ನ್ಯೂಸ್

ಪರಿತ್ಯಕ್ತ ಮಕ್ಕಳ ಆಧಾರ್ ನೋಂದಣಿಗೆ ಸಾಥಿ ಅಭಿಯಾನ

ಶಿವಮೊಗ್ಗ: ಸರ್ಕಾರಿ ಯೋಜನೆಗಳ ಸೌಲಭ್ಯ ನೀಡುವ ಉದ್ದೇಶಕ್ಕಾಗಿ ಪಾಲನೆ ಮತ್ತು ಸಂರಕ್ಷಣೆ ಬೇಕಿರುವ ಪರಿತ್ಯಕ್ತ ಮಕ್ಕಳು ಹಾಗೂ ಇನ್ನಿತರೆ ಕಾರಣಗಳಿಗೆ ಆಧಾರ್ ನೋಂದಣಿಯಾಗದ ಮಕ್ಕಳನ್ನು ಜೂ.26ರೊಳಗೆ ಗುರತಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಎಸ್.ಸಂತೋಷ್ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಸೋಮವಾರ ಪಾಲನೆ ಮತ್ತು ಸಂರಕ್ಷಣೆ ಬೇಕಿರುವ ಮಕ್ಕಳಿಗೆ ಆಧಾರ್ ನೋಂದಣಿ, ಸರ್ಕಾರಿ ಯೋಜನೆಗಳ ಸೇರ್ಪಡೆ ಮತ್ತು ಟ್ರ್ಯಾಕಿಂಗ್‌ಗಾಗಿ ಸಾಥಿ ಅಭಿಯಾನದ ಅಂಗವಾಗಿ ಸಮಿತಿ ಸದಸ್ಯರ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸೂಚನೆ ನೀಡಿರುವ ಅನ್ವಯ ತಂದೆ- ತಾಯಿ ಇಲ್ಲದಿರುವ ಪರಿತ್ಯಕ್ತ ಮಕ್ಕಳು, ವಲಸೆ ಇನ್ನಾವುದೇ ಕಾರಣಗಳಿಂದ ಆಧಾರ್ ಹೊಂದಿರದ ಮಕ್ಕಳನ್ನು ಗುರುತಿಸಬೇಕು. ಅವರಿಗೆ ಆಧಾರ್ ಕಾರ್ಡ್ ನೀಡಲು ಸಾಥಿ (ಸರ್ವೇ ಆಫ್ ಆಧಾರ್ ಆ್ಯಂಡ್ ಆಕ್ಸಸ್ ಟು ಟ್ರ್ಯಾಕಿಂಗ್ ಹೊಲಿಸ್ಟಿಕ್ ಇನ್ಕು ್ಲಷನ್) ಅಭಿಯಾನ ಕೈಗೊಳ್ಳಲಾಗುತ್ತಿದ್ದು, ಪರಿತ್ಯಕ್ತ ಮಕ್ಕಳಿಗೆ ಕಾನೂನು ಗುರುತು ಮತ್ತು ಸರ್ಕಾರದ ಸೌಲಭ್ಯ ಒದಗಿಸುವುದು ಈ ಅಭಿಯಾನದ ಮುಖ್ಯ ಉದ್ದೇಶ. ಆದ್ದರಿಂದ ಜಿಲ್ಲೆಯಲ್ಲಿ ಪರಿತ್ಯಕ್ತ, ವಲಸೆ ಹಾಗೂ ಇನ್ನಿತರೆ ಕಾರಣಗಳಿಂದ ಆಧಾರ್ ನೋಂದಣಿ ಆಗದ ಮಕ್ಕಳನ್ನು ಗುರುತಿಸಬೇಕಿದೆ ಎಂದರು.

ಜೂ.27ರಿಂದ ಆಗಸ್ಟ್ 5ರವರೆಗೆ ಆಧಾರ್ ನೋಂದಣಿ ಮಾಡಿಸಬೇಕು. ಆಗಸ್ಟ್ 9ಕ್ಕೆ ಜಿಲ್ಲೆಯಿಂದ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನೋಂದಣಿ ಕುರಿತಾದ ವರದಿ ಸಲ್ಲಿಸಬೇಕು. ಆಗಸ್ಟ್ 15ರಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ವರದಿ ಮಾಡಲಿದೆ ಎಂದು ಅವರು ಮಾಹಿತಿ ನೀಡಿದರು.

ಡಿಡಿಪಿಐ ಎಸ್.ಆರ್.ಮಂಜುನಾಥ್, ಡಿವೈಎಸ್‌ಪಿ ಬಾಬು ಆಂಜನಪ್ಪ, ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕ ತಹಸೀಲ್ದಾರ್ ಪ್ರದೀಪ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುನಾಥ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ವೆಂಕಟೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಶಿರೇಖಾ, ಸಿಡಬ್ಲ್ಯುಸಿ ಅಧ್ಯಕ್ಷ ತಾಜುದ್ದೀನ್ ಖಾನ್, ಆಧಾರ್ ಸಂಯೋಜಕರು, ಇತರೆ ಜಿಲ್ಲಾಮಟ್ಟದ ಅಧಿಕಾರಿಗಳು, ಪ್ಯಾನಲ್ ವಕೀಲರು ಸೇರಿದಂತೆ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.