ರಾಂಚಿ: ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಎಲ್ಲೆಡೆ ಬಲು ವಿಜ್ರಂಭಣೆಯಿಂದ ಆಚರಿಸಲಾಗುತ್ತಿದೆ. ಹಲವೆಡೆ ವಿಧವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಜಾರ್ಖಂಡ್‍ನ ಕಾಂಗ್ರೆಸ್ ಶಾಸಕಿ ಅಂಬಾ ಪ್ರಸಾದ್ ವಿಭಿನ್ನ ರೀತಿಯಲ್ಲಿ ಈ ದಿನವನ್ನು ಆಚರಿಸಿದ್ದಾರೆ.
ಅದೇನೆಂದರೆ, ಕುದುರೆ ಏರಿ ವಿಧಾನಸಭೆಗೆ ಆಗಮಿಸಿ ಗಮನ ಸೆಳೆದಿದ್ದಾರೆ. ಅಂಬಾ ಪ್ರಸಾದ್, ಜಾರ್ಖಂಡ್‌ನ ಹಜಾರಿಬಾಗ್ ಜಿಲ್ಲೆಯ ಬಾರ್ಕಗಾಂವ್ ವಿಧಾನಸಭಾ ಕ್ಷೇತ್ರದ ಶಾಸಕಿಯಾಗಿದ್ದು, ಇಂದು ವಿಧಾನಸಭೆಗೆ ಕುದುರೆ ಏರಿ ಬರುತ್ತಿದ್ದಂತೆ ಎಲ್ಲರೂ ಒಂದು ಕ್ಷಣ ಅವರತ್ತ ಕಣ್ಣಾಡಿಸಿದ್ದಾರೆ.
ಈ ವೇಳೆ, ಮಾತನಾಡಿದ ಅವರು ಪ್ರತಿಯೊಬ್ಬ ಮಹಿಳೆಯಲ್ಲೂ ದುರ್ಗಾ, ಝಾನ್ಸಿ ರಾಣಿ ಇದ್ದಾಳೆ. ಪ್ರತಿ ಸವಾಲು ನಾವು ಶಕ್ತಿಯಿಂದ ಎದುರಿಸಬೇಕು. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಅಭೂತಪೂರ್ವ ಸಾಧನೆ ಮಾಡುತ್ತಿರುವುದರಿಂದ ಪಾಲಕರು ತಮ್ಮ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದರು. ಈ ಕುದುರೆಯನ್ನು ನನಗೆ ಸೇನೆಯ ನಿವೃತ್ತ ಅಧಿಕಾರಿ ರವಿ ರಾಥೋಡ್ ಅವರು ಅಂತಾರಾಷ್ಟ್ರೀಯ ಮಹಿಳಾ ದಿನಚರಣೆಯ ಪ್ರಯುಕ್ತ ಕೊಡುಗೆಯಾಗಿ ನೀಡಿದ್ದಾರೆ ಎಂದರು.
ಪ್ರತಿಯೊಬ್ಬ ಮಹಿಳೆಯಲ್ಲೂ ದುರ್ಗಾ, ಝಾನ್ಸಿ ಕಿ ರಾಣಿ ಇದ್ದಾಳೆ, ಪ್ರತಿ ಸವಾಲನ್ನು ಮಹಿಳೆ ಶಕ್ತಿಯಿಂದ ಎದುರಿಸಬೇಕು. ಪ್ರತಿಯೊಬ್ಬ ಪೋಷಕರು ತಮ್ಮ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿ ಪ್ರತಿ ಕ್ಷೇತ್ರದಲ್ಲೂ ಮಹಿಳೆಯನ್ನು ಮುಂದೆ ಬರುವಂತೆ ಮಾಡಬೇಕು ಎಂದು ಕರೆ ನೀಡಿದರು.