ನ್ಯೂಸ್

VIDEO: ಚೀನಾದಲ್ಲಿ ಕ್ಷಿಪ್ರಕ್ರಾಂತಿ, ಅಧ್ಯಕ್ಷನ ಗೃಹಬಂಧನ? ಎಲ್ಲರ ಬಾಯಿ ಮುಚ್ಚಿಸಿತು ಈ ವಿಡಿಯೋ...

ಬೀಜಿಂಗ್‌: ಕಳೆದ ಕೆಲವು ದಿನಗಳಿಂದ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಸುದ್ದಿಗಳಲ್ಲಿ ಒಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಗೃಹಬಂಧನಕ್ಕೆ ಸಂಬಂಧಿಸಿದ್ದು. ಕೆಲವು ದಿನಗಳಿಂದ ಚೀನಾದಲ್ಲಿನ ಕ್ಷಿಪ್ರಕ್ರಾಂತಿ ಹಾಗೂ ಗೃಹಬಂಧನ ವದಂತಿ ಜಗತ್ತಿನಾದ್ಯಂತ ರಾಜಕೀಯ ವಯಲದಲ್ಲಿ ತಲ್ಲಣವನ್ನೇ ಸೃಷ್ಟಿಸಿತ್ತು.

ಸಾಮಾನ್ಯವಾಗಿ ಕಮ್ಯುನಿಸ್ಟ್​ ರಾಷ್ಟ್ರವಾಗಿರುವ ಚೀನಾದಲ್ಲಿ ಏನೇ ನಡೆದರೂ ಬೇರೆ ದೇಶಗಳಂತೆ ಆ ಸುದ್ದಿ ಹೊರದೇಶಗಳಿಗೆ ಹೋಗುವುದು ತೀರಾ ವಿರಳ. ಅದರಂತೆ ಕ್ಸಿ ಜಿನ್‌ಪಿಂಗ್‌ನ ಗೃಹಬಂಧನ ನಿಜಕ್ಕೂ ಆಗಿತ್ತೋ ಇಲ್ಲವೋ ಎಂಬ ಬಗ್ಗೆ ಥಹರೇವಾರಿ ಸುದ್ದಿಗಳು ಹರಿದಾಡುತ್ತಿದ್ದವು. ವಿದೇಶದ ಮಾಧ್ಯಮಗಳು, ಫೇಸ್‌ಬುಕ್, ಟ್ವಿಟ್ಟರ್, ಯೂಟ್ಯೂಬ್​ಗೂ ಚೀನಾದಲ್ಲಿ ನಿರ್ಬಂಧ ಇರುವುದರಿಂದ ಅಲ್ಲಿ ಏನು ನಡೆಯುತ್ತದೆ ಎಂಬುದನ್ನು ನಿಖರವಾಗಿ ತಿಳಿಯುವುದು ಅಸಾಧ್ಯವಾಗಿದೆ. ಗೃಹ ಬಂಧನದ ವದಂತಿ ಹರಡಲು ಇದು ಕೂಡಾ ಕಾರಣವಾಗಿತ್ತು.

ಸೆಪ್ಟೆಂಬರ್ 16ರಂದು ಉಜ್ಬೇಕಿಸ್ತಾನ್‌ನ ಸಮರಖಂಡದಲ್ಲಿ ನಡೆದ ಶಾಂಘೈ ಸಹಕಾರ ಸಮ್ಮೇಳನದ ಬಳಿಕ ಕ್ಸಿ ಜಿನ್‌ಪಿಂಗ್‌ ಸಾರ್ವಜನಿಕವಾಗಿ ಕಾಣಿಸಿರಲಿಲ್ಲ, ಇದರೊಂದಿಗೆ, ಚೀನಾದಲ್ಲಿ ಕ್ಷಿಪ್ರಕ್ರಾಂತಿ ನಡೆದಿದೆ, ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಮುಖ್ಯಸ್ಥ ಸ್ಥಾನದಿಂದ ಜಿನ್‌ಪಿಂಗ್‌ ಅವರನ್ನು ತೆಗೆದುಹಾಕಿ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಹಾಗೂ ಅವರ ಸ್ಥಾನಕ್ಕೆ ಕಮ್ಯುನಿಸ್ಟ್‌ ನಾಯಕ ಲಿ ಕ್ವಿಯೋಮಿಂಗ್‌ನನ್ನು ಅಧ್ಯಕ್ಷನನ್ನಾಗಿ ನೇಮಿಸಲಾಗಿದೆ ಎಂದೇ ಸುದ್ದಿಯಾಗಿತ್ತು.

ಚೀನಾದಲ್ಲಿ ಕಳೆದ ವಾರ ಇಬ್ಬರು ಮಾಜಿ ಸಚಿವರಿಗೆ ಗಲ್ಲುಶಿಕ್ಷೆ ಹಾಗೂ ನಾಲ್ವರು ಅಧಿಕಾರಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ವರದಿಗಳ ಪ್ರಕಾರ, ಈ ಆರೂ ಮಂದಿ ಜಿನ್‌ಪಿಂಗ್ ಅವರ ವಿರೋಧಿ ಎನ್ನಲಾಗಿದೆ. ಈ ಹಿನ್ನೆಲೆ ಅವರ ವಿರುದ್ಧ ಪಕ್ಷವೇ ಗೃಹಬಂಧನದಲ್ಲಿ ಇರಿಸಿದೆ ಎಂಬ ವದಂತಿ ಹರಡಿತ್ತು.

ಆದರೆ ಇದೀಗ ವೈರಲ್​ ಆಗಿರುವ ವಿಡಿಯೋ ಎಲ್ಲಾ ಸುದ್ದಿಗಳಿಗೆ, ವದಂತಿಗಳಿಗೆ ತೆರೆ ಎಳೆದಿದೆ. ಏಕೆಂದರೆ ನಿನ್ನೆ (ಮಂಗಳವಾರ) ಬೀಜಿಂಗ್‌ನಲ್ಲಿ ಬಹಿರಂಗವಾಗಿ ಕಾಣಿಸಿಕೊಂಡಿದ್ದಾರೆ. ಬೀಜಿಂಗ್‌ನಲ್ಲಿ ನಡೆದ ವಸ್ತು ಪ್ರದರ್ಶನಕ್ಕೆ ಅವರು ಭೇಟಿ ನೀಡಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದು ಅದರ ವಿಡಿಯೋ ಬಹಿರಂಗಗೊಳಿಸಲಾಗಿದೆ. ಉತ್ತಮ ಸಮಾಜ ನಿರ್ಮಾಣಕ್ಕೆ ಇನ್ನೂ ಹೆಚ್ಚಿನ ರೀತಿಯಲ್ಲಿ ಶ್ರಮಿಸಲಾಗುವುದು ಎಂದು ಈ ಸಂದರ್ಭದಲ್ಲಿ ಜಿಂಗ್​ಪಿಂಗ್​ ಹೇಳಿರುವುದಾಗಿ ವರದಿಯಾಗಿದೆ. 

ಈ ನಡುವೆ, ಮುಂದಿನ ತಿಂಗಳು ನಡೆಯಲಿರುವ ಕಮ್ಯುನಿಸ್ಟ್‌ ಪಕ್ಷದ ಚುನಾವಣೆಯಲ್ಲಿ ಕ್ಸಿ ಜಿನ್‌ಪಿಂಗ್ ಅವರೇ ಮೂರನೇ ಬಾರಿ ಆಯ್ಕೆಯಾಗಿ ದಾಖಲೆ ನಿರ್ಮಿಸುವ ಸಾಧ್ಯತೆಗಳು ಇವೆ ಎಂದು ಚೀನೀ ಮಾಧ್ಯಮಗಳು ವರದಿ ಮಾಡಿವೆ. (ಏಜೆನ್ಸೀಸ್​)

ಇಲ್ಲಿದೆ ನೋಡಿ ವಿಡಿಯೋ: