಕಿಯರಾಗಿ ಕಾಣಿಸಿಕೊಂಡಿದ್ದು, ಬ್ರಹ್ಮಾನಂದಂ, ರೋಹಿಣಿ, ವೆನ್ನೆಲಾ ಕಿಶೋರ್, ರಾಜಾ ಚೆಂಬೋಲು ಸೇರಿದಂತೆ ಅನೇಕ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಪೀಪಲ್ ಮೀಡಿಯಾ ಫ್ಯಾಕ್ಟರಿಯ ಟಿಜಿ ವಿಶ್ವ ಪ್ರಸಾದ್ ನಿರ್ಮಾಣದ ಈ ಸಿನಿಮಾಗೆ ಥಮನ್ ಸಂಗೀತ ಸಂಯೋಜನೆ ಮಾಡಿದ್ದಾರೆ,(ಏಜೆನ್ಸೀಸ್).