KPSC  
ನ್ಯೂಸ್

ಮೂರನೇ ವ್ಯಕ್ತಿಯಿಂದ ಡೀಲ್ ಹಣ ಪಡೆಯುತ್ತಿದ್ದ ಸಾಹುಕಾರ್ !

ಕೆಪಿಎಸ್‌ಸಿ ಹಗರಣದ ಆಳಕ್ಕೆ ಇಳಿದ ಇಡಿ, ಸಾಹುಕಾರ್ ಕೈ ಬಿಸಿ ಮಾಡಿದರಷ್ಟೇ ಆಯ್ಕೆಪಟ್ಟಿಯಲ್ಲಿ ಹೆಸರು, ಇನ್ನಷ್ಟು ಮಂದಿ ಬಂಧನವಾಗುವ ಸಾಧ್ಯತೆ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದ ಭ್ರಷ್ಟಾಚಾರ ಕೆದಕುತ್ತಿರುವ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಶಿವಶಂಕರಪ್ಪ ಸಾಹುಕಾರ್ ಡೀಲ್ ಮಾಡಿರುವ ಲಂಚದ ಹಣ ಮೂರನೇ ವ್ಯಕ್ತಿಯಿಂದ ಪಡೆದುಕೊಳ್ಳುತ್ತಿದ್ದ ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.

20ರಿಂದ 50 ಲಕ್ಷ ರೂ. ದವರೆಗೆ ಡಿಮ್ಯಾಂಡ್ ಮಾಡಿರುವ ಹಣವನ್ನು ನೇರವಾಗಿ ತಾನು ಪಡೆಯದೆ, ತನ್ನ ಆಪ್ತ ಸಹಾಯಕನಾಗಿದ್ದ ಮೋಹನ್, ಸಂಬಂಧಿಕರು ಹಾಗೂ ಆಪ್ತರ ಮೂಲಕ ಸ್ವೀಕರಿಸಿಕೊಳ್ಳುತ್ತಿದ್ದರು. ಅಲ್ಲದೆ ಸಾಹುಕಾರ್ ಆಪ್ತೆಯಾಗಿದ್ದ ಸದಸ್ಯೆ ಬಿ.ವಿ.ಗೀತಾಳ ಮೂಲಕವು ಕೆಲ ಅಭ್ಯರ್ಥಿಗಳು ನೀಡಿದ ಲಕ್ಷಾಂತರ ರೂ. ಪಡೆದಿದ್ದಾರೆ ಎಂದು ತನಿಖಾ ಮೂಲಗಳು ತಿಳಿಸಿವೆ.

ಅಕ್ರಮ ಮಾರ್ಗದಲ್ಲಿ ಉದ್ಯೋಗ ಪಡೆದುಕೊಳ್ಳಬೇಕೆಂದು ಬರುವವರಿಗೆ ಸಾಹುಕಾರ ಬರಿ ಕೈ ಮನವಿಗೆ ಕ್ಯಾರೇ ಎನ್ನುತ್ತಿದ್ದರು. ಕೈ ಬಿಸಿ ಮಾಡಿದರೆ ಮಾತ್ರ ಅಂತಹ ಅಭ್ಯರ್ಥಿಗಳ ಮತ್ತು ಆ ಕುಟುಂಬಸ್ಥರ ಆರ್ಥಿಕ ಸ್ಥಿತಿಗತಿ ತಿಳಿದುಕೊಂಡು ಆಯೋಗದ ಆಯ್ಕೆ ಪಟ್ಟಿಯಲ್ಲಿ ಹೆಸರು ಬರುವಂತೆ ನೋಡಿಕೊಳ್ಳುತ್ತಿದ್ದರು. ನೇರವಾಗಿ ಬಂದವರನ್ನು ಆಯೋಗದ ನಿಯಮ ಹಾಗೂ ಅಕ್ರಮ ನಡೆಯುವುದಿಲ್ಲ ಎನ್ನುತ್ತಿದ್ದ ಸಾಹುಕಾರ್, ಮೂರನೇ ವ್ಯಕ್ತಿಯಿಂದ ತನನ್ನು ಸಂಪರ್ಕಿಸಿ ಬಂದರೆ ಅಂತಹವರೊಂದಿಗೆ ಡೀಲ್ ಮುಗಿಸಿಕೊಂಡು ಅವರ ಕೆಲಸ ಮಾಡುತ್ತಿದ್ದರು.

ವಾಟ್ಸ್‌ಪ್‌ನಲ್ಲಿ ಇನ್ನಷ್ಟು ಸಾಕ್ಷ್ಯ ಲಭ್ಯ:

ಪಶುವೈದ್ಯಾಧಿಕಾರಿ ಸೇರಿ ವಿವಿಧ ಇಲಾಖೆ ಹುದ್ದೆಗಳ ನೇಮಕಾತಿ ವೇಳೆಯೂ ನಡೆದಿದೆ ಎನ್ನಲಾದ ಅಕ್ರಮದ ಇನ್ನಷ್ಟು ಸಾಕ್ಷ್ಯಗಳು, ಸಾಹುಕಾರ್ ಪಿಎ ಮೋಹನ್ ಅವರ ಮೊಬೈಲ್‌ನಲ್ಲಿ ಪತ್ತೆಯಾಗಿವೆ. ದಾವಣಗೆರೆ ಮೂಲದ ಮಾಜಿ ಸದಸ್ಯ ಹಾಗೂ ನಿವೃತ್ತ ಎಸಿಪಿ ದುಗ್ಗಪ್ಪ ಅವರು ಕೂಡ ಪಿಎ ಮೋಹನ್ ಜತೆ ಅಭ್ಯರ್ಥಿಗಳ ಹಾಲ್ ಟಿಕೆಟ್, ನೋಂದಣಿ ಸಂಖ್ಯೆ, ಪರೀಕ್ಷೆಯಲ್ಲಿ ಆಯ್ಕೆ ಮಾಡಿಸುವ ಕುರಿತು ಕಳುಹಿರುವ ಸಂದೇಶಗಳು, ಹಣಕಾಸು ವ್ಯವಹಾರದ ಮಾಹಿತಿ ಇ.ಡಿಗೆ ಲಭ್ಯವಾಗಿದೆ. ಈ ಆಧಾರದ ಮೇಲೆ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

ಪಿಎ ಮೋಹನ್ ಸಾಹುಕಾರ್ ಸೂಚನೆಯಂತೆ ಮಧ್ಯವರ್ತಿಗಳು, ಅಭ್ಯರ್ಥಿಗಳ ಪೋಷಕರ ಜತೆ ಸಂಪರ್ಕ ಹೊಂದಿದ್ದ. ಅವರು ನೀಡುವ ಲಂಚದ ಹಣವನ್ನು ಕೆಲ ಬ್ಯಾಂಕ್‌ಗಳ ಮೂಲಕ ಅನಾಮಧೇಯ ಖಾತೆಗಳಿಗೆ ಡೆಪಾಸಿಟ್ ಮಾಡಿರುವ ರಶೀದಿಗಳು ತನಿಖಾಧಿಕಾರಿಗಳಿಗೆ ದೊರೆತಿವೆ.

ಇನ್ನಷ್ಟು ಮಂದಿ ಬಂಧನ:

ಆಯೋಗದ ಮೂಲಕ ನಡೆಯುವ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಸಾಹುಕಾರ್ ಮತ್ತು ಗೀತಾ ಜತೆ ಸಂಪರ್ಕ ಹೊಂದಿರುವ ಇನ್ನಷ್ಟು ಮಂದಿಯನ್ನು ಇ.ಡಿ ಬಂಧಿಸುವ ಸಾಧ್ಯತೆ ಇದೆ. ಹಾಲಿ, ಮಾಜಿ ಸದಸ್ಯರು ಹಾಗೂ ಕೆಲ ಪ್ರಭಾವಿಗಳು ಈ ದಂಧೆಯಲ್ಲಿ ಪಾಲ್ಗೊಂಡಿದ್ದಾರೆ. ಅವರ ಬಗ್ಗೆಯೂ ಇಡಿ ಮಾಹಿತಿ ಸಂಗ್ರಹಿಸಿದೆ. ಈ ಇಬ್ಬರು ಆರೋಪಿಗಳ ಕಸ್ಟಡಿ ಅವಧಿ ಮುಕ್ತಾಯದ ಬಳಿಕ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಿದೆ ಎನ್ನಲಾಗಿದೆ. ಸರಕಾರಿ ನೌಕರಿ ಕೊಡಿಸುವುದಾಗಿ ಅಭ್ಯರ್ಥಿಗಳಿಂದ ಹಣ ಪಡೆದು ಅಕ್ರಮದಲ್ಲಿ ಪಾಲ್ಗೊಂಡಿರುವವರಿಗೆ ಆತಂಕ ಶುರುವಾಗಿದೆ.