ವಾಷಿಂಗ್ಟನ್: ಖ್ಯಾತ ರೂಪದರ್ಶಿಯಂತೆ ಕಾಣಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ ನಟಿಯೊಬ್ಬಳು, ಕೊನೆಗೆ ತಾನು ಮೊದಲಿನಂತೆಯೇ ಆಗಲು ಪುನಃ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾಳೆ. ಕಳೆದ 12 ವರ್ಷಗಳಲ್ಲಿ 40ಕ್ಕೂ ಹೆಚ್ಚು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ಈ ವಿಚಿತ್ರ ನಟಿಯ ಹೆಸರು ಜೆನ್ನೀಫರ್ ಪ್ಯಾಂಪಲೋನಾ.
ರಿಯಾಲಿಟಿ ಷೋನ ಸೂಪರ್‌ಸ್ಟಾರ್ ಎನಿಸಿಕೊಂಡಿರುವ ಜೆನ್ನೀಫರ್ ನೋಡಲು ಸುಂದರವಾಗಿಯೇ ಇದ್ದಳು. ಆದರೆ ಆಕೆಗೆ ಹಾಲಿವುಡ್ ತಾರೆ, ಖ್ಯಾತ ರೂಪದರ್ಶಿ ಕಿಮ್ ಕಾರ್ಡಶಿಯನ್ ಕಂಡರೆ ತುಂಬಾ ಅಭಿಮಾನ. ಈ ಅಭಿಮಾನ ಎಷ್ಟರಮಟ್ಟಿಗೆ ಎಂದರೆ ಆಕೆಯಂತೆಯೇ ತಾನು ಕಂಡರೆ ಇನ್ನೂ ಹೆಚ್ಚು ಪ್ರಚಾರ ಸಿಗುತ್ತದೆ ಎಂಬ ನಂಬಿಕೆ. ಇದೇ ಕಾರಣಕ್ಕೆ ಹಲವಾರು ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಳು.
ಕೊನೆಗೂ ಆಕೆಯ ಆಸೆ ಈಡೇರಿತು. ಕಿಮ್ ಕಾರ್ಡಶಿಯನ್ ರೀತಿಯಲ್ಲಿಯೇ ಮಾಡಿದ ಪ್ಲಾಸ್ಟಿಕ್ ಸರ್ಜರಿ ಯಶಸ್ವಿಯಾಯಿತು. ಇದಕ್ಕಾಗಿ ಈಕೆ ಖರ್ಚು ಮಾಡಿದ್ದು, 600 ಸಾವಿರ ಡಾಲರ್ (ಸುಮಾರು 4.77 ಕೋಟಿ ರೂಪಾಯಿ). ಎಲ್ಲರೂ ತನ್ನನ್ನು ಕಿಮ್ ಕಾರ್ಡಶಿಯನ್ ರೀತಿಯಲ್ಲಿಯೇ ಗುರುತಿಸುತ್ತಿದ್ದುದರಿಂದ ಭಾರಿ ಖುಷಿಪಟ್ಟಳು ಜೆನ್ನೀಫರ್.
ಹೀಗೆ ದಿನ ಕಳೆದಂತೆ ಜನರು ಈಕೆಯನ್ನು ಕಿಮ್ ಕಾರ್ಡಶಿಯನ್ ಎಂದೇ ಗುರುತಿಸತೊಡಗಿದರು. ಇದು ಅವಳಿಗೆ ಕಿರಿಕಿರಿ ಉಂಟು ಮಾಡಲು ಶುರು ಮಾಡಿತು. ತನ್ನ ಅಸಲಿಯತ್ತು ಬಿಟ್ಟು ಬೇರೊಬ್ಬಳ ಹೆಸರಿನಿಂದ ಜನ ಗುರುತಿಸುವುದನ್ನು ಸಹಿಸಲು ಆಗಲಿಲ್ಲ ಜೆನ್ನೀಫರ್ಗೆ.
ರಿಯಾಲಿಟಿ ಷೋನಿಂದಾಗಿ ಜನ ನನ್ನನ್ನು ಗುರುತಿಸುತ್ತಿದ್ದರು. ಈ ಹಂತಕ್ಕೆ ಬರಲು ಸಾಕಷ್ಟು ಶ್ರಮ ವಹಿಸಿದ್ದೆ. ಸಾಕಷ್ಟು ಓದಿದ್ದೇನೆ. ನಟಿ ಮಾತ್ರವಲ್ಲದೇ ಹೆಸರಾಂತ ಉದ್ಯಮಿ ಕೂಡ ಆಗಿದ್ದೇನೆ. ನನ್ನ ವೈಯಕ್ತಿಕ ಜೀವನದಲ್ಲಿ ಈ ಎಲ್ಲ ಸಾಧನೆಗಳನ್ನು ಹೊಂದಿದ್ದೇನೆ. ಆದರೆ, ಜನರು ನನ್ನನ್ನು ಜನ್ನೀಫರ್ ಎಂದು ಗುರುತಿಸುವುದನ್ನು ಬಿಟ್ಟೇ ಬಿಟ್ಟಿದ್ದಾರೆ. ಎಲ್ಲರೂ ಕಿಮ್ ಕಾರ್ಡಶಿಯನ್ ಎಂದೇ ಗುರುತಿಸುತ್ತಿದ್ದಾರೆ. ಇದನ್ನು ಸಹಿಸಲು ಆಗುತ್ತಿಲ್ಲ ಎಂದು ನೋವು ತೋಡಿಕೊಂಡ ಜನ್ನೀಫರ್ ಕೊನೆಗೆ ನಿರ್ಧಾರ ಮಾಡಿ ತನ್ನ ಮೊದಲ ಸ್ವರೂಪವನ್ನು ಪಡೆಯಲು ಇಚ್ಛಿಸಿದ್ದಾರೆ!
ಅಸಲಿ ರೂಪಕ್ಕಾಗಿ ಮತ್ತೆ ಪ್ಲಾಸ್ಟಿಕ್ ಸರ್ಜರಿ ಮೊರೆ ಹೋಗಿದ್ದಾರೆ. ಈಗಾಗಲೇ ಇದಕ್ಕೆ 120 ಸಾವಿರ ಡಾಲರ್ ( 95.50 ಲಕ್ಷ ರೂಪಾಯಿ) ಖರ್ಚಾಗಿದ್ದು, ಇನ್ನೂ ಸರ್ಜರಿ ನಡೆಯುತ್ತಿದೆ!
ಅಂದಹಾಗೆ ಈಕೆಗೆ ಈಗ 29 ವರ್ಷ ವಯಸ್ಸು. 17ನೇ ವಯಸ್ಸಿನಲ್ಲಿ ಇದ್ದಾಗಲೇ ಪ್ಲಾಸ್ಟಿಕ್ ಸರ್ಜರಿ ಖಯಾಲಿ ಹುಟ್ಟಿದೆ. ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಮತ್ತು ಜನಪ್ರಿಯತೆ ಗಿಟ್ಟಿಸಿಕೊಳ್ಳುವ ಸಲುವಾಗಿಯೇ ಈ ಪ್ರಮಾಣದ ಪ್ಲಾಸ್ಟಿಕ್ ಸರ್ಜರಿಗೆ ಮೂಲ ಕಾರಣ ಎಂದು ಹೇಳಲಾಗುತ್ತಿದ್ದು, ಅದರಂತೆ ಈಗ ಭಾರಿ ಸುದ್ದಿಯಂತೂ ಆಗುತ್ತಿದ್ದಾಳೆ.