ನ್ಯೂಸ್

ಒಂದೇ ಒಂದು ವಸ್ತುವಿನಿಂದ ಹಳಿ ತಪ್ಪಿದ ಸಬರಮತಿ ಎಕ್ಸ್​ಪ್ರೆಸ್​ ರೈಲು! ಸಂಚಾರ ಸ್ಥಗಿತ

ಉತ್ತರ ಪ್ರದೇಶ: 12 ಬೋಗಿಗಳನ್ನು ಕೊಂಡೊಯ್ಯುತ್ತಿದ್ದ ಸಬರಮತಿ ಎಕ್ಸ್​ಪ್ರೆಸ್​ ರೈಲು ಟ್ರಾಕ್​ ಮೇಲಿರಿಸಲಾಗಿದ್ದ ವಸ್ತುವಿಗೆ ಡಿಕ್ಕಿ ಹೊಡದ ಪರಿಣಾಮ ದಿಢೀರ್​ ಹಳಿತಪ್ಪಿದ್ದು, ಸದ್ಯ ಘಟನೆಯಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ವರದಿಯಾಗಿದೆ.

ವಾರಣಾಸಿಯಿಂದ ಸಬರಮತಿಗೆ ತೆರಳುತ್ತಿದ್ದ ಸಬರಮತಿ ಎಕ್ಸ್‌ಪ್ರೆಸ್‌ನ ಕನಿಷ್ಠ 12 ಬೋಗಿಗಳು ಇಂದು (ಆ.17) ಬೆಳಗ್ಗೆ ಉತ್ತರ ಪ್ರದೇಶದ ಕಾನ್ಪುರ ಬಳಿ ಹಳಿತಪ್ಪಿದೆ. ರೈಲಿನಲ್ಲಿ ನಿದ್ರೆಗೆ ಜಾರಿದ್ದ ಪ್ರಯಾಣಿಕರಲ್ಲಿ ಭೀತಿ ಮೂಡಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಪ್ರಾಣಹಾನಿ ಸಂಭವಿಸಿಲ್ಲ. ರೈಲು ಕಾನ್ಪುರದಿಂದ ಹೊರಟ ಕೆಲವೇ ನಿಮಿಷಗಳಲ್ಲಿ ಈ ರೀತಿ ಆಗಿದ್ದು, ಭೀಮಸೇನ್ ಬಳಿ ಹಳಿ ರೈಲು ತಪ್ಪಿದೆ. ತಕ್ಷಣವೇ ಪೊಲೀಸ್ ಮತ್ತು ಆಡಳಿತ ಸಿಬ್ಬಂದಿ ವರ್ಗ ಸೇರಿದಂತೆ ತುರ್ತು ತಂಡಗಳು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸುತ್ತಿವೆ.

ಅಪಘಾತದ ಬೆನ್ನಲ್ಲೇ ಟ್ವೀಟ್ ಮಾಡಿರುವ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, "ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸಬರಮತಿ ಎಕ್ಸ್‌ಪ್ರೆಸ್ (ವಾರಣಾಸಿಯಿಂದ ಅಮ್ದಾವದ್) ಇಂಜಿನ್ ಇಂದು ಮುಂಜಾನೆ 02:35ಕ್ಕೆ ಕಾನ್ಪುರ ಬಳಿ ಹಳಿಯ ಮೇಲೆ ಇರಿಸಲಾಗಿದ್ದ ವಸ್ತುವಿಗೆ ಡಿಕ್ಕಿ ಹೊಡೆದಿದೆ. ಇಂಜಿನ್​ ಕೆಲವು ಭಾಗಗಳಿಗೆ ತೀಕ್ಷ್ಣವಾದ ಪೆಟ್ಟು ಬಿದ್ದಿದೆ. ಐಬಿ ಮತ್ತು ಯುಪಿ ಪೊಲೀಸರು ಕೂಡ ಕೆಲಸ ಮಾಡುತ್ತಿದ್ದಾರೆ" ಎಂದರು. ಸದ್ಯ ಪ್ರಕರಣ ಕೈಗೊಂಡಿರುವ ರೈಲ್ವೆ ಅಧಿಕಾರಿಗಳು, ಘಟನೆಗೆ ಕಾರಣ ಯಾರು? ಎಂಬುದನ್ನು ಪತ್ತೆಹಚ್ಚಲು ತನಿಖೆ ಕೈಗೊಂಡಿದ್ದಾರೆ,(ಏಜೆನ್ಸೀಸ್).