ಪ್ಯಾರಿಸ್: ಭೂಮಿಯ ನೈಸರ್ಗಿಕ ಉಪಗ್ರಹ ಚಂದ್ರನ ಮೇಲೆ ನಡೆಯುತ್ತಿರುವ ಅಧ್ಯಯನ ಇಂದು ನಿನ್ನೆಯದ್ದಲ್ಲ. ಇದಾಗಲೇ ಹಲವಾರು ಅಧ್ಯಯನಗಳು ಚಂದ್ರನ ಮೇಲೆ ನಡೆದಿವೆ. ಚಂದ್ರನ ಮೇಲೆ ನೀರಿದೆ ಎಂದು ಈಗಾಗಲೇ ಕೆಲವು ಸಂಶೋಧಕರು ಕಂಡುಹಿಡಿದಿದ್ದಾರೆ.
ಇದೀಗ ಹೊಸ ಸಂಶೋಧನೆಯಲ್ಲಿ, ಈ ಹಿಂದೆ ಅಂದಾಜಿಸಿರುವುದಕ್ಕಿಂತಲೂ ಚಂದ್ರನಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಇದೆ ಎಂದು ನಾಸಾ ಹೇಳಿದೆ. ಪ್ರಾರಂಭದ ಅಧ್ಯಯನಗಳು ಶೇ 20ರಷ್ಟು ನೀರು ಚಂದ್ರನಲ್ಲಿ ಲಭ್ಯವಿದೆ ಎಂದು ಹೇಳಿದ್ದವು. ಕೊಲರ್ಡೊ ಪಾಲ್ ಹೆಯ್ನ್ ವಿಶ್ವವಿದ್ಯಾಲಯದ ತಂಡದ ಅಧ್ಯಯನದ ಪ್ರಕಾರ ಚಂದ್ರನಲ್ಲಿ ಹಿಮದ ರೂಪದಲ್ಲಿ 40 ಸಾವಿರ ಚದರ ಕಿ.ಮೀ ವ್ಯಾಪ್ತಿಗಿಂತಲೂ ಹೆಚ್ಚಿನ ಭಾಗದಲ್ಲಿ ನೀರು ಇದೆ.
ಚಂದ್ರನ ಕೆಲವು ಸ್ಥಳಗಳಲ್ಲಿ ನೀರು ಹೇರಳವಾಗಿದೆ ಎಂದಿರುವ ಮೇರಿಲ್ಯಾಂಡ್‌ನ ನಾಸಾದ ಗೊಡ್ಡಾರ್ಡ್ ಬಾಹ್ಯಾಕಾಶ ಹಾರಾಟ ಕೇಂದ್ರದ ಕೇಸಿ ಹೊನ್ನಿಬಾಲ್, ಚಂದ್ರನ ಮೇಲಿರುವ ನೀರು ಕುಡಿಯಲು ಬಳಸಬಹುದಾಗಿದೆ, ಇದನ್ನು ಉಸಿರಾಡುವ ಆಮ್ಲಜನಕ ಮತ್ತು ರಾಕೆಟ್ ಇಂಧನವಾಗಿಯೂ ಬಳಸಬಹುದು ಎಂದು ತಿಳಿಸಿದ್ದಾರೆ.
ಚಂದ್ರನ ಅನೇಕ ಭಾಗಗಳಲ್ಲಿ ನೆರಳು ಕವಿದಿರುವ ಜಾಗಗಳು, ಸಣ್ಣ ಬಾವಿಗಳು ಹಾಗೂ ಕುಳಿಗಳಲ್ಲಿ ಶೀಥಲೀಕರಣಗೊಂಡ ನೀರು ಇದ್ದು, ಸೂರ್ಯನ ಬಿಸಿಲು ಬೀಳುವ ಮೇಲ್ಮೈನಲ್ಲಿ ಈ ಮುಂಚೆ ಲೆಕ್ಕಾಚಾರ ಹಾಕಿರುವುದಕ್ಕಿಂತಲೂ ಹೆಚ್ಚು ನೀರು ಅಸ್ತಿತ್ವದಲ್ಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಹಿಂದಿನ ಸಂಶೋಧನೆ ಚಂದ್ರನ ಮೇಲ್ಮೈ ಸ್ಕ್ಯಾನ್ ಮಾಡುವ ಮೂಲಕ ನೀರಿನ ಕುರುಹುಗಳನ್ನು ಕಂಡುಹಿಡಿದಿತ್ತು. ಆದರೆ, ನೀರು ಮತ್ತು ಹೈಡ್ರಾಕ್ಸಿಲ್ ನಡುವಿನ ವ್ಯತ್ಯಾಸವನ್ನು ಕಂಡುಹಿಡಿಯಲು ಸಾಧ್ಯವಾಗಿರಲಿಲ್ಲ. ಆದರೆ, ಹೊಸ ಅಧ್ಯಯನ ಚಂದ್ರನ ಮೇಲೆ ಸೂರ್ಯನ ಬೆಳಕು ಬೀಳುವ ಪ್ರದೇಶಗಳಲ್ಲಿಯೂ ನೀರಿದೆ ಎಂಬುದಕ್ಕೆ ಮತ್ತಷ್ಟು ಸಾಕ್ಷಿಗಳನ್ನು ಒದಗಿಸುತ್ತದೆ.
ನೇಚರ್ ಆಸ್ಟ್ರಾನೆಮಿ ಪತ್ರಿಕೆಯಲ್ಲಿ ಪ್ರಕಟವಾಗಿರುವ ಎರಡು ಹೊಸ ಅಧ್ಯಯನಗಳು, ಚಂದ್ರನ ಧ್ರುವ ಪ್ರದೇಶಗಳಲ್ಲಿ ಶಾಶ್ವತವಾಗಿ ನೆರಳು ಕವಿದಿರುವಲ್ಲಿ ಸಂಗ್ರಹಗೊಂಡಿರುವ ಹಿಮ ಸೇರಿದಂತೆ ಬಹುತೇಕ ಭಾಗಗಳಲ್ಲಿ ನೀರಿನ ಸೆಲೆಗಳಿವೆ ಎಂದು ತಿಳಿಸಿವೆ. ಸೂರ್ಯನ ಬೆಳಕು ಬೀಳುವ ಸ್ಥಳ ಸೇರಿದಂತೆ ಚಂದ್ರನಲ್ಲಿ ನೀರಿನ ಕಣಗಳು ಇರುವ ಬಗ್ಗೆ ರಾಸಾಯನಿಕ ಪುರಾವೆ ಸಿಕ್ಕಿದೆ.
ಭವಿಷ್ಯದಲ್ಲಿ ಬಾಹ್ಯಾಕಾಶಯಾನಿಗಳು ಚಂದ್ರನ ಮೇಲೆ ನೀರು ಅಥವಾ ಇಂಧನವನ್ನು ಪಡೆಯಬಹುದು ಎಂದು ನಾಸಾ ತಿಳಿಸಿದೆ.
ನಾಸಾದ ವಿಜ್ಞಾನಿಗಳು ಸೋಫಿಯಾ ಏರ್‌ಬೋನ್ ಟೆಲೆಸ್ಕೋಪ್ ದತ್ತಾಂಶ ಬಳಸಿಕೊಂಡು ಚಂದ್ರನ ಮೇಲೆ ಅಂದುಕೊಂಡಿದ್ದಕ್ಕಿಂತ ಹೆಚ್ಚು ನೀರಿದೆ ಎಂದು ಹೇಳಿದ್ದಾರೆ. ನೀರು ಗಾಜಿನ ಮಣಿಗಳಲ್ಲಿ ಸಿಕ್ಕಿಹಾಕಿಕೊಂಡಿರಬಹುದು ಅಥವಾ ಚಂದ್ರನ ಕಠಿಣ ವಾತಾವರಣದಿಂದ ಅದನ್ನು ರಕ್ಷಿಸುವ ಮತ್ತೊಂದು ವಸ್ತುವಿನಲ್ಲಿ ಸಿಲುಕಿರಬಹುದು ಎಂದು ಸಂಶೋಧಕರು ನಂಬಿದ್ದಾರೆ.