ನ್ಯೂಸ್

ನೂಪುರ್​ ವಿವಾದಕ್ಕೆ ಭಾರಿ ಟ್ವಿಸ್ಟ್​- ಹಿಂದೂಗಳೇ ನಾಚಿಕೆ ಇಲ್ವಾ ಎಂದು ಈಗ ತಸ್ಲೀಮ್ ವಿರುದ್ಧ ತಿರುಗಿ ಬಿದ್ದ ನೆಟ್ಟಿಗರು

suchetana

ನವದೆಹಲಿ: ಬಿಜೆಪಿ ಮುಖಂಡೆ ನೂಪುರ್​ ಶರ್ಮಾ ಪ್ರವಾದಿ ಮೊಹಮ್ಮದ್​ ಕುರಿತು ನೀಡಿರುವ ಹೇಳಿಕೆ ಹಲವು ದಿನಗಳಿಂದ ಭಾರಿ ವಿವಾದ ಸೃಷ್ಟಿಸಿದೆ. ಕಾಂಗ್ರೆಸ್ಸಿಗರು ಸೇರಿದಂತೆ ಇಸ್ಲಾಮಿಕ್​ ರಾಷ್ಟ್ರಗಳು ಈ ಹೇಳಿಕೆ ವಿರುದ್ಧ ಇನ್ನಿಲ್ಲದ ಟೀಕೆಗಳನ್ನು ಮಾಡುತ್ತಿವೆ. ನೂಪುರ್​ ಶರ್ಮಾ ಹೇಳಿಕೆಯನ್ನು ಬೆಂಬಲಿಸಿದ ಒಂದೇ ಕಾರಣಕ್ಕೆ ರಾಜಸ್ಥಾನದ ಉದಯಪುರದಲ್ಲಿ ಟೈಲರ್​ ಕನ್ಹಯ್ಯಲಾಲ್​ ಅವರ ಬರ್ಬರ ಹತ್ಯೆಯನ್ನೂ ಮಾಡಲಾಗಿದ್ದು, ಈ ಹಿಂಸಾಚಾರ ಇನ್ನಷ್ಟು ಉಗ್ರ ರೂಪ ಪಡೆಯುತ್ತಲೇ ಇದೆ.

ಮುಸ್ಲಿಂ ಧರ್ಮಗುರು ಜಾಕಿರ್ ನಾಯ್ಕ್ ಅವರು ಭಾಷಣವೊಂದಲ್ಲಿ ಪ್ರವಾದಿ ಮೊಹಮ್ಮದ್​ ಕುರಿತು ಹೇಳಿರುವ ಹೇಳಿಕೆಯನ್ನೇ ವಿಡಿಯೋ ಸಹಿತವಾಗಿ ಸಾಕ್ಷ್ಯಾಧಾರ ನೀಡುವ ಮೂಲಕ ನೂಪುರ್​ ಪುನರುಚ್ಚರಿಸಿದ್ದರು. ಆದರೆ ನೂಪುರ್​ ನೀಡಿರುವ ಹೇಳಿಕೆಯನ್ನು ಮುಂದಿಟ್ಟುಕೊಂಡು ಇಡೀ ದೇಶಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ ಒಂದು ವರ್ಗ.

ಆದರೆ ಈ ನಡುವೆಯೇ ಭಾರಿ ಕುತೂಹಲದ ಅಭಿಯಾನವೊಂದು ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ. ಅದೇ ಅರೆಸ್ಟ್​ ತಸ್ಲೀಮ್​ ರೆಹಮಾನಿ (#ArrestTasleemRahmani) ಎಂಬ ಹ್ಯಾಷ್​ಟ್ಯಾಗ್​ ಬಳಸಿ ಇವರನ್ನು ಅರೆಸ್ಟ್​ ಮಾಡುವಂತೆ ಚಳವಳಿಯನ್ನು ಶುರು ಮಾಡಲಾಗಿದೆ.

ಹಾಗಿದ್ದರೆ ಯಾರೀ ತಸ್ಲೀಮ್​ ರೆಹಮಾನಿ? ಇವರಿಗೂ ನೂಪುರ್​ ಶರ್ಮಾರ ಹೇಳಿಕೆಗೂ ಏನು ಸಂಬಂಧ ಎನ್ನುವ ವಿವರ ಇಲ್ಲಿದೆ ನೋಡಿ:

ಮುಸ್ಲಿಂ ರಾಜಕೀಯ ಮಂಡಳಿಯ ಅಧ್ಯಕ್ಷ, ಸೋಷಿಯಲ್​ ಡೆಮಾಕ್ರಟಿಕ್ ಪಾರ್ಟಿ ಆಫ್​ ಇಂಡಿಯಾದ ಮುಖಂಡರಾಗಿದ್ದಾರೆ ತಸ್ಲೀಮ್​ ರೆಹಮಾನಿ. ನೂಪುರ್​ ಶರ್ಮಾ ಅವರು ಪ್ರವಾದಿ ಮೊಹಮ್ಮದ್​ ಕುರಿತು ಹೇಳಿಕೆ ನೀಡಲು ಕಾರಣ ಇದೇ ತಸ್ಲೀಮ್​. ರಾಷ್ಟ್ರೀಯ ವಾಹಿನಿಯೊಂದರಲ್ಲಿ ತಸ್ಲೀಮ್​ ರೆಹಮಾನಿ ಶಿವ ಹಾಗೂ ಶಿವಲಿಂಗದ ಕುರಿತು ಅತ್ಯಂತ ಕೆಟ್ಟದ್ದಾಗಿ ಮಾತನಾಡಿದ್ದರು. ಜ್ಞಾನವಾಪಿಯಲ್ಲಿ ಶಿವಲಿಂಗದ ಬಗ್ಗೆ ಹಿಂದೂ ನಂಬಿಕೆಯನ್ನು ಅಪಹಾಸ್ಯಗೊಳಿಸುವಂತೆ, ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತೆ ಈ ಹೇಳಿಕೆಯನ್ನು ನೀಡಲಾಗಿತ್ತು.

ಮೇ 26 ರ ರಾತ್ರಿ ಟೈಮ್ಸ್ ನೌ ಚಾನೆಲ್‌ನಲ್ಲಿ ಈ ಸಂದರ್ಶನದ ನೇರ ಪ್ರಸಾರ ಕೂಡ ಆಗಿತ್ತು. ಈ ಕಾರ್ಯಕ್ರಮದಲ್ಲಿ ನೂಪುರ್ ಶರ್ಮಾ, ತಸ್ಲೀಮ್ ರೆಹಮಾನಿ ಭಾಗವಹಿಸಿದ್ದರು. ಶಿವನ ಕುರಿತು ತಸ್ಲೀಮ್ ರೆಹಮಾನಿ ನೀಡಿದ್ದ ಹೇಳಿಕೆಯನ್ನು ಕೇಳಿ ನೂಪುರ್​ ಶರ್ಮಾ ಅವರಿಗೆ ಸಹಿಸಿಕೊಳ್ಳುವುದು ಅಸಾಧ್ಯವಾಯಿತು. ಇದೇ ಕಾರಣಕ್ಕೆ ಹದೀಸ್‌ನಲ್ಲಿ ಬರೆದದ್ದನ್ನೇ ತಾವು ಉಲ್ಲೇಖಿಸುತ್ತಿರುವುದಾಗಿ ಹೇಳುವ ಮೂಲಕ ಪ್ರವಾದಿ ಮೊಹಮ್ಮದ್​ ಅವರ ಕುರಿತು ಹೇಳಿಕೆ ನೀಡಿದ್ದರು. ಕೊನೆಗೆ ಇದು ರಾಜಕೀಯ ಸ್ವರೂಪ ಪಡೆದು ಮೂಲ ವಿಚಾರವನ್ನು ಕೈಬಿಟ್ಟ ಒಂದು ವರ್ಗ ಬಿಜೆಪಿಗೆ ಸೇರಿದ ನೂಪುರ್​ ವಿರುದ್ಧ ತಿರುಗಿಬಿದ್ದು, ಹಿಂಸಾಚಾರದ ರೂಪ ಪಡೆಯುವ ಮಟ್ಟಿಗೆ ಈ ಘಟನೆಯನ್ನು ಕೊಂಡೊಯ್ದರು.

ಆದ್ದರಿಂದ ಕಂಡಕಂಡಲ್ಲಿ ನೂಪುರ್​ ಶರ್ಮಾ ಅವರ ವಿರುದ್ಧ ಕೇಸ್​ ಹಾಕಿರುವಾಗ, ಸುಪ್ರೀಂಕೋರ್ಟ್​ ಕೂಡ ದೇಶದ ಕ್ಷಮೆ ಕೋರುವಂತೆ ನೂಪುರ್​ ಅವರಿಗೇ ಸೂಚಿಸಿರುವಾಗ, ಈ ಘಟನೆಗೆ ಮೂಲ ಕಾರಣರಾಗಿರುವ ತಸ್ಲೀಮ್ ರೆಹಮಾನಿ ವಿರುದ್ಧ ಒಂದೇ ಒಂದು ಕೇಸ್​ ದಾಖಲಾಗಲಿಲ್ಲವೇಕೆ ಎಂದು ಹಿಂದೂಗಳು ರೊಚ್ಚಿಗೆದ್ದಿದ್ದಾರೆ. ಆದ್ದರಿಂದ ಅರೆಸ್ಟ್​ ತಸ್ಲೀಮ್​ ರೆಹಮಾನಿ (#ArrestTasleemRahmani) ಎಂಬ ಹ್ಯಾಷ್​ಟ್ಯಾಗ್​ ಬಳಸಿ ಅಭಿಯಾನ ಶುರು ಮಾಡಿದ್ದಾರೆ. ಹಿಂದೂಗಳೇ ನಿಮಗೆ ನಾಚಿಕೆಯಾಗುವುದಿಲ್ಲವೆ? ನಿಮ್ಮ ದೇವರನ್ನು ಹೀಯಾಳಿಸಿದವರನ್ನು ಬಿಟ್ಟು, ಅದರ ವಿರುದ್ಧ ದನಿ ಎತ್ತಿರುವ ವಿರುದ್ಧ ಮಾತನಾಡುತ್ತಿರುವಿರಾ ಎಂದೆಲ್ಲಾ ಪ್ರಶ್ನೆಗಳನ್ನು ಜಾಲತಾಣದಲ್ಲಿ ಕೇಳಲಾಗುತ್ತಿದೆ.