ನ್ಯೂಸ್

ಅಪ್ಪ ಮಗಳನ್ನೇ ಮದ್ವೆಯಾಗ್ಬೋದು! ಹಿಜಾಬ್​ ವಿರುದ್ಧ ಬಿರುಗಾಳಿ ಎದ್ದಿರೋ ಇರಾನ್​ನಲ್ಲಿ ಹೇಸಿಗೆ ಹುಟ್ಟಿಸುವ ಕಾನೂನು...

ಇರಾನ್​: ಸಾರ್ವಜನಿಕ ಸ್ಥಳದಲ್ಲಿ ಹಿಜಾಬ್ ಧರಿಸದ ಕಾರಣಕ್ಕಾಗಿ ಇರಾನ್​ನಲ್ಲಿ ಯುವತಿಯೊಬ್ಬಳನ್ನು ಪೊಲೀಸರು ಬಂಧಿಸಿ, ವ್ಯಾನ್​ನಲ್ಲಿ ಹಿಗ್ಗಾಮುಗ್ಗಾ ಥಳಿಸಿದ್ದರಿಂದ ಕೆಲ ದಿನಗಳ ಹಿಂದೆ ಯುವತಿಯೊಬ್ಬಳು ಮೃತಪಟ್ಟಿದ್ದಳು. ಈ ಘಟನೆಯ ನಂತರ ಇರಾನ್​ನಲ್ಲಿ ಮಹಿಳೆಯರು ಹಿಂದೆಂದೂ ಕಾಣದ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹಿಜಾಬ್​ಗಳನ್ನು ಸಾರ್ವಜನಿಕವಾಗಿ ಸುಡುತ್ತಿದ್ದಾರೆ. ಮಹಿಳೆಯರ ಈ ಆಕ್ರೋಶಕ್ಕೆ ಮುಸ್ಲಿಂ ರಾಷ್ಟ್ರ ತತ್ತರಿಸಿಹೋಗಿದೆ.

ಅಸಲಿಗೆ ಹೆಣ್ಣುಮಕ್ಕಳ ವಿರುದ್ಧವಾಗಿರುವ ಇಲ್ಲಿನ ಒಂದೊಂದೇ ಕಾನೂನುಗಳನ್ನು ಕೇಳುತ್ತಾ ಹೋದರೆ ಅಸಹ್ಯ ಹುಟ್ಟಿಸುವಂತಿದೆ. ಹೆಣ್ಣಾಗಿ ಹುಟ್ಟುವುದೇ ತಪ್ಪು ಎನ್ನುವಂಥ ಕ್ರೌರ್ಯಯುತ ಕಾನೂನು ಇರಾನ್​ನಲ್ಲಿದೆ.  ಇಷ್ಟು ವರ್ಷಗಳವರೆಗೆ ಇಂಥ ಅತ್ಯಾಚಾರ, ಅನಾಚಾರ, ದೌರ್ಜನ್ಯ, ಹಿಂಸೆಗಳನ್ನು ಅನುಭವಿಸುತ್ತಾ ಬಂದಿರುವ ಹೆಣ್ಣುಮಕ್ಕಳು ಇವುಗಳಿಂದ ಬಿಡುಗಡೆ ಪಡೆಯಲು ಹಿಜಾಬ್​ ವಿಷಯವನ್ನು ಮುಂದಿಟ್ಟುಕೊಂಡು ಪ್ರತಿಭಟನೆಗೆ ಮುಂದಾಗಿದ್ದರೂ ಅಚ್ಚರಿಯೇನಿಲ್ಲ ಎನ್ನಿಸುತ್ತಿದೆ.

ಇಲ್ಲಿರುವ ಅತ್ಯಂತ ಹೇಸಿಗೆಯ ಕಾನೂನು ಎಂದರೆ, ತಂದೆಯೇ ಮಗಳನ್ನು ಮದುವೆಯಾಗಲು ಇಲ್ಲಿ ಅವಕಾಶ ಇರುವುದು! ಕೇಳಲು ಹಿಂಸೆ ಎನ್ನಿಸುವಂಥ ಕೆಟ್ಟ ಕಾನೂನು ಇರಾನ್​ನಲ್ಲಿ ಚಾಲ್ತಿಯಲ್ಲಿದೆ. ಅಂದರೆ ದತ್ತು ಮಗಳನ್ನು ಅಪ್ಪ ಮದುವೆಯಾಗಬಹುದು! ಮಗುವೆಯಾಗುವ ಉದ್ದೇಶಕ್ಕಾಗಿಯೇ ಚಿಕ್ಕ ಹೆಣ್ಣುಮಕ್ಕಳನ್ನು ಮಗಳು ಎಂದು ದತ್ತು ಪಡೆಯುವ ಕೆಟ್ಟ ಪದ್ಧತಿ ಇಲ್ಲಿದೆ.

ತಂದೆ ಮತ್ತು ದತ್ತು ಮಗಳ ಮದುವೆಯ ಕುರಿತು ಇರಾನ್​ನಲ್ಲಿಯೂ ಈ ಹಿಂದೆ ಭಾರಿ ಪ್ರತಿರೋಧ ಎದುರಾಗಿತ್ತು. ಮಹಿಳೆಯರು ಇದರ ವಿರುದ್ಧ ದನಿ ಎತ್ತಿದ್ದರು. ಇದರ ಫಲವಾಗಿಯೇ 2013ರಲ್ಲಿ, ಇರಾನ್ ಸಂಸತ್ತು ಈ ಮದುವೆಯನ್ನು ನಿಷೇಧ ಮಾಡಿತ್ತು. ಚಿಕ್ಕ ಹೆಣ್ಣುಮಕ್ಕಳನ್ನು ತಮ್ಮ ಚಟಕ್ಕೆ ಬಳಸಿಕೊಳ್ಳಲು ಹವಣಿಸುತ್ತಿದ್ದ ಇರಾನ್‌ನ ಧಾರ್ಮಿಕ ಮುಖಂಡರು (ಗಾರ್ಡಿಯನ್ ಕೌನ್ಸಿಲ್) ಇದಕ್ಕೆ ಬಿಡಲಿಲ್ಲ. ಅದಕ್ಕಾಗಿಯೇ ಈ ಕಾನೂನಿಗೆ ಅನುಮೋದನೆ ಸಿಗಲಿಲ್ಲ.

ಆದರೆ ಸಂಸತ್ತು ಸಂಪೂರ್ಣವಾಗಿ ಇದಕ್ಕೆ ಅನುಮೋದನೆ ನೀಡದಿದ್ದರೂ, ಕೋರ್ಟ್​ ಅನುಮತಿ ನೀಡಿದರೆ, ಷರತ್ತಿನ ಮೇಲೆ ವಿವಾಹವನ್ನು ನಡೆಸಬಹುದು ಎಂದು ಹೇಳಿತು. ಇದು ಕಾನೂನಾಗಿ ಜಾರಿಗೆ ಬಂದಿದೆ. ಕೋರ್ಟ್​ನ ಅನುಮತಿ ಪಡೆದುಕೊಂಡು ಚಿಕ್ಕಹೆಣ್ಣುಮಕ್ಕಳನ್ನು ಮದುವೆಯಾಗುವುದು ಹಲವರಿಗೆ ಈಗಲೂ ಇಲ್ಲಿ ಅತ್ಯಂತ ಸುಲಭವಾಗಿದ್ದು, ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಲೇ ಇದೆ.

ಇಲ್ಲಿರುವ ಮದುವೆಯ ಕಾನೂನಿನ ಅನ್ವಯ, ಮಹಿಳೆಯರು ಒಬ್ಬ ವ್ಯಕ್ತಿಯನ್ನು ಮಾತ್ರ ಮದುವೆಯಾಗಬೇಕು, ಆದರೆ ಪುರುಷ ಒಂದು ಬಾರಿ ನಾಲ್ವರನ್ನು ಮದುವೆಯಾಗಬಹುದು. ಮುಸ್ಲಿಂ ಮಹಿಳೆಯರು ಮುಸ್ಲಿಮೇತರರನ್ನು ಮದುವೆಯಾಗುವಂತಿಲ್ಲ. ಆದರೆ ಪುರುಷರು ಯಹೂದಿಗಳು, ಕ್ರಿಶ್ಚಿಯನ್ನರು ಮತ್ತು ಪಾರ್ಸಿಗಳನ್ನು ಮದುವೆಯಾಗಬಹುದು. ಮಹಿಳೆ ಕೋರ್ಟ್​ ಮೂಲಕ ಮಾತ್ರ ವಿಚ್ಛೇದನ ಪಡೆಯಬಹುದು, ಅದೂ ಕೂಡ ಪತಿ 5 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಜೈಲಿನಲ್ಲಿದ್ದರೆ, ಮಾನಸಿಕವಾಗಿ ಅಸ್ವಸ್ಥನಾಗಿದ್ದರೆ, ಮದ್ಯ ಸೇವಿಸುತ್ತಿದ್ದು ಹಿಂಸೆ ನೀಡುತ್ತಿರುವುದನ್ನು ಸಾಬೀತು ಮಾಡಿದರೆ ಅಷ್ಟೇ. ಆದರೆ ಗಂಡ ಮಾತ್ರ ತನ್ನ ಹೆಂಡತಿಗೆ ಕೇವಲ ಮಾತಿನಲ್ಲೇ ಯಾವಾಗ ಬೇಕಾದರೂ, ಯಾವುದೇ ಕಾರಣ ಇಲ್ಲದೆಯೇ ವಿಚ್ಛೇದನ ಕೊಡಬಹುದು.

ಇನ್ನು ಇರಾನ್​ನಲ್ಲಿರುವ ಮದುವೆಯ ವಯಸ್ಸಿಗೆ ಸಂಬಂಧಿಸಿದ ಕಾನೂನಿನ ವಿಷಯಕ್ಕೆ ಬಂದಾಗಲೂ ಭಾರತೀಯರು 'ಥೂ' ಎಂದರೆ ಅಚ್ಚರಿಯಿಲ್ಲ. 1979ಕ್ಕಿಂತ ಮೊದಲು ಹೆಣ್ಣುಮಕ್ಕಳ ಮದುವೆಯ ವಯಸ್ಸು 18 ಇತ್ತು. ಆದರೆ 1979ರಲ್ಲಿ ಅದನ್ನು 13ಕ್ಕೆ ಇಳಿಸಲಾಯಿತು. 1982ರಲ್ಲಿ ವಯಸ್ಸು 9 ವರ್ಷಕ್ಕೆ ಇಳಿಯಿತು! ಈ ಬಗ್ಗೆ ಪ್ರತಿರೋಧ ಬಂದಿದ್ದರಿಂದ 2002ರಲ್ಲಿ ಸ್ವಲ್ಪ ಬದಲಾವಣೆ ಮಾಡಿ ಪುನಃ ಹೆಣ್ಣುಮಕ್ಕಳ ಮದುವೆಯ ವಯಸ್ಸು 13 ಹಾಗೂ ಗಂಡುಮಕ್ಕಳ ವಯಸ್ಸು 15 ಎಂದು ನಿಗದಿಪಡಿಸಲಾಗಿದೆ. (ಏಜೆನ್ಸೀಸ್​)