ಶ್ರೀ ಶಂಕರ ಭಗವತ್ಪಾದರು ತಮ್ಮ ಭಜಗೋವಿಂದಂ ಸ್ತೋತ್ರದಲ್ಲಿ ಅತ್ಯಂತ ಸ್ಪಷ್ಟವಾಗಿ, ಮನೋಜ್ಞವಾಗಿ ತಿಳಿಸುತ್ತಾರೆ. ‘ಸತ್ಸಂಗತ್ವೇ ನಿಸ್ಸಂಗತ್ವಮ್ ನಿಸ್ಸಂಗತ್ವೇ ನಿಮೋಹತ್ವಮ್ ನಿಮೋಹತ್ವೇ ನಿಶ್ಚಲ ತತ್ತ್ವಮ್ ನಿಶ್ಚಲತತ್ವೇ ಜೀವನ್ಮುಕ್ತಿಃ’ - ಸತ್ಸಂಗದಿಂದ ನಿಸ್ಸಂಗವುಂಟಾಗುತ್ತದೆ, ನಿಸ್ಸಂಗದಿಂದ ಮೋಹವು ಹೋಗುತ್ತದೆ, ಮೋಹವು ಹೊರಟು ಹೋದರೆ ಮನಸ್ಸು ಚಾಂಚಲ್ಯವನ್ನು ಕಳೆದುಕೊಂಡು ಸ್ಥಿರವಾಗುತ್ತದೆ. ಸ್ಥಿರವೂ ಅಚಂಚಲವೂ ಆದ ಮನಸ್ಸು ಜೀವನ್ಮುಕ್ತಿಗೆ ಅರ್ಹತೆಯನ್ನು ಪಡೆದಂತೆಯೇ ಸರಿ. ಸಾಧನಾ ಮಾರ್ಗಕ್ಕೆ ಮೂಲ ಅಡಿಪಾಯವೇ ಶುದ್ಧ ಮನಸ್ಸು, ಅಚಂಚಲ ಮನಸ್ಸು. ಇದು ನಮ್ಮಲ್ಲಿಯೇ ಇವೆ. ಅದನ್ನು ಅರಿಯುವುದೇ ನಿಜವಾದ ಅರ್ಥದಲ್ಲಿ ಸಾಧನೆ. ನಿಜದಲ್ಲಿ ತಿಳಿಸಬೇಕಾದರೆ ಸಾಧಕನ ಆಧ್ಯಾತ್ಮಿಕ ಬೆಳವಣಿಗೆಗೆ ಸಾಧುಸಂಗ, ಸತ್ಸಂಗ ಅತ್ಯವಶ್ಯಕ.
ಯಾರೊಂದಿಗೆ ಸಾಧಕನಾದವನು ಬೆರೆಯಬೇಕು ಎಂಬುದರ ಸೂಕ್ಷ್ಮ ವಿಚಾರವನ್ನು ಅರಿಯಲೇಬೇಕು. ಕಾರಣ, ಅತ್ಯಂತ ತಾಮಸ ಗುಣವುಳ್ಳವರೊಂದಿಗೆ ಬೆರೆತರೆ ಅವನೂ ತಾಮಸಿಯಾಗುತ್ತಾನೆ. ಈ ಕಾರಣದಿಂದ ಸತ್ಸಂಗ, ಸಾಧುಸಂಗ, ಜೀವನದಲ್ಲಿ ಆವಶ್ಯಕ. ಅದರಲ್ಲಿಯೂ ಆಧ್ಯಾತ್ಮ ಜೀವಿಗೆ ಸತ್ಸಂಗ ಅತ್ಯಂತ ಅವಶ್ಯಕ. ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರು ಸತ್ಸಂಗದ ಮಹಿಮೆಯನ್ನು ಭೋಧಿಸುತ್ತಿದ್ದರು.
ಭಕ್ತ2 : ದಾರಿಯೇನು? ಶ್ರೀರಾಮಕೃಷ್ಣರು ಪ್ರಾರ್ಥನೆ ಮತ್ತು ಸಾಧುಸಂಗ. ನಿಮಗೆ ಕಾಯಿಲೆಯಾದರೆ ವೈದ್ಯನ ಸಹಾಯ ಬೇಕೇಬೇಕು. ಯಾವಾಗಲೋ ಒಂದು ದಿನ ಸತ್ಸಂಗ, ಸಾಧುಸಂಗ ಮಾಡಿದರೆ ಸಾಲದು. ನೀವು ಯಾವಾಗಲೂ ಅದನ್ನು ಅರಸಬೇಕು. ಏಕೆಂದರೆ ರೋಗ ದೀರ್ಘಕಾಲದಿಂದ ಇದೆ. ಮತ್ತೆ ವೈದ್ಯನೊಡನೆ ವಾಸಿಸದಿದ್ದರೆ ನಾಡಿ, ದೇಹಸ್ಥಿತಿ ಅರಿಯುವುದು ದುಸ್ತರ ಎಂದು.
ವ್ಯಾಕುಲತೆ ಇಲ್ಲದೆ ಆಧ್ಯಾತ್ಮಿಕ ಜೀವನದಲ್ಲಿ ಏನನ್ನೂ ಸಾಧಿಸಲಾಗುವುದಿಲ್ಲ. ನಿರಂತರವಾಗಿ ಸಾಧುಸಂಗ, ಸತ್ಸಂಗದಲ್ಲಿರುವುದರಿಂದ ಜೀವ ಭಗವಂತನಿಗಾಗಿ ತವಕಿಸುವುದು. ಸಾಧುಸಂಗದಿಂದ ಇನ್ನೊಂದು ಪ್ರಯೋಜನವಿದೆ. ಸತ್ಯಾಸತ್ಯ ವಿವೇಚನೆಯನ್ನು ಬೆಳೆಸಿಕೊಳ್ಳಲು ಅದು ಸಹಾಯಕವಾಗುವುದು. ಭಗವಂತನು ಮಾತ್ರ ಸತ್ಯ, ಅವನೇ ಶಾಶ್ವತ ವಸ್ತು ಮತ್ತು ಪ್ರಪಂಚ ಅವಸ್ತು, ಕ್ಷಣಿಕ. ಅಂದರೆ ಸಾಧುಸಂಗ, ಸತ್ಸಂಗ ನಮ್ಮಲ್ಲಿ ತ್ಯಾಗ ಬುದ್ದಿಯನ್ನು ಬೆಳೆಸುತ್ತದೆ. ಸರ್ವಸಂಗ ಪರಿತ್ಯಾಗಿ ಸಾಧುಗಳ ಜತೆ ವಾಸಿಸಿದರೆ ಇತರರು ತ್ಯಾಗದ ಮಹಿಮೆಯನ್ನು ಅರಿತು ಅದನ್ನು ಅಭ್ಯಸಿಸುವ ಶಕ್ತಿಯನ್ನು ಪಡೆಯುತ್ತಾರೆ.
ಆಧ್ಯಾತ್ಮಿಕ ವ್ಯಕ್ತಿಗಳ ಸಂಗ ದೊರೆಯದಿದ್ದರೆ ಮೂರ್ಖರ, ಪ್ರಾಪಂಚಿಕರ ಸಂಗ ಪಡೆಯುವುದು ಸಲ್ಲ. ಸದಾ ಸಾಧುಸಂಗ, ಸತ್ಸಂಗದಲ್ಲಿರುವಂತೆಯೇ ಪ್ರಯತ್ನಿಸಬೇಕು. ಕಾರಣ, ಈ ಪ್ರಪಂಚದಲ್ಲಿ ಅಂತಹ ಸತ್ಪುರುಷರು, ಸಾಧುಗಳು, ಸಂತರು ದೊರೆಯುವುದು ತೀರಾ ವಿರಳ. ಆಧ್ಯಾತ್ಮಿಕ ಪ್ರಗತಿಯ ಒಂದು ಮುಖ್ಯ ಗುಣವೆಂದರೆ ಭಕ್ತನು, ಸಾಧಕನು ಭಗವದ್ ವಿಷಯವಲ್ಲದೆ, ಆಧ್ಯಾತ್ಮಿಕ ವಿಷಯವಲ್ಲದೆ ಬೇರೇನೂ ಕೇಳಲು ಇಷ್ಟಪಡುವುದಿಲ್ಲ. ಕೇವಲ ಭಗವದ್ ಚಿಂತನೆ ಹಾಗೂ ಭಗವತ್ ಪ್ರೇಮದ ಬಗ್ಗೆ ಅರಿಯಲು ಕಾತರನಾಗಿರಬೇಕು. ದುರದೃಷ್ಟದಿಂದ ಇತ್ತೀಚಿನ ಸ್ಥಿತಿಯಲ್ಲಿ ಕೇವಲ ಪ್ರಾಪಂಚಿಕರ ಸಂಗ, ಪ್ರಾಪಂಚಿಕರ ಸಂಭಾಷಣೆ ಇತ್ಯಾದಿಗಳು ಯಥೇಚ್ಛವಾಗಿ ಲಭ್ಯವಾಗುತ್ತದೆ.
ಆದರೆ ಸತ್ಸಂಗ, ಸಾಧುಸಂಗ, ತೀವ್ರ ದುಃಸ್ತರವಾಗಿ ದೊರೆಯುತ್ತದೆ. ಆಧ್ಯಾತ್ಮಿಕ ಜೀವಿಗಳು ಅತ್ಯಂತ ಎಚ್ಚರದಿಂದಿರಬೇಕಾಗಿದೆ. ಪ್ರಾಪಂಚಿಕ ವ್ಯಕ್ತಿಗಳು ಎಷ್ಟೇ ಜಾಣರಾಗಿದ್ದರೂ, ಪ್ರತಿಭಾವಂತರಾಗಿದ್ದರೂ, ಅಜ್ಞಾನಿಗಳು, ಅಧ್ಯಾತ್ಮ ಸಾಧಕನು ಅಂತಹ ಮೂರ್ಖರೊಡನೆ ಸಂಪರ್ಕ ಹೊಂದದೆ ಸಾಧು ಸಂಗ, ಸತ್ಸಂಗಗಳಲ್ಲಿ ತೊಡಗಬೇಕು. ಪರಮಹಂಸರು ಸತ್ಸಂಗ ಹಾಗೂ ಸಾಧುಸಂಗಕ್ಕೆ ಅತ್ಯಂತ ವಿಶಿಷ್ಟವಾದ ಸ್ಥಾನವನ್ನು ನೀಡಿದ್ದರು. ಅವರು ಒಂದು ವೇಳೆ ಯಾರಾದರೂ ಪ್ರಾಪಂಚಿಕರು ತೀವ್ರತರವಾದ ಅರಿಷಡ್ವರ್ಗಗಳಲ್ಲಿ ಮುಳುಗಿದ್ದು ಪರಮಹಂಸರ ಬಳಿ ಬಂದು ನಮಸ್ಕರಿಸಿ ಹೊರಟಾಗ ಪರಮಹಂಸರು ತತ್ಕ್ಷಣ ಗಂಗಾ ಜಲದಿಂದ ತಮ್ಮ ಪಾದಗಳನ್ನು ಶುದ್ಧಗೊಳಿಸುತ್ತಿದ್ದರು.
ಕಾರಣವೇನೆಂದರೆ, ಅತ್ಯಂತ ಪರಿಣಾಮಕಾರಿಯಾಗಿ ಸಂಸಾರ ಹಾಗೂ ಪ್ರಾಪಂಚಿಕತೆಯಲ್ಲಿ ಮುಳುಗಿದ್ದು ಅಪ್ಪಿತಪ್ಪಿಯೂ ಸಾಧುಸಂಗ, ಸಜ್ಜನರ ಸಹವಾಸ ಇಲ್ಲದೆ ಸದಾ ವಿಷಯಿಗಳ ಮಧ್ಯೆ ಜೀವನ ನಡೆಸುತ್ತಿದ್ದವರ ವ್ಯಕ್ತಿತ್ವದಲ್ಲಿ ಭಯಾನಕವಾದ ತಾಮಸಿಕ ತರಂಗ ಸ್ಪಂದಿಸುತ್ತಿರುತ್ತದೆ. ಹಾಗಾಗಿ ಅಂತಹ ವ್ಯಕ್ತಿಗಳ ಸಹವಾಸ ಮಾಡಿದಾಗ ಶುದ್ಧ ಹಾಗೂ ಸಾತ್ವಿಕ ಮನಸ್ಸುಳ್ಳ ವ್ಯಕ್ತಿಯೂ ಪ್ರಾಪಂಚಿಕದ ಸುಳಿಯಲ್ಲಿ ಸಿಲುಕಿ ಪಡಬಾರದ ಕಷ್ಟ ನಷ್ಟಗಳನ್ನು ಹೊಂದಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಮಕೃಷ್ಣರು ಎಚ್ಚರಿಸಿದಂತೆ ಸಾಧುಸಂಗ, ಸತ್ಸಂಗ, ಜೀವನದ ಒಂದು ಅವಿಭಾಜ್ಯ ಅಂಗವಾಗಬೇಕಿದೆ. (ಲೇಖಕರು ಶ್ರೀ ರಾಮಕೃಷ್ಣ ಸೇವಾಶ್ರಮ, ಪಾವಗಡದ ಅಧ್ಯಕ್ಷರು, ಪ್ರತಿಕ್ರಿಯಿಸಿ: vvsudina@gmail.com, swajapa@gmail.com)