ನ್ಯೂಸ್

ಚುನಾವಣಾ ರಾಜಕಾರಣಕ್ಕೆ ಸದಾನಂದಗೌಡ ಗುಡ್​ಬೈ

ಹಾಸನ: ಚುನಾವಣಾ ರಾಜಕಾರಣದಲ್ಲಿ ಮುಂದುವರಿಯಲ್ಲ ಎನ್ನುವ ಮೂಲಕ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿವ ಸುಳಿವನ್ನು ಮಾಜಿ ಸಿಎಂ, ಸಂಸದ ಡಿ.ವಿ.ಸದಾನಂದಗೌಡ ಪರೋಕ್ಷವಾಗಿ ನೀಡಿದರು.

ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಯಡಿಯೂರಪ್ಪ ಬಿಟ್ಟರೆ ನಾನೇ ಅತಿ ಹೆಚ್ಚು ಅಧಿಕಾರ ಅನುಭವಿಸಿದ್ದೇನೆ. ಶಾಸಕ, ಮಂತ್ರಿ, ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ, ಪಕ್ಷದ ಅಧ್ಯಕ್ಷ, ಸಂಸದ ಹಾಗೂ ಪ್ರಧಾನಿ ಮೋದಿ ಸಚಿವ ಸಂಪುಟದಲ್ಲಿ 7 ವರ್ಷ ಮಂತ್ರಿಯಾಗಿಯೂ ಕೆಲಸ ಮಾಡಿದ್ದೇನೆ. 30 ವರ್ಷ ಅಧಿಕಾರ ಸಿಕ್ಕಿರುವುದರಿಂದ ನಾನು ಸಂತೃಪ್ತನಾಗಿದ್ದೇನೆ. ಅಧಿಕಾರದ ಆಸೆ ಇಲ್ಲ ಎಂದು ಹೇಳಿದರು.

ಬಿಜೆಪಿಯಿಂದ ಕೇಂದ್ರಕ್ಕೆ ವರದಿ: ಬರಗಾಲದ ಹಿನ್ನೆಲೆಯಲ್ಲಿ ಬಿಜೆಪಿಯ 14 ತಂಡಗಳು ರಾಜ್ಯಾದ್ಯಂತ ಪ್ರವಾಸ ಮಾಡಿ ವಸ್ತು ಸ್ಥಿತಿಯನ್ನು ಪರಿಶೀಲಿಸುತ್ತಿವೆ. ಈ ವರದಿಯನ್ನು ಇನ್ನೆರಡು ಮೂರು ದಿನಗಳಲ್ಲಿ ಕೇಂದ್ರಕ್ಕೆ ಸಲ್ಲಿಸಿ, ಸಂಬಂಧಪಟ್ಟ ಸಚಿವರೊಂದಿಗೆ ಚರ್ಚೆ ಮಾಡಿ, ರಾಜ್ಯಕ್ಕೆ ಬೇಕಿರುವ ಅಗತ್ಯ ನೆರವನ್ನು ಕೊಡಿಸುವ ಪ್ರಾಮಾಣಿಕ ಪ್ರಯತ್ನವನ್ನು ರಾಜ್ಯದ ಬಿಜೆಪಿ ನಾಯಕರು ಮಾಡಲಿದ್ದಾರೆ ಎಂದು ಡಿವಿಎಸ್ ಭರವಸೆ ನೀಡಿದರು.

ಸೋಮಶೇಖರ್​-ಈಶ್ವರಪ್ಪ ವಿಷಮಯ ಜಟಾಪಟಿ

ಮೈಸೂರು: ರಾಜ್ಯದಲ್ಲಿ ಬಿಜೆಪಿ ಕೈಗೊಂಡಿರುವ ಬರ ಅಧ್ಯಯನಕ್ಕೆ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಅಧಿಕಾರಿಗಳು ಬರ ಅಧ್ಯಯನ ಮಾಡಿ ಹೋಗಿದ್ದಾರೆ. ಕೇಂದ್ರದಲ್ಲಿ ನಿಮ್ಮದೇ ಸರ್ಕಾರ ಇದ್ದು, ಬರ ಅಧ್ಯಯನ ಬಿಟ್ಟು ನೀವು ಕೇಂದ್ರಕ್ಕೆ ಮನವರಿಕೆ ಮಾಡುವ ಕೆಲಸ ಮಾಡಿ ಎಂದು ಆಕ್ರೋಶ ಹೊರಹಾಕಿದ್ದಾರೆ.ನಗರದಲ್ಲಿ ಬುಧವಾರ ಮಾತನಾಡಿದ ಅವರು, ಕೇಂದ್ರಕ್ಕೆ ರಾಜ್ಯದ ಬರ ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟು ಅನುದಾನ ಪಡೆಯುವುದನ್ನು ಬಿಟ್ಟು ಇಲ್ಲಿ ಪ್ರವಾಸ ಮಾಡಿದರೆ ಏನು ಪ್ರಯೋಜನ? ಎಂದು ಪ್ರಶ್ನಿಸಿದರು.

ಈಶ್ವರಪ್ಪಗೆ ಬೆಲೆಯಿಲ್ಲ: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪಗೆ ಯಾವುದೇ ಬೆಲೆ ಇಲ್ಲ, ಬೆಲೆ ಇಲ್ಲದವರ ಹೇಳಿಕೆಗಳಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನನ್ನನ್ನು ಪಕ್ಷದಿಂದ ಬಿಟ್ಟು ಹೋಗು ಅಂತ ಹೇಳಲು ಈಶ್ವರಪ್ಪ ಯಾರು? ಎಂದರು. ನಾನು ಬಿಜೆಪಿ ಬಿಟ್ಟು ಹೋಗುವುದಿಲ್ಲ. ಮಾನಸಿಕವಾಗಿ, ದೈಹಿಕವಾಗಿ ಬಿಜೆಪಿಯಲ್ಲಿದ್ದೇನೆ. ಕಾಂಗ್ರೆಸ್ ಸೇರುತ್ತೇನೆ ಎಂಬುದೆಲ್ಲ ಊಹಾಪೋಹ ಎಂದು ಸ್ಪಷ್ಟಪಡಿಸಿದರು.

ಬಿಜೆಪಿಯವರು ಪಕ್ಷಕ್ಕೆ ಬರುವಾಗ ಜಾಮೂನು ಕೊಡುತ್ತಾರೆ, ಅಧಿಕಾರ ಮುಗಿದ ಮೇಲೆ ವಿಷ ಕೊಡುತ್ತಾರೆ. ನಾನು ಕಾಂಗ್ರೆಸ್​ನಲ್ಲಿದ್ದವನು. ಅವರಾಗೇ ಪಕ್ಷಕ್ಕೆ ಸೇರಿಸಿಕೊಂಡರು. ಈಗ ಎಸ್.ಟಿ. ಸೋಮಶೇಖರ್ ಹೋದರೆ ಹೋಗಲಿ ಎಂದು ಮಾತನಾಡುತ್ತಿದ್ದಾರೆ. ನನ್ನನ್ನು ಪಕ್ಷ ಬಿಡಿಸಲು ರೆಡಿಯಾಗಿದ್ದಾರೆ. | ಎಸ್.ಟಿ.ಸೋಮಶೇಖರ್ ಬಿಜೆಪಿ ಶಾಸಕ

ನಂಬಿಕೆಯಿದ್ದರೆ ನಮ್ಮೊಂದಿಗೆ ಇರಿ

ಬಿಜೆಪಿಗೆ ಬಂದ ಶಾಸಕ ಎಸ್.ಟಿ.ಸೋಮಶೇಖರ್ ವಿಷ ಕುಡಿದಿದ್ದಾರಾ?. ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದ್ದರೆ ಇದೇ ಮಾತು ಹೇಳುತ್ತಿದ್ದರೆ? ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮರು ಪ್ರಶ್ನಿಸಿದ್ದಾರೆ.

ಜಾಮೂನ್ ನೀಡಿ ಪಕ್ಷಕ್ಕೆ ಸ್ವಾಗತಿಸಿದವರು ಅಧಿಕಾರ ಕಳೆದುಕೊಂಡ ಬಳಿಕ ವಿಷ ನೀಡುತ್ತಿದ್ದಾರೆ ಎಂಬ ಎಸ್.ಟಿ.ಸೋಮಶೇಖರ್ ಹೇಳಿಕೆಗೆ ತಿರುಗೇಟು ನೀಡಿ, 17 ಜನ ಶಾಸಕರು ಬಿಜೆಪಿ ಜತೆಯಲ್ಲೇ ಇದ್ದಾರೆ. ಅವರಲ್ಲಿ ಯಾರೊಬ್ಬರೂ ವಿಷ ಕೊಟ್ಟಿದ್ದಾರೆ ಎಂದು ಹೇಳಿಲ್ಲ. ಪಕ್ಷದಲ್ಲಿದ್ದುಕೊಂಡು ಪಕ್ಷವನ್ನು ಟೀಕಿಸಬೇಡಿ. ಪಕ್ಷದಲ್ಲಿ ನಿಷ್ಠೆ, ನಂಬಿಕೆಯಿದ್ದರೆ ನಮ್ಮೊಂದಿಗೆ ಇರಿ ಎಂದಿರುವೆ. ಅಧಿಕಾರ ಇದ್ದರೆ ಮಾತ್ರ ಬರುತ್ತೇನೆ, ಇಲ್ಲದಿದ್ದರೆ ಹೋಗುತ್ತೇನೆ ಎಂದರೆ ಅದು ಅವರ ಇಷ್ಟ ಎಂದರು.

ಸಿದ್ದರಾಮಯ್ಯ ಮಾತುಕೊಟ್ಟಂತೆ ಎಚ್.ಕಾಂತರಾಜು ಆಯೋಗ ಸಲ್ಲಿಸಿದ ಜಾತಿ ಗಣತಿ ವರದಿ ಸ್ವೀಕರಿಸಲು ಎಂದು ಆಗ್ರಹಿಸಿದರು.