ಚಿಕ್ಕಮಗಳೂರು-ಕಡೂರು ಹೆದ್ದಾರಿ ಲಕ್ಯಾ ಕ್ರಾಸ್ ಸಮೀಪ ತಿರುವಿನಲ್ಲಿ ರಸ್ತೆ ಉಬ್ಬುಗಳನ್ನು ನಿರ್ಮಿಸಿ, ಸೂಚನಾ ಫಲಗಳನ್ನು ಅಳವಡಿಸಿರುವುದು. 
ನ್ಯೂಸ್

ಲಕ್ಯಾ ಕ್ರಾಸ್‌ನಲ್ಲಿ ಸುರಕ್ಷತಾ ಕ್ರಮ

ಚಿಕ್ಕಮಗಳೂರು: ಚಿಕ್ಕಮಗಳೂರು-ಕಡೂರು ರಾಷ್ಟ್ರೀಯ ಹೆದ್ದಾರಿಯ ಲಕ್ಯಾ ಕ್ರಾಸ್ ಸಮೀಪ ತಿರುವಿನಲ್ಲಿ ಅಧಿಕಾರಿಗಳು ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದಾರೆ.

ರಸ್ತೆ ಕಾಮಗಾರಿ ಅಪೂರ್ಣಗೊಂಡಿದ್ದು, ಜಲ್ಲಿಕಲ್ಲುಗಳು ಮೇಲೆದ್ದಿದ್ದವು. ಇದರಿಂದ ಆಗಾಗ ಅಪಘಾತಗಳು ಆಗುತ್ತಿದ್ದವು. ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಬಗ್ಗೆ ‘ಲಕ್ಯಾ ಕ್ರಾಸ್‌ನಲ್ಲಿ ಆಂಬುಲೆನ್ಸ್ ಫಿಕ್ಸ್’ ಶೀರ್ಷಿಕೆಯಡಿ ವಿಜಯವಾಣಿ ಆ.27ರ ಸಂಚಿಕೆಯಲ್ಲಿ ವರದಿ ಪ್ರಕಟಿಸಲಾಗಿತ್ತು. ಇದಕ್ಕೆ ಸಂ್ಪದಿಸಿರುವ ಪೊಲೀಸ್ ಇಲಾಖೆ ಹಾಗೂ ಪಿಡಬ್ಲುೃಡಿ ಅಧಿಕಾರಿಗಳು ಸುರಕ್ಷತಾ ಕ್ರಮ ಕೈಗೊಂಡಿದ್ದಾರೆ.
ಚಿಕ್ಕಮಗಳೂರು ಕಡೆ ಹಾಗೂ ಕಡೂರು ಕಡೆ ವೇಗ ನಿಯಂತ್ರಿಕ ಉಬ್ಬುಗಳನ್ನು ನಿರ್ಮಾಣ ಮಾಡಿದ್ದಾರೆ. ಜತೆಗೆ ರಸ್ತೆ ಅಭಿವೃದ್ಧಿಯಾಗದೆ ಇರುವ ಕಡೆ ಗುಂಡಿಗಳಿಗೆ ಜಲ್ಲಿ ಹಾಕಿ ಮುಚ್ಚಿದ್ದು ಸದ್ಯ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಸೂಚನಾ ಫಲಕಗಳನ್ನು ಹಾಗೂ ಬ್ಲಿಂಕ್ ಲೈಟ್‌ಗಳನ್ನು ಅಳವಡಿಸಲಾಗಿದೆ.
ತಿರುವಿನಲ್ಲಿ ಎರಡು ಕಡೆ ರಸ್ತೆ ನಿರ್ಮಾಣಕ್ಕಾಗಿ ಜಾಗ ಸ್ವಾಧೀನವಾಗಿಲ್ಲ. ಈ ಬಗ್ಗೆ ಹಿಂದಿನ ಜಿಲ್ಲಾಧಿಕಾರಿ ಜಮೀನು ಮಾಲೀಕರನ್ನು ಕರೆಯಿಸಿ ಮನವೊಲಿಸಿ ರಸ್ತೆ ನಿರ್ಮಾಣಕ್ಕೆ ಜಾಗ ಬಿಟ್ಟುಕೊಡುವಂತೆ ಕೋರಿದ್ದರು. ಇದಕ್ಕೆ ರೈತರು ಸಹ ಸ್ಪಂದಿಸಿದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಂಡಿಲ್ಲ.
ರಸ್ತೆ ಕಾಮಗಾರಿ ಸ್ಥಗಿತ ಆಗಿರುವುದರಿಂದ ವೇಗವಾಗಿ ಬರುವ ವಾಹನಗಳು ನಿಯಂತ್ರಣ ತಪ್ಪಿ ಅಪಘಾತವಾಗುವ ಸಂಭವವಿರುತ್ತದೆ. ಇದರಿಂದ ವಾಹನ ಸವಾರರು ಎಚ್ಚರಿಕೆಯಿಂದ ವಾಹನಗಳನ್ನು ಚಲಾಯಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಂ ಅಮಟೆ ಸೂಚಿಸಿದ್ದಾರೆ.