ನ್ಯೂಸ್

VIDEO: ಮಹಿಳೆ ಜೀವಕ್ಕೆ ಆಪತ್ತು ತರಲೆಂದೇ ಕಾಯುತ್ತಿತ್ತು ತೆಂಗಿನಕಾಯಿ! ಅಬ್ಬಬ್ಬಾ ಎನ್ನುವ ವಿಡಿಯೋ ವೈರಲ್​

ಕೌಲಾಲಂಪುರ (ಮಲೇಷಿಯಾ): ಸಾವು, ಆಪತ್ತು ಅಂದರೆ ಹಾಗೆನೇ. ಯಾರಿಗೂ ಕೇಳಿ ಬರಲ್ಲ, ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಆಪತ್ತು ಹುಡುಕಿ ಬರುತ್ತದೆ. ಫುಟ್​ಪಾಥ್​ ಮೇಲೆ ಸರಿಯಾಗಿ ನಡೆದುಕೊಂಡು ಹೋಗುತ್ತಿದ್ದರೂ ವಾಹನ ಚಲಾಯಿಸಿ ಸಾವು ತರುವುದು, ವಾಹನದಲ್ಲಿ ಸರಿಯಾಗಿಯೇ ಹೋಗುತ್ತಿದ್ದರೂ ಅಡ್ಡಾದಿಡ್ಡಿ ಬರುವವರು ಗುದ್ದುವುದು... ಹೀಗೆ ಅಪಾಯಗಳು ಹೀಗೆಯೇ ಬರುತ್ತವೆ ಎಂದು ಹೇಳುವುದು ಕಷ್ಟ. ಒಂದೇ ಒಂದು ಸೆಕೆಂಡ್​ ಹೆಚ್ಚೂ ಕಮ್ಮಿಯಾಗಿದ್ದರೂ ಜೀವ ಉಳಿಯುತ್ತಿತ್ತು ಎಂದು ಅದೆಷ್ಟೋ ಬಾರಿ ಹೇಳಿಕೊಳ್ಳುವುದು ಉಂಟು.

ಅಂಥದ್ದೇ ಒಂದು ದುರ್ಘಟನೆ ಮಲೇಷಿಯಾದಲ್ಲಿ ನಡೆದಿದೆ. ಇಂಥ ಅನೇಕ ಘಟನೆಗಳು ನಡೆಯುತ್ತಿದ್ದರೂ ಸಿಸಿವಿಟಿಯಲ್ಲಿ ಇದರ ವಿಡಿಯೋ ಸೆರೆ ಸಿಕ್ಕಿರುವ ಹಿನ್ನೆಲೆಯಲ್ಲಿ, ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ.

ಈ ವಿಡಿಯೋದಲ್ಲಿ ನಾವು ನೋಡುವುದು ಏನೆಂದರೆ, ಹೆದ್ದಾರಿಯಲ್ಲಿ ಮಹಿಳೆಯೊಬ್ಬರು ಬೈಕ್​ ಹಿಂದುಗಡೆ ಕುಳಿತು ಹೋಗುತ್ತಿದ್ದಾರೆ. ಆಗ ಏಕಾಏಕಿ ಬೈಕ್​ನಿಂದ ಧೊಪ್​ ಎಂದು ಬಿದ್ದಿದ್ದಾರೆ. ಇದಕ್ಕೆ ಕಾರಣ, ಅವರ ತಲೆಯ ಮೇಲೆ ತೆಂಗಿನಕಾಯಿ ಬಿದ್ದಿರುವುದು!

ತೆಂಗಿನಕಾಯಿ ಬಿದ್ದ ರಭಸಕ್ಕೆ ಆಯತಪ್ಪಿ ಮಹಿಳೆ ನೆಲಕ್ಕುರುಳಿದ್ದಾರೆ. ತಲೆಗೆ ಹೆಲ್ಮೆಟ್​ ಇದ್ದುದರಿಂದ ಪ್ರಾಣಕ್ಕೆ ಅಪಾಯವಾಗಲಿಲ್ಲ, ಅಷ್ಟೇ ಅಲ್ಲದೇ ಆ ಸಮಯದಲ್ಲಿ ಹಿಂದುಗಡೆಯಿಂದ ಯಾವುದೇ ವಾಹನಗಳು ಬರುತ್ತಿರಲಿಲ್ಲ. ಇಲ್ಲದಿದ್ದರೆ ಮಹಿಳೆ ಸ್ಥಳದಲ್ಲಿಯೇ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇತ್ತು.

ಕೆಲವು ಸೆಕೆಂಡುಗಳ ಈ ವಿಡಿಯೋ ಭಾರಿ ವೈರಲ್​ ಆಗಿದೆ. ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ವರದಿಯಾಗಿದೆ.

ಅದರ ವಿಡಿಯೋ ಇಲ್ಲಿದೆ ನೋಡಿ: ಕೃಪೆ ENTERTAINMENT TREE