ನ್ಯೂಸ್

ಪರಪ್ಪನ ಅಗ್ರಹಾರ ಜೈಲಿಗೆ ಬಂದ ಸಾಧು ಕೋಕಿಲ ವಾಪಾಸ್​! ದರ್ಶನ್​ ಮನವಿ ಮೇರೆಗೆ ಮನೆಗೆ ಹಿಂತಿರುಗಿದ ನಟ

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಸದ್ಯ ಜೈಲುಪಾಲಾಗಿರುವ ಸ್ಯಾಂಡಲ್​ವುಡ್​ ನಟ ದರ್ಶನ್ ಮತ್ತು ಆತನ ಸಹಚರರು ಕಳೆದ ಒಂದು ತಿಂಗಳಿನಿಂದ ಪರಪ್ಪನ ಜೈಲಿನಲ್ಲಿದ್ದಾರೆ. ನಟನನ್ನು ನೋಡಲು ಚಿತ್ರರಂಗದ ಕಲಾವಿದರು ಸೇರಿದಂತೆ ಅನೇಕರು ಪರಪ್ಪನ ಅಗ್ರಹಾರಕ್ಕೆ ಧಾವಿಸುತ್ತಿದ್ದಾರೆ. ಆದರೆ, ಜೈಲಿನ ನಿಯಮದ ಪ್ರಕಾರ, ವಾರದಲ್ಲಿ ಎರಡು ಬಾರಿ ಮಾತ್ರ ದರ್ಶನ್​ರನ್ನು ನೋಡಲು ಸಾಧ್ಯ. ಹೀಗಾಗಿ ದರ್ಶನ್​ರ ಕುಟುಂಬಸ್ಥರಿಗೆ ಮೊದಲ ಆದ್ಯತೆ ಇದ್ದು, ಉಳಿದವರು ತಮಗೆ ಸಿಕ್ಕ ಸಮಯದಲ್ಲಿ ಬರಬಹುದು ಇಲ್ಲವಾದಲ್ಲಿ ಅವರ ಕುಟುಂಬಸ್ಥರೊಡನೆ ಬರಬಹದು. ಇದೀಗ ಇದೇ ರೀತಿ ಹಾಸ್ಯ ಕಲಾವಿದ ಸಾಧು ಕೋಕಿಲ ಅವರಿಗೂ ಎದುರಾಗಿದೆ.

ಇಂದು ಬೆಳಗ್ಗೆಯೇ ಆರೋಪಿ ದರ್ಶನ್​ರನ್ನು ಭೇಟಿಯಾಗಲು ಬಂದ ಸಾಧು ಕೋಕಿಲ ಅವರ ಪ್ರವೇಶಕ್ಕೆ ನಿರಾಕರಣೆ ಕೇಳಿಬಂದಿದೆ. ವಾರಕ್ಕೆ ಕೇವಲ ಎರಡು ಭೇಟಿ ಹಿನ್ನೆಲೆ ಗುರುವಾರ ತಮ್ಮ ಕುಟುಂಬದವರ ಜತೆ ಭೇಟಿಗೆ ಬರುವಂತೆ ದರ್ಶನ್​ ಸಾಧು ಅವರಲ್ಲಿ ಮನವಿ ಮಾಡಿದ್ದಾರೆ. ದರ್ಶನ್ ಮನವಿಯ ಮೇರೆಗೆ ಸಾಧು ಕೋಕಿಲ ಅಲ್ಲಿಂದ ವಾಪಾಸ್ ಆಗಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿದ ನಟ, ನಾನು ಇಂದು ಭೇಟಿ ಮಾಡಿದರೆ ದರ್ಶನ್ ಅವರ ಕುಟುಂಬದವರಿಗೆ ಅವಕಾಶ ಇರುವುದಿಲ್ಲ. ಹೀಗಾಗಿ ನಾನು ಗುರುವಾರ ಕುಟುಂಬದವರ ಜೊತೆ ಭೇಟಿ ಮಾಡ್ತೇನೆ. ಮೀಡಿಯಾದವರು ವಿಡಿಯೋ ‌ಮಾಡಿದ್ದರಿಂದ ನನ್ನನ್ನು ಹೊರಗೆ ಕಳುಹಿಸಿಬಿಟ್ಟರು ಎಂದು ನಗು ನಗುತ್ತಲೇ ಹೇಳಿದರು.