ಹೊಂಬುಜ ಜೈನಮಠದಲ್ಲಿ ಶ್ರೀ ಶಾಂತಸಾಗರ ಮುನಿ ಮಹಾರಾಜರ ಅಂಚೆಚೀಟಿಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಲೋಕಾರ್ಪಣೆ ಮಾಡಿದರು. ಎಸ್.ರಾಜೇಂದ್ರಕುಮಾರ್, ಧವಲಕೀರ್ತಿ ಭಟ್ಟಾರಕ ಶ್ರೀ, ಭಾನುಕೀರ್ತಿ ಭಟ್ಟಾರಕ ಶ್ರೀ, ಭಟ್ಟಾಕಲಂಕ ಭಟ್ಟಾರಕ ಶ್ರೀ ಇತರರಿದ್ದರು.  
ನ್ಯೂಸ್

ಧರ್ಮ ರಕ್ಷಣೆಗೆ ತ್ಯಾಗ ಅನಿವಾರ್ಯ

ರಿಪ್ಪನ್‌ಪೇಟೆ: ಭಾರತ ಸರ್ಕಾರ ಜೈನಧರ್ಮದ ಶಾಂತಿಸಾಗರ ಮುನಿವರ್ಯರ ಸೇವೆಯನ್ನು ಪರಿಗಣಿಸಿ ಅವರ ಸ್ಮರಣಾರ್ಥ ಅಂಚೆಚೀಟಿ ಲೋಕಾರ್ಪಣೆ ಮಾಡಿರುವುದು ಜೈನಧರ್ಮಕ್ಕೆ ಸಂದ ಗೌರವ ಎಂದು ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.

ಹೊಂಬುಜ ಜೈನಮಠದಲ್ಲಿ ಕೇಂದ್ರ ಸಂಪರ್ಕ ಮತ್ತು ಸಂವಹನ ಸಚಿವಾಲಯ ಹಾಗೂ ಶ್ರೀಮಠದ ಸಹಭಾಗಿತ್ವದಲ್ಲಿ ಬುಧವಾರ ಆಯೋಜಿಸಿದ್ದ ಭಾರತೀಯ ಅಂಚೆ ಇಲಾಖೆ ಹೊರತಂದಿರುವ ಆಚಾರ್ಯ ಶ್ರೀ ಶಾಂತಸಾಗರ ಮುನಿ ಮಹಾರಾಜರ ಅಂಚೆಚೀಟಿ ಲೋಪಾರ್ಪಣೆ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದರು.

ದಿಗಂಬರ ಪರಂಪರೆಯನ್ನು ಮುಂದುವರಿಸಿ ಮುನಿಗಳಿಗೆ ಹೇಗೆ ಆಹಾರ ದಾನ ಮಾಡಬೇಕು ಎಂಬುದನ್ನು ಸಮಾಜಕ್ಕೆ ತಿಳಿಸಿದವರು ಶಾಂತಿಸಾಗರ ಮಹಾರಾಜರು. ಒಂದು ಪಂಥ, ಧರ್ಮ ಉಳಿಸಬೇಕಾದರೆ ತ್ಯಾಗದ ಅಗತ್ಯವಿದೆ. ಶಾಂತಿ, ಸಹನೆ, ತ್ಯಾಗ ನಮ್ಮ ಧರ್ಮದ ಮೂರು ತತ್ವಗಳು. ಇವುಗಳ ಬಗ್ಗೆ ಮಕ್ಕಳಿಗೆ ಸಂಸ್ಕಾರ ನೀಡುವ ಕಾರ್ಯಕ್ರಮಗಳನ್ನು ಪಟ್ಟಾಚಾರ್ಯರು ಮಾಡುತ್ತಿರುವುದು ಶ್ಲಾಘನೀಯ ಎಂದರು.

ಕರ್ನಾಟಕ ವೃತ್ತ ಮುಖ್ಯ ಅಂಚೆ ಪ್ರವರ್ತಕ ಎಸ್.ರಾಜೇಂದ್ರಕುಮಾರ್ ಮಾತನಾಡಿ, ಈಗಾಗಲೇ ಭಗವಾನ್ ಬಾಹುಬಲಿ, ರಾಜ ಚಂದ್ರಗುಪ್ತ ಮೌರ್ಯ, ರಾಣಿ ಅಬ್ಬಕ್ಕದೇವಿ ಜೈನ ಸಂಬಂಧಿತ ಹಲವು ಅಂಚೆ ಚೀಟಿಗಳು ಬಿಡುಗಡೆಗೊಂಡಿವೆ ಎಂದು ತಿಳಿಸಿದರು.

ಪ್ರವಾಸಿ ತಾಣದಿಂದ ಸಂಗ್ರಹಿಸಬಹುದಾದ ಅಂಚೆಚೀಟಿಗಳಲ್ಲಿ 9 ಜೈನ ಸಮುದಾಯಕ್ಕೇ ಸಂಬಂಧಿಸಿವೆ. ಶ್ರವಣಬೆಳಗೊಳದ ಗೊಮ್ಮಟೇಶ್ವರ, ಕಾರ್ಕಳದ ತೀರ್ಥಂಕರ, ಬಾರ್ಕೂರಿನ ಕತ್ತಲೆ ಬಸದಿ, ಮೂಡುಬಿದಿರೆ ಸಾವಿರಕಂಬದ ಬಸದಿ, ವೇಣೂರು ಬಾಹುಬಲಿ, ಹುಂಚ ಜೈನಮಠ, ಹಿರೇಹಳ್ಳಿ ಸುಂದರ ಗಿರಿಜೈನಮಂದಿರ, ಬೆಳಗಾವಿ ಕೋಟೆ, ಕಮಲ ಬಸದಿ, ವಾರಂಗಲ್ ಬಸದಿಗಳ ಅಂಚೆ ಚೀಟಿಗಳು ಬಿಡುಗಡೆಯಾಗಿವೆ. ಹೀಗೆ ಅನೇಕ ಅಂಚೆಚೀಟಿಯನ್ನು ಹೊಂದಿರುವ ಜೈನಧರ್ಮದ ಸಾಧಕ ಸ್ಮಾರಕಗಳನ್ನು ವಿಶಿಷ್ಟವಾಗಿ ಗುರುತಿಸಲಾಗಿದೆ ಎಂದರು.

ಅರಹಂತಗಿರಿಯ ಶ್ರೀ ಧವಲಕೀರ್ತಿ ಭಟ್ಟಾರಕ ಸ್ವಾಮೀಜಿ, ಕಂಬದಲ್ಲಿ ಶ್ರೀ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ, ಸೋಂದ ಮಠದ ಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ, ಎನ್.ಆರ್.ಪುರ ಶ್ರೀ ಲಕ್ಷ್ಮೀಸೇನಾ ಭಟ್ಟಾರಕ ಸ್ವಾಮೀಜಿ, ಕನಕಗಿರಿಯ ಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ಆಲ್‌ಇಂಡಿಯಾ ಜೈನ್ ಯೂಥ್ ಫೆಡರೇಷನ್ ಅಧ್ಯಕ್ಷ ಮಹೇಂದ್ರ ಸಿಂಘಿ, ದಿಗಂಬರ ಜೈನ ಸಮಾಜದ ರಾಜೇಂದ್ರ ಬಿಳಗಿ, ಭರತೇಶ್ ಎಜುಕೇಷನ್ ಟ್ರಸ್ಟ್‌ನ ವಿನೋದ್ ದೊಡ್ಡಣ್ಣನವರ್, ಶಾಂತಸಾಗರ ಮುನಿಶ್ರೀ ಫೌಂಡೇಷನ್‌ನ ಅನಿಲ್ ಸೇತಿ, ರಾಕೇಶ್ ಸೇತಿ, ವಿಕಾಸ್ ಜೈನ್ ಇತರರಿದ್ದರು.