ಬೆಂಗಳೂರು: ಕನ್ನಡ ಸಾಹಿತ್ಯ, ಸಂಸ್ಕೃತಿ ಹಾಗೂ ಭಾಷೆಯ ಪ್ರಾಮುಖ್ಯತೆಯನ್ನು ಹೆಸರಿಸಬೇಕಾದ ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನ ರಾಜಕೀಯ ಪ್ರಚಾರಕ್ಕೆ ವೇದಿಕೆಯಾದದ್ದು ಕನ್ನಡಿಗರಿಗೆ ನೋವಿನ ಸಂಗತಿಯಾಗಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ Chalavadi Narayana swamy ಬೇಸರ ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರಿಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ಮಂಡ್ಯದಲ್ಲಿ ಈ ಬಾರಿ ಸಮ್ಮೇಳನ ಇತಿಹಾಸದಲ್ಲಿಯೇ ಅತ್ಯಂತ ವಿಶಿಷ್ಟ ವೇದಿಕೆಯಾಗಬೇಕಾಗಿತ್ತು. ದುರದೃಷ್ಟವಶಾತ್ ಅದರು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಜಕೀಯ ಸಮಾವೇಶವಾಗಿ ಮಾರ್ಪಟ್ಟಿದೆ ಎಂದು ಟೀಕಿಸಿದರು.
ಸಮ್ಮೇಳನಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ ಕನ್ನಡ ಭಾಷೆ ಬೆಳವಣಿಗೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬದಲು ಕೇಂದ್ರ ಸರ್ಕಾರದ ತೆರಿಗೆ ಹಂಚಿಕೆ, ಮನುಸ್ಮತಿ ವಿವಾದಗಳು, ಹಿಂದಿ ಪ್ರಭಾವದ ವಿಚಾರದತ್ತ ಮುಖಮಾಡಿದೆ. ರಾಜಕೀಯ ಚರ್ಚೆಗಳನ್ನು ಸಾಹಿತ್ಯ ಸಮ್ಮೇಳನದ ವೇದಿಕೆಗೆ ತಂದಿರುವುದು ಖಂಡನೀಯ, ವಿಷಾದನೀಯ ಎಂದು ಛಲವಾದಿ ಹೇಳಿದರು.
ಸಾಹಿತ್ಯ ಸಮ್ಮೇಳನವು ಭಾವನೆಗಳ ಮತ್ತು ಚಿಂತನೆಗಳ ವಿನಿಮಯಕ್ಕೆ ಸಾಂಸ್ಕೃತಿಕ ಪೀಠವಾಗಿ ಉಳಿಯಬೇಕಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಜಕೀಯ ಮತ್ತು ಗ್ಯಾರಂಟಿಗಳ ಪ್ರಚಾರಕ್ಕೆ ವೇದಿಕೆಯಾಗಿ ಬಳಸಿಕೊಂಡಿದ್ದು, ಸಮ್ಮೇಳನದ ಮೂಲ ಉದ್ದೇಶಕ್ಕೆ ಧಕ್ಕೆ ತರಲಾಗಿದೆ.
ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಯಲ್ಲಿ ‘ದಿವಾಳಿಯತ್ತ ಭಾರತ’ ಎಂಬ ಪುಸ್ತಕದ ಪ್ರದರ್ಶನ ಉದ್ದೇಶವು ರಾಜಕೀಯ ಪ್ರೇರಿತವಾಗಿ ದಿವಾಳಿ ಎಂಬಂತೆ ದೇಶದ ಸ್ಥಿತಿ ಬಿಂಬಿಸಿ, ಪ್ರಧಾನಿ ಮೋದಿಯವರಿಗೆ ಅಪಮಾನಿಸಲಾಗಿದೆ ಎಂದು ದೂರಿದ್ದಾರೆ.
ಇಂತಹ ಬೆಳವಣಿಗೆಗಳಿಂದ ನನ್ನ ಮನಸ್ಸಿಗೆ ನೋವಾಗಿದೆ. ಈ ರೀತಿಯ ಕ್ರಮಗಳು ಕನ್ನಡ ನಾಡಿನ ಗೌರವಕ್ಕೆ ವಿರೋಧವಾಗಿ ಕೆಲಸ ಮಾಡುತ್ತದೆ ಎಂಬುದು ನನ್ನ ದೃಢ ನಿಲುವು. ಈ ಕಾರಣಕ್ಕೆ ರಾಜಕೀಯಪ್ರೇರಿತ ವೇದಿಕೆ ಹಂಚಿಕೊಳ್ಳದೆ ದೂರ ಉಳಿಯಬೇಕಾಯಿತು ಎಂದು ಸಮಜಾಯಿಷಿ ನೀಡಿದ್ದಾರೆ.
ಸಾಹಿತ್ಯ ಸಮ್ಮೇಳನವು ಕನ್ನಡದ ಬೆಳವಣಿಗೆ, ಸಾಹಿತ್ಯ, ಸಂಸ್ಕೃತಿ ವಿಷಯಗಳಿಗೆ ಮಾತ್ರ ಮೀಸಲಾಗಿ, ಕನ್ನಡಿಗರ ಬದುಕಿಗೆ ಪ್ರೇರಣೆ ನೀಡುವ ರೀತಿಯಲ್ಲಿರಬೇಕು. ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಆಯೋಜಕರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆವಹಿಸಬೇಕು ಎಂದು ಛಲವಾದಿ ನಾರಾಯಣಸ್ವಾಮಿ ಸಲಹೆ ನೀಡಿದ್ದಾರೆ.