Train: ಝಾನ್ಸಿ ನಿಲ್ದಾಣದಿಂದ ದಾಬ್ರಾ ಮಾರ್ಗದ ಮೂಲಕ ಹಾದುಹೋಗುವ ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಇಬ್ಬರು ಸಾಧುಗಳು ಸಿಕ್ಕಿಬಿದ್ದಿದ್ದಾರೆ. ಇವರ ಬಳಿ ಟಿಕೆಟ್ ಕೇಳಲು ಬಂದ ಟಿಟಿ ಬಳಿ ನಾವು ಸಂತರು ಸ್ವಾಮಿ, ಟಿಕೆಟ್ ಪಡೆಯಲು ನಮ್ಮ ಬಳಿ ಹಣ ಎಲ್ಲಿಂದ ಬರುತ್ತೆ ಎಂದು ಸಾಧುಗಳು ಉತ್ತರಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ಕೈಯಲ್ಲಿದ್ದ ಫೋನ್ ನೋಡಿದ ಟಿಟಿ ಅಧಿಕಾರಿ ಶಾಕ್ ಆಗಿದ್ದಾರೆ.
ಭಾರತೀಯ ರೈಲ್ವೆ ಪ್ರಯಾಣಿಕರು ಟಿಕೆಟ್ ಪ್ರಯಾಣಿಸುವುದನ್ನು ತಡೆಯಲು ನಿಯಮಿತವಾಗಿ ರೈಲ್ವೆ ಇಲಾಖೆ ಕಾರ್ಯಾಚರಣೆಗಳನ್ನು ನಡೆಸುತ್ತದೆ. ಈ ಸಂದರ್ಭದಲ್ಲಿ ಝಾನ್ಸಿ ವಿಭಾಗದ ದಾಬ್ರಾ ನಿಲ್ದಾಣದ ಮೂಲಕ ಹಾದುಹೋಗುವ ರೈಲುಗಳಲ್ಲಿ ಶೋಧ ನಡೆಸಿದ ಸಂದರ್ಭದಲ್ಲಿ ಈ ಸಾಧುಗಳು ಸಿಕ್ಕಿಬಿದ್ದಿದ್ದಾರೆ.
ರೈಲಿನಲ್ಲಿ ಕುಳಿತ್ತಿದ್ದ ಇಬ್ಬರು ಸಂತರು ಕೇಸರಿ ಬಟ್ಟೆಗಳನ್ನು ಧರಿಸಿಕೊಂಡು, ಉದ್ದನೆಯ ಗಡ್ಡದ ಜೊತೆ ಕೈಯಲ್ಲಿ ಹಾರವನ್ನು ಹಿಡಿದು ಧ್ಯಾನಸ್ಥರಾಗಿ ಕುಳಿತ್ತಿದ್ದರಂತೆ. ಈ ಸಂದರ್ಭದಲ್ಲಿ ಅವರ ಬಳಿ ಬಂದ ಟಿಟಿ, ನಿಮ್ಮ ಟಿಕೆಟ್ ತೋರಿಸಿ ಎಂದು ಕೇಳಿದಾಗ ಸಾಧುಗಳು ಟಿಕೆಟ್ ಇಲ್ಲದೆ ಪ್ರಯಾಣ ಮಾಡುತ್ತಿರೋದು ಬೆಳಕಿಗೆ ಬಂದಿದೆ. ಇದನ್ನು ಗಮನಿಸಿದ ಟಿಟಿ ಅಧಿಕಾರಿ ಮೊದಲಿಗೆ ಪಾಪ ಸಂತರು ಬಿಟ್ಟುಬಿಡೋಣ ಎನ್ನುವ ಯೋಚನೆಯಲ್ಲೇ ಇದ್ದರಂತೆ. ಆದರೆ ಸಾಧುಗಳ ಕೈಯಲ್ಲಿದ್ದ ಸ್ಮಾರ್ಟ್ ಫೋನ್ಅನ್ನು ಗಮನಿಸಿದ ಅಧಿಕಾರಿ ಒಂದು ಕ್ಷಣ ಶಾಕ್ ಆಗಿದ್ದಾರೆ.
ನಿಮಗೆ ದುಬಾರಿ ಮೊಬೈಲ್ ಫೋನ್ ಖರೀದಿಸಲು ಹಣವಿದೆ ಆದ್ರೆ ಟಿಕೆಟ್ ಖರೀದಿಸಲು ಹಣವಿಲ್ಲವೇ ಎಂದು ಸಾಧುಗಳಿಗೆ ರೈಲಿನ ಟಿಟಿ ಪ್ರಶ್ನಿಸಿದ್ದಾರೆ. ಮೊದಲಿಗೆ ಸಂತರು ನಾನಾ ನೆಪಗಳನ್ನು ಹೇಳುವ ಮೂಲಕ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಟಿಟಿ ಅಧಿಕಾರಿ ಸಾಧುಗಳ ಮೇಲೆ ದಂಡ ಕಟ್ಟುವಂತೆ ಒತ್ತಾಯ ಮಾಡಿದಾಗ ಅವರು ತಮ್ಮ ಬಳಿಯಿಂದ ಹಣ ತೆಗೆದು ದಂಡ ಕಟ್ಟಿದ್ದಾರೆ.
ಟಿಕೆಟ್ ರಹಿತ ಪ್ರಯಾಣ ಅಥವಾ ಅನಿಯಮಿತ ಟಿಕೆಟ್‌ಗಳೊಂದಿಗೆ ಪ್ರಯಾಣಿಸುವುದನ್ನು ತಡೆಯಲು ಭಾರತೀಯ ರೈಲ್ವೆ ನಿಯಮಿತವಾಗಿ ಕಾರ್ಯಾಚರಣೆಗಳನ್ನು ನಡೆಸುತ್ತದೆ. ಈ ಘಟನೆಯ ನಂತರವೂ ರೈಲಿನಲ್ಲಿ ಶೋಧ ಕಾರ್ಯ ಮುಂದುವರೆಸಲಾಗಿದೆ. ಟಿಕೆಟ್ ಇಲ್ಲದೆ ಪ್ರಯಾಣಿಸಿದ್ದಕ್ಕಾಗಿ, ಬುಕ್ ಮಾಡದ ಸಾಮಾನುಗಳನ್ನು ಸಾಗಿಸಿದ್ದಕ್ಕಾಗಿ ಅಥವಾ ಪ್ಲಾಟ್‌ಫಾರ್ಮ್‌ನಲ್ಲಿ ಕಸ ಹಾಕಿದ್ದಕ್ಕಾಗಿ ಹಲವಾರು ಪ್ರಯಾಣಿಕರಿಗೆ ದಂಡ ವಿಧಿಸಲಾಗಿದೆ. ಒಟ್ಟು 155 ಪ್ರಯಾಣಿಕರಿಗೆ ತಲಾ 74 ರೂ. ದಂಡ ವಿಧಿಸಲಾಗಿದೆ. ಕಾಯ್ದಿರಿಸಿದ ಟಿಕೆಟ್ ಹೊಂದಿರುವವರ ಅನುಕೂಲವನ್ನು ಖಚಿತಪಡಿಸಿಕೊಳ್ಳಲು ಮತ್ತು ರೈಲ್ವೆ ಆದಾಯವನ್ನು ಹೆಚ್ಚಿಸಲು ಈ ಕಾರ್ಯಾಚರಣೆಗಳನ್ನು ನಡೆಸಲಾಗುತ್ತದೆ ಎಂದು ಭಾರತೀಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.