| ವೀರಣ್ಣ ಜಿ. ಕೊಯಮತ್ತೂರು
ಮನುಕುಲಕ್ಕೆ ಅಗತ್ಯ ಇರುವ ಮಣ್ಣಿನ ಸಂರಕ್ಷಣೆ ಜಾಗೃತಿಗಾಗಿ ಲಂಡನ್ ನಗರದಿಂದ ಕಾವೇರಿ ಪ್ರದೇಶದವರೆಗೆ ಬೈಕ್ ಯಾತ್ರೆ ನಡೆಸಲು ಈಶ ಫೌಂಡೇಷನ್ ಮುಖ್ಯಸ್ಥ, ಆಧ್ಯಾತ್ಮ ಸಂತ ಸದ್ಗುರು ನಿರ್ಧರಿಸಿದ್ದಾರೆ. ಮಾರ್ಚ್ 21ರಿಂದ ಯಾತ್ರೆ ಆರಂಭವಾಗಲಿದೆ.
ಪ್ರತಿ ವರ್ಷದಂತೆ ಅಹೋರಾತ್ರಿ ಶಿವರಾತ್ರಿ ಆಚರಣೆಯ ಅಂಗವಾಗಿ ಮಂಗಳವಾರ (ಮಾ.2) ನಡೆದ ಭಕ್ತಿಪೂರ್ವಕ ಅದ್ದೂರಿ ಕಾರ್ಯಕ್ರಮದ ಆರಂಭದಲ್ಲಿ ನೆರೆದಿದ್ದ ಲಕ್ಷಾಂತರ ಆಸ್ತಿಕರು, ಆಸಕ್ತರು ಮತ್ತು ಅನುಯಾಯಿಗಳೊಂದಿಗೆ ಈ ವಿಷಯವನ್ನು ಹಂಚಿಕೊಂಡರು. ಬೇಕಾಬಿಟ್ಟಿಯಾಗಿ ಜನರು ಭೂಮಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಮುಂದಿನ 50-60 ಸುಗ್ಗಿಗಳ ನಂತರ ಮಣ್ಣಿನ ಅಸ್ತಿತ್ವವೇ ನಾಶವಾದೀತು ಎಂದು ಎಚ್ಚರಿಸಿರುವ ಅವರು, ಸುಮಾರು ನೂರು ದಿನಗಳ ಬೈಕ್ ಯಾತ್ರೆ 35 ಸಾವಿರ ಕಿಲೋಮೀಟರ್ ಸಾಗಲಿದ್ದು, ಎಲ್ಲ ದೇಶಗಳಲ್ಲಿ ಮಣ್ಣಿನ ಕುರಿತಾದ ಜಾಗೃತಿ ಮೂಡಿಸುವುದಾಗಿ ಹೇಳಿದರು. ಯಾತ್ರೆಯು ಕಾವೇರಿ ಪ್ರದೇಶ ತಲುಪಿದ ಬಳಿಕ ಒಂಬತ್ತು ಜಿಲ್ಲೆಗಳ ವ್ಯಾಪ್ತಿಯ 1,795 ಗ್ರಾಮಪಂಚಾಯಿತಿಗಳಲ್ಲಿ ತಿಳಿವಳಿಕೆ ಮೂಡಿಸುವ ಕಾರ್ಯಕ್ರಮದ ವಿವರಗಳನ್ನು ವಿವರಿಸಿದರು.
ಮಣ್ಣಿನ ಹೊರತು ಜಗತ್ತಿನಲ್ಲಿ ಮನುಕುಲವನ್ನು ರಕ್ಷಿಸುವ ಶಕ್ತಿ ಯಾವುದೂ ಇಲ್ಲ ಎಂದು ಸದ್ಗುರು ಪ್ರತಿಪಾದಿಸಿದರು. ಬೈಕ್ ರ‍್ಯಾಲಿ ನಡೆಯುವ ಅವಧಿಯಲ್ಲಿ ಎಲ್ಲರೂ ಜಾಲತಾಣಗಳ ಮೂಲಕ ಮಣ್ಣಿನ ಸುರಕ್ಷೆಯ ತಿಳಿವಳಿಕೆ ಮೂಡಿಸಬೇಕೆಂದು ಕೋರಿದರು. ಮಣ್ಣು ರಕ್ಷಣೆಯೇ ಇನ್ನು ಮುಂದೆ ಎಲ್ಲ ದೇಶಗಳಲ್ಲಿನ ಎಲ್ಲ ಪಕ್ಷಗಳ ಚುನಾವಣೆಯ ಅನಿವಾರ್ಯ ಪ್ರಣಾಳಿಕೆಯಾಗಲಿದೆ. ನಮಗಾಗಿ, ನಮ್ಮ ಮುಂದಿನ ಪೀಳಿಗೆಗಾಗಿ ಮತ್ತು ಅದರ ನಂತರದ ಸಂತತಿಗಾಗಿಯೂ ಭೂಮಿಯ ಫಲವತ್ತತೆ ಉಳಿಸುವ, ಬೆಳೆಸುವ ಹೊಣೆ ನಮ್ಮ ಮೇಲಿದೆ ಎಂದು ಯೋಗಿ ಸದ್ಗುರು ಹೇಳಿದರು. ಪ್ರತಿ ವರ್ಷ ಲಕ್ಷಾಂತರ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅದರ ಕಾರಣಗಳನ್ನು ವಿವಿಧ ರೀತಿಯಲ್ಲಿ ವ್ಯಾಖ್ಯಾನಿಸಲಾಗುತ್ತಿದೆಯಾದರೂ ಅದರ ಮೂಲ ಕಾರಣ ಮಣ್ಣನ್ನು ನಾವು ಶತಮಾನಗಳಿಂದ ಶೋಷಿಸಿದ್ದೇ ಆಗಿದೆ. ಕೃಷಿಕ ಸಮುದಾಯಕ್ಕೆ ಗುಣಮಟ್ಟದ ಭೂಮಿ ಸಿಗುವುದಾದಲ್ಲಿ ಉತ್ತಮ ಆಹಾರ, ಪೌಷ್ಟಿಕಾಂಶ ಸಿಗುವುದರಲ್ಲಿ ಅನುಮಾನವಿಲ್ಲ. ನಾವು ಅದನ್ನು ಆಗುವಂತೆ ಮಾಡೋಣ ಎಂದು ಅವರು ಕೈಜೋಡಿಸಿ ಕಣ್ಣುಗಳನ್ನು ಒರೆಸಿಕೊಂಡರು.
ಅದ್ದೂರಿ ಶಿವರಾತ್ರಿ: ತಮಿಳುನಾಡಿನ ಜವಳಿನಗರಿ ಕೊಯಮತ್ತೂರಿನಿಂದ ಅನತಿ ದೂರದ ವೆಳ್ಳಿಂಗಿರಿಯಲ್ಲಿ ಮೈದಾಳಿರುವ ಈಶ ಯೋಗ ಮತ್ತು ಧ್ಯಾನ ಕೇಂದ್ರದಲ್ಲಿ ಶಿವರಾತ್ರಿಯಂದು ಹಲವು ಲಕ್ಷ ಜನರು ನೆರೆದಿದ್ದರು. ಬುಧವಾರ ಬೆಳಗಿನವರೆಗೆ ನಿರಂತರವಾಗಿ ನಡೆದ ಕಾರ್ಯಕ್ರಮದಲ್ಲಿ ಭಕ್ತಿಪ್ರಧಾನ ಸಂಗೀತದ ಓಂಕಾರ ನಿನಾದದ ರಸದೌತಣ ಹರಿಯಿತು. 112 ಅಡಿ ಎತ್ತರದ ಶಿವ ಮೂರ್ತಿಯ ಪದತಳದಲ್ಲಿ ದೇಶದ ಪ್ರಮುಖ ಗಾಯಕರು ಸಾಂಸ್ಕೃತಿಕ-ಸಂಗೀತ ಮೇಳೈಸಿದ ಸುಧೆ ಹರಿಸಿದರು. ಪಾಪೋನ್, ಸಲೀಂ, ಹಂಸರಾಜ್ ರಘುವಂಶಿ, ರಾ. ರಾಜಾರಾವ್ ಮೊದಲಾದ ಹೆಸರಾಂತ ಗಾಯಕರು, ಸಂಗೀತ ದಿಗ್ದರ್ಶಕರ ಧ್ವನಿಗೆ ಲಕ್ಷಾಂತರ ಜನರು ಓಗೊಟ್ಟರು. ಪರದೆಗಳಲ್ಲಿಯೂ ಮೂಡಿಬಂದ ವೈವಿಧ್ಯ ಕಣ್ತುಂಬಿಕೊಂಡವರು ಕೂಡ ಅಲ್ಲಿಂದಲೇ ನೃತ್ಯ ಮಾಡಿದರು. ಧ್ವನಿಗೆ ಪ್ರತಿಧ್ವನಿಯಾದರು. ಸಂಗೀತದ ಲಯಕ್ಕೆ ಸದ್ಗುರು ಆಗಾಗ ಹೆಜ್ಜೆ ಹಾಕಿದಾಗ ಭಕ್ತವೃಂದ ಪುಳಕ ಅನುಭವಿಸಿತು.