ನ್ಯೂಸ್

ಕೋಟಿ ಕೋಟಿ ವಂಚನೆ: ವಿವೋ ಮೊಬೈಲ್​ ಫೋನ್​ ಕಂಪೆನಿ ನಿರ್ದೇಶಕರು ಭಾರತದಿಂದ ಎಸ್ಕೇಪ್​!

ನವದೆಹಲಿ: ಕೋಟ್ಯಂತರ ರೂಪಾಯಿ ತೆರಿಗೆ ವಂಚನೆ ಮತ್ತು ಹಣದ ಅಕ್ರಮ ವರ್ಗಾವಣೆ ಆರೋಪ ಹೊತ್ತ ಚೀನಾ ಮೂಲದ ವಿವೋ ಕಂಪೆನಿಯ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಬುಧವಾರ (ಜುಲೈ 6) ದಾಳಿ ನಡೆಸಿತ್ತು. ವಿವೋ ಮುಖ್ಯ ಕಚೇರಿ ಮತ್ತು ಅದಕ್ಕೆ ಸಂಬಂಧಿಸಿದ 44 ಸ್ಥಳಗಳ ಮೇಲೆ ದಾಳಿ ನಡೆದಿತ್ತು. ಇದರ ಬೆನ್ನಲ್ಲಿಯೇ ಕಂಪೆನಿಯ ಇಬ್ಬರು ಪ್ರಮುಖ ನಿರ್ದೇಶಕರು ಭಾರತದಿಂದ ಪಲಾಯನ ಮಾಡಿದ್ದಾರೆ ಎಂದು ವರದಿಯಾಗಿದೆ.

ಚೀನಾದ ಸಂಸ್ಥೆಯ ವಿರುದ್ಧ ಇಡಿ ಅಧಿಕಾರಿಗಳು ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಉಲ್ಲಂಘನೆಯಡಿ ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ದಕ್ಷಿಣದ ಕೆಲ ರಾಜ್ಯಗಳ 40 ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ಮಾಡಿ ತೀವ್ರ ತಪಾಸಣೆಗೆ ಒಳಪಡಿಸಿದೆ. ಕಂಪೆನಿಯ ವಿರುದ್ಧ ಸೂಕ್ತ ದಾಖಲೆಗಳನ್ನು ಸಂಗ್ರಹಿಸಿದ ಬಳಿಕ, ಕಂಪೆನಿಯ ಪ್ರಮುಖರನ್ನು ವಿಚಾರಣೆಗೆ ಕರೆಸುವ ನಿಟ್ಟಿನಲ್ಲಿ ಜಾರಿ ನಿರ್ದೇಶನಾಲಯ ಚಿಂತನೆ ಮಾಡಿತ್ತು. ಈ ದಾಳಿಗೆ ಬೆಚ್ಚಿಬಿದ್ದು ನಿರ್ದೇಶಕರಾದ ಝೆಂಗ್‌ಶೆನ್ ಆವೂ ಮತ್ತು ಜಾಂಗ್ ಜೀ ಭಾರತದಿಂದ ಪಲಾಯನ ಮಾಡಿರುವುದಾಗಿ ವರದಿಯಾಗಿದೆ.

ಈಗ ಇವರ ಹಾಜರಿಗೆ ಲುಕ್ ಔಟ್ ಸುತ್ತೋಲೆಗಳನ್ನು ಹೊರಡಿಸುವ ಅಗತ್ಯವಿದೆಯೇ ಎಂದೂ ಇಡಿ ಪರಿಶೀಲನೆ ಮಾಡಲಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚೀನಾ, ವಿವೋ ಕಂಪೆನಿ ಭಾರತದ ಕಾನೂನು ಮತ್ತು ನಿಯಮಗಳಿಗೆ ಅನುಸಾರವಾಗಿ ನಡೆಯುತ್ತಿರುವ ತನಿಖೆಗಳಿಗೆ ಸಹಕರಿಸುತ್ತದೆ. ಗ್ರಾಹಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನ್ಯಾಯಯುತ ಮತ್ತು ತಾರತಮ್ಯರಹಿತ ವ್ಯಾಪಾರ ವಾತಾವರಣವನ್ನು ಒದಗಿಸುತ್ತದೆ ಎಂದು ಭರವಸೆ ನೀಡಿದೆ.