ಚೆನ್ನೈ: ತಾನೊಬ್ಬ ಕಾಲಜ್ಞಾನಿ ಎಂದು ಸ್ವಯಂ ಘೋಷಿಸಿಕೊಂಡ ವ್ಯಕ್ತಿಯೊಬ್ಬ ಜೀವಂತವಾಗಿರುವಾಗಲೇ ಸಮಾಧಿಯಾಗಿರುವ ಭಯಾನಕ ಘಟನೆ ತಮಿಳುನಾಡಿನ ಪೆರುಂಬಕ್ಕಂ ಎಂಬಲ್ಲಿ ನಡೆದಿದೆ. ಪತಿಯ ಆಜ್ಞೆಯ ಮೇರೆಗೆ ಪತ್ನಿಯೇ ಖುದ್ದಾಗಿ ಸಮಾಧಿ ಮಾಡಿರುವ ಘಟನೆ ಇದಾಗಿದೆ.
ಕಲೈಂಗಾರ್ ಕರುಣಾನಿಧಿ ನಗರದ ನಿವಾಸಿ ನಾಗರಾಜ್ ಎಂಬಾತ ಇಂಥದ್ದೊಂದು ಸಾಹಸಕ್ಕೆ ಕೈಹಾಕಿ ಪ್ರಾಣ ಕಳೆದುಕೊಂಡಿದ್ದಾನೆ. ಸ್ವಯಂ ಘೋಷಿತ ಕಾಲಜ್ಞಾನಿ ಆಗಿದ್ದ ಮತ್ತು ಆತ ತಾನು ದೇವರೊಂದಿಗೆ ಸಂಭಾಷಣೆ ನಡೆಸಿರುವೆ ಎಂದು ಹೇಳಿಕೊಳ್ಳುತ್ತಿದ್ದ. ಈತನೊಬ್ಬ ಕಾಲಜ್ಞಾನಿ ಎಂದು ಸುತ್ತಲಿನವರೂ ನಂಬಿದ್ದರು. ಇದೇ ನಂಬಿಕೆಯೊಂದಿಗೆ ಆತ ಮನೆಯ ಹಿತ್ತಲಿನಲ್ಲಿ ದೇವಾಲಯವೊಂದನ್ನು ಕೂಡ ನಿರ್ಮಿಸಿಕೊಂಡಿದ್ದು, ಅಲ್ಲಿ ಜನರಿಗೆ ಭವಿಷ್ಯ ಹೇಳುತ್ತಿದ್ದ.
ಆಗಿದ್ದೇನು?
ಇದೇ 26ನೇ ತಾರೀಖಿನಂದು ನಾಗರಾಜ್‌ಗೆ ಸ್ವಲ್ಪ ಎದೆನೋವು ಕಾಣಿಸಿಕೊಂಡಿದೆ. ಕಾಲಜ್ಞಾನಿ ಎಂದು ಖುದ್ದು ಅಂದುಕೊಂಡಿದ್ದ ಈತನಿಗೆ ತನ್ನ ಸಾವು ಸಮೀಪಿಸಿದೆ ಎಂದು ಎನಿಸಿದೆ. ಇದೇ ಕಾರಣಕ್ಕೆ ಹೆಂಡತಿ ಲಕ್ಷ್ಮಿಯನ್ನು ಹತ್ತಿರಕ್ಕೆ ಕರೆದು, ಸದ್ಯದಲ್ಲೆ ತಾನು ಸಾಯುತ್ತಿದ್ದೇನೆ. ಆದ್ದರಿಂದ ಸತ್ತ ಮೇಲೆ ಸಮಾಧಿ ಮಾಡುವುದು ನನಗೆ ಇಷ್ಟವಿಲ್ಲ. ಆದ್ದರಿಂದ ದೇಹದಲ್ಲಿ ಸ್ವಲ್ಪ ಪ್ರಾಣ ಇರುವಾಗಲೇ ಜೀವಂತವಾಗಿ ಸಮಾಧಿ ಮಾಡು. ಹೀಗೆ ಮಾಡಿದರೆ ನಾನು ಅಮರತ್ವ ಪಡೆಯಲು ಸಹಾಯ ಆಗುತ್ತದೆ ಎಂದಿದ್ದಾನೆ.
ದಂಪತಿ ನಡುವೆ ಮಾತುಕತೆ ನಡೆದು ಕೊನೆಗೂ ಹೆಂಡತಿ ಇದಕ್ಕೆ ಒಪ್ಪಿಕೊಂಡಿದ್ದಾಳೆ. ನಂತರ ಇಬ್ಬರು ವ್ಯಕ್ತಿಗಳನ್ನು ಕರೆಸಿ ಗುಂಡಿ ತೋಡಿದ್ದಾಳೆ. ಅವರಿಗೆ ನೀರಿನ ತೊಟ್ಟಿಗಾಗಿ ಗುಂಡಿ ಬೇಕಾಗಿದೆ ಎಂದು ಸುಳ್ಳು ಹೇಳಿದ್ದಾಳೆ. ನಂತರ ಪ್ರಜ್ಞಾಹೀನನಾಗಿದ್ದ ಪತಿಯನ್ನು ಅದರಲ್ಲಿ ಹಾಕಿ ಜೀವಂತವಾಗಿ ಸಮಾಧಿ ಮಾಡಿದ್ದಾಳೆ!
ಇವರ ಮಗಳ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಈ ಸಂದರ್ಭದಲ್ಲಿ ಪ್ರವಾಸಕ್ಕೆ ಹೋಗಿದ್ದಳು. ಮನೆಗೆ ವಾಪಸಾದಾಗ ತಾಯಿಯ ಮುಖದಲ್ಲಾದ ಬದಲಾವಣೆ ಹಾಗೂ ತಂದೆ ಮನೆಯಲ್ಲಿ ಇರದ್ದನ್ನು ನೋಡಿದ್ದಾಳೆ. ತಂದೆ ಎಲ್ಲಿ ಎಂದು ಕೇಳಿದಾಗ ಅವರು ಮನೆಬಿಟ್ಟು ಎಲ್ಲಿಯೋ ಹೋದರು ಎಂದು ಲಕ್ಷ್ಮಿ ಹೇಳಿದ್ದಾಳೆ. ತಾಯಿಯ ಮಾತಿನಿಂದ ಅನುಮಾನಗೊಂಡ ಮಗಳು ತಾಯಿಯ ಬಾಯಿಬಿಡಿಸಿದಾಗ ಇರುವ ವಿಷಯವನ್ನು ಹೇಳಿದ್ದಾಳೆ.
ಕೂಡಲೇ ಮಗಳು ಹೋಗಿ ಪೊಲೀಸರಲ್ಲಿ ದೂರು ದಾಖಲಿಸಿದ್ದಾಳೆ. ಪೊಲೀಸರು ಶವವನ್ನು ಹೊರಕ್ಕೆ ತೆರೆದು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ. ಸಮಾಧಿ ಮಾಡಲ್ಪಟ್ಟ ಸಂದರ್ಭದಲ್ಲಿ ನಾಗರಾಜ, ಜೀವಂತವಾಗಿ ಇದ್ದನೇ ಅಥವಾ ಸಾವನ್ನಪ್ಪಿದ್ದನೇ ಎಂಬುವುದನ್ನು ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ತಿಳಿಸಲು ಸಾಧ್ಯ ಎಂದು ಅವರು ಹೇಳಿದ್ದಾರೆ.