ನ್ಯೂಸ್

ಕೇರಳದಲ್ಲಿ ಕೇರಳ ಕುರಿ, ಮೇಕೆ, ಎಮ್ಮೆ ಬಲಿ; ತನಿಖೆಗೆ ಎಸ್‌ಐಟಿ ರಚಿಸಿ

ಬೆಂಗಳೂರು: ಕೇರಳದಲ್ಲಿ ಕೇರಳ ಕುರಿ, ಕೋಳಿ, ಮೇಕೆ, ಎಮ್ಮೆ ಬಲಿಯ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಇನ್ನೊಂದು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಲಿ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು.

ವಿಧಾನಸೌಧದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಡಿಸಿಎಂ ಡಿ.ಕೆ. ಶಿವಕುಮಾರ್ ನೀಡಿರುವ ನೀಡಿಕೆ ಅಲ್ಲವೇ? ನಾನು ಮಾಧ್ಯಮಗಳ ಮೂಲಕವೇ ಗಮನಿಸಿದೆ. ಸಿಎಂ ಮತ್ತು ನನ್ನ ವಿರುದ್ಧ ಮಾಡಿಸುತ್ತಿರುವ ಶತ್ರು ಭೈರವಿ ಯಾಗ ಎಂದು ಹೇಳಿದ್ದಾರೆ. ಸಿಎಂ, ಡಿಸಿಎಂ ವಿರುದ್ಧ ವಾಮಾಚಾರ ಎಂದರೆ ಸಾಮಾನ್ಯವೇ? ಹಾಗಾಗಿ ಅದರ ತನಿಖೆಗೂ ಒಂದು ಎಸ್‌ಐಟಿ ರಚನೆ ಮಾಡಲಿ ಎಂದು ಹೇಳಿದರು.

ಆಚಾರವಿಲ್ಲದ ನಾಲಿಗೆ

ಡಿಸಿಎಂ ಅವರು ಹೇಳಿದ್ದಾರೆ. ಇದು ಮಾಟ ಮಂತ್ರ ಎಂದು ಕಥೆ ಕಟ್ಟಿದ್ದಾರೆ. ಅವರ ಅಷ್ಟೂ ಹೇಳಿಕೆಯನ್ನು ಗಮನಿಸಿದ್ದೇನೆ. ಅವರು ಹೇಳಿಕೆ ಕೊಡುವ ಮುನ್ನ ತಾವು ಅಲಂಕರಿಸಿರುವ ಹುದ್ದೆಯ ಘನತೆ ಅರಿಯಬೇಕಿತ್ತು. ಅವರಿಗೆ ಆ ಸ್ಥಾನದ ಮೌಲ್ಯ ಇನ್ನೂ ಅರ್ಥವಾಗಿಲ್ಲ ಎಂದು ಟೀಕಿಸಿದರು.

ರಾಜರಾಜೇಶ್ವರಿ ಅಮ್ಮನವರಿಗೆ ಅಪಪ್ರಚಾರ

ಮೊದಲು ನಿಮ್ಮ ಮನಸ್ಸು ಶುದ್ಧ ಮಾಡಿಕೊಳ್ಳಿ. ಅದೆಂತದೋ ಶತ್ರು ಭೈರವಿ ಯಾಗವಂತೆ. ಅವರಿಗೆ ಭಕ್ತಿ ಇದೆಯಂತೆ. ಪವಿತ್ರ ಪುಣ್ಯಕ್ಷೇತ್ರ ಶ್ರೀ ರಾಜರಾಜೇಶ್ವರಿ ಅಮ್ಮನವರ ಸನ್ನಿಧಾನಕ್ಕೆ ಅವರೂ ಹೋಗಿದ್ದಾರೆ. ಅವರಿಗೆ ಈ ಯಾಗದ ಬಗ್ಗೆ ಪೂರ್ಣ ಮಾಹಿತಿ ಇರಬೇಕು. ಅಲ್ಲಿ ಯಾವ ರೀತಿಯ ಪೂಜೆ ನಡೆಯುತ್ತದೆ? ಆ ಕ್ಷೇತ್ರ ಮಹಿಮೆ ಏನು ಎನ್ನುವುದು ಅವರಿಗೆ ತಿಳಿದಿರುತ್ತದೆ ಅಲ್ಲವೇ? ಹಾಗಿದ್ದರೂ ಅವರು ಸುಳ್ಳು ಹೇಳಿ ಶ್ರೀ ರಾಜರಾಜೇಶ್ವರಿ ಅಮ್ಮನವರಿಗೆ ಅಪಪ್ರಚಾರ ಎಸಗಿದ್ದಾರೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಕುಟುಂಬದ ಕೋಣ, ಮೇಕೆ ಕಡಿಯಲ್ಲ

ನಮ್ಮ ಕುಟುಂಬದಲ್ಲಿ ಕುರಿ, ಮೇಕೆ, ಎಮ್ಮೆ, ಕೋಣ ಕಡಿಯೋದು ಯಾವತ್ತೂ ನಡೆದಿಲ್ಲ. ಅಂತಹ ಸಂಪ್ರದಾಯ ನಮ್ಮ ಕುಟುಂಬದಲ್ಲಿ ಇಲ್ಲ. ಪ್ರತಿ ತಿಂಗಳು ನಾನು ಜೆಪಿ ನಗರದಲ್ಲಿರುವ ಶ್ರೀ ತಿರುಮಲಗಿರಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸುತ್ತೇನೆ. ನಮ್ಮ ತಂದೆಯವರು ಪೂಜೆ ಮಾಡಿಸುತ್ತಾರೆ. ನಮ್ಮಿಬ್ಬರ ಆರೋಗ್ಯದ ಸಮಸ್ಯೆ ಹಿನ್ನೆಲೆಯಲ್ಲಿ ಪೂಜೆ ಮಾಡಿ ದೈವಕ್ಕೆ ಪ್ರಾರ್ಥನೆ ಸಲ್ಲಿಸುತ್ತೇವೆ. ಇನ್ನೊಬ್ಬರಿಗೆ ಕೇಡು ಬಯಿಸಲು ಪೂಜೆ ಮಾಡಿಲ್ಲ, ಮಾಡುವುದೂ ಇಲ್ಲ ಎಂದರು.

ಅದು ನಮ್ಮ ಸಂಸ್ಕೃತಿ ಅಲ್ಲ

ಕೋಣ, ಹಂದಿ ಕೂಯ್ದು ಕೇಡು ಬಯಸಲ್ಲ ನಾವು, ಕೇಡು ಬಯಸೋದು ಅವರ ಸಂಸ್ಕೃತಿ. ದೇವೇಗೌಡರ ಅರವತ್ತು ವರ್ಷಗಳ ರಾಜಕೀಯ ಜೀವನದಲ್ಲಿ 3-4 ವರ್ಷ ಬಿಟ್ಟರೆ ಉಳಿದದ್ದು ಎಲ್ಲ ವಿರೋಧ ಪಕ್ಷದಲ್ಲೇ. ಒಂದು ವೇಳೆ ಕುರಿ, ಕೋಣ ಬಲಿ ಕೊಟ್ಟರೆ ಅಧಿಕಾರ ಸಿಗುತ್ತದೆ ಎನ್ನುವುದಾದರೆ ಇಷ್ಟೆಲ್ಲ ಕಷ್ಟ ಏನಕ್ಕೆ ಪಡಬೇಕು ಎಂದು ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರಶ್ನಿಸಿದರು.