ಕುಪ್ವಾರಾ: ಭಾರತ-ಪಾಕಿಸ್ತಾನದ ಗಡಿಯ ವಾಸ್ತವಿಕ ಗಡಿ ನಿಯಂತ್ರಣ ರೇಖೆ ಸಮೀಪ ಮೂಲಸೌಕರ್ಯಗಳು ನಿರಂತರವಾಗಿ ಹೆಚ್ಚುತ್ತಿವೆ. ಗಡಿ ಪ್ರದೇಶದ ಜನರಿಗೆ ಎಲ್ಲಾ ರೀತಿಯ ಸೌಕರ್ಯಗಳನ್ನು ನೀಡಲು ಸರ್ಕಾರ ಕಾರ್ಯೋನ್ಮುಖವಾಗಿದ್ದು, ಇದೀಗ ವಿದ್ಯುತ್ನಲ್ಲಿ ಸಂಪೂರ್ಣ ಯಶ ಕಂಡಿದೆ.
ಇದೀಗ 70 ವರ್ಷಗಳಲ್ಲಿಯೇ ಇದೇ ಪ್ರಥಮ ಬಾರಿಗೆ ಭಾರತ-ಪಾಕಿಸ್ತಾನದ ಗಡಿ ಭಾಗದಲ್ಲಿರುವ ಕುಪ್ವಾರಾ ಜಿಲ್ಲೆಯ ಗಡಿ ಭಾಗದ ಹಳ್ಳಿಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಲಾಗಿದೆ! ಈ ಮೂಲಕ ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ 24 ಗಂಟೆಗಳ ವಿದ್ಯುತ್ ಸರಬರಾಜು ಪಡೆದ ಗ್ರಾಮವಾಗಿ ಕುಪ್ವಾರಾ ಜಿಲ್ಲೆಯ ಗಡಿ ಪ್ರದೇಶಗಳು ಹೊರಹೊಮ್ಮಿದೆ.
ಈ ಪ್ರದೇಶದಲ್ಲಿ ಚುನಾವಣೆಯ ಸಮಯದಲ್ಲಿ ಮತ ಕೇಳಲು ಹೋಗುತ್ತಿದ್ದವರಾರೂ ಇದುವರೆಗೆ ತಮ್ಮ ಸಮಸ್ಯೆಯನ್ನು ಆಲಿಸಿರಲಿಲ್ಲ ಎಂದು ಜನರು ಅಳಲು ತೋಡಿಕೊಂಡಿದ್ದಾರೆ. ಕನಿಷ್ಠ ಶೇ.60ರಷ್ಟು ಮತದಾನ ಈ ಪ್ರದೇಶದಲ್ಲಿ ಆಗುತ್ತದೆ. ಆದರೆ ವಿದ್ಯುತ್ ಮಾತ್ರ ಇದುವರೆಗೆ ಸಿಕ್ಕಿರಲಿಲ್ಲ.
ಹಿಮಚ್ಛಾದಿತ ಪ್ರದೇಶದಲ್ಲಿರುವ ಆ ಹಳ್ಳಿಗಳವರೆಗೆ ನೂರಾರು ಕಿ.ಮೀ.ಗಳವರೆಗೆ ವಿದ್ಯುತ್ ಲೈನ್‌ಗಳನ್ನು ಎಳೆದು, ಅಲ್ಲಿನ ಪ್ರತಿಯೊಂದು ಮನೆಗಳಿಗೂ ವಿದ್ಯುತ್ ಸಂಪರ್ಕವನ್ನು ಇದೀಗ ಕಲ್ಪಿಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆಯಂದು ಗಡಿಭಾಗದ ಕೇರನ್‌ಗೆ ವಿದ್ಯುತ್ ಕಲ್ಪಿಸಲಾಗಿತ್ತು. ಇದೀಗ ಎರಡನೇ ಹಂತದಲ್ಲಿ ಮಚಿಲ್ ವಲಯದ ಹಳ್ಳಿಗಳಿಗೂ ತಲುಪಿದೆ. ಈ ಮೂಲಕ ಭಾರತ ಮತ್ತು ಪಾಕಿಸ್ತಾನದ ಗಡಿ ಭಾಗಗಳು ಬೆಳಕು ಕಂಡಿವೆ.
ಇದನ್ನೂ ಓದಿ: ಅಲ್ಕೈದಾ ಉಗ್ರರ ಬಂಧನ ಬೆನ್ನಿಗೆ ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರು ಜನರ ಬಂಧನ
ಏಳು ದಶಕಗಳಿಂದ ಕತ್ತಲೆಯಲ್ಲಿ ಬದುಕುತ್ತಿದ್ದ ಆ ಹಳ್ಳಿಗಳು ಇಂದು ರಾಷ್ಟ್ರೀಯ ವಿದ್ಯುತ್ ಜಾಲಕ್ಕೆ ಸೇರ್ಪಡೆಗೊಂಡಿವೆ ಎಂದು ಕುಪ್ವಾರಾ ಜಿಲ್ಲೆಯ ಜಿಲ್ಲಾಧಿಕಾರಿ ಅಂಶುಲ್ ಗಾರ್ಗ್ ತಿಳಿಸಿದ್ದಾರೆ.
“ನಾನು ಇಲ್ಲಿನ ಜಿಲ್ಲಾಧಿಕಾರಿಯಾಗಿ ಬಂದ ನಂತರ, ಗಡಿ ನಿಯಂತ್ರಣ ರೇಖೆಯ ಬಳಿಯಿರುವ ಹಳ್ಳಿಗಳ ಸಮಸ್ಯೆಯನ್ನು ಆಲಿಸುವ ಅವಕಾಶ ಸಿಕ್ಕಿತು. ಪ್ರತಿ ಬಾರಿಯ ಚುನಾವಣೆಯಲ್ಲಿ ಇವರ ಪ್ರಾಂತ್ಯಗಳಲ್ಲಿ ಶೇ.60 ಮತದಾನವಾಗುತ್ತದೆ. ಆದರೂ, ಇವರ ಸಮಸ್ಯೆಯನ್ನು ಯಾರೂ ಆಲಿಸಿಲ್ಲ. ನಾನು ಇಲ್ಲಿನ ಜನರೊಂದಿಗೆ ಭೇಟಿ ನೀಡಿದಾಗ ಅವರು ನಮಗೆ ವಿದ್ಯುತ್ ಎಂದಿಗೆ ಬರುತ್ತದೆ ಎಂದು ಕೇಳಿದ್ದರು. ಅದಕ್ಕೆ ಸ್ಪಂದಿಸಿ ತಕ್ಷಣ ಕಾರ್ಯಪ್ರವೃತ್ತನಾದೆ. ಆ ಪ್ರಯತ್ನದ ಫಲವಾಗಿ, ಈ ಹಳ್ಳಿಗರಿಗೆ ವಿದ್ಯುತ್ ಸಂಪರ್ಕ ಸಿಕ್ಕಿದೆ” ಎಂದಿದ್ದಾರೆ ಅಂಶುಲ್ಗಾರ್ಗ್.
ಇಲ್ಲಿಯವರೆಗೆ, ಮಚಿಲ್ ವಲಯದ 20 ಹಳ್ಳಿಗಳಿಗೆ ಡೀಸೆಲ್ ಜನರೇಟರ್ (ಡಿಜಿ) ಸೆಟ್ ಮೂಲಕ ವಿದ್ಯುತ್ ಒದಗಿಸಲಾಗುತ್ತಿತ್ತು. ಆದರೆ ಈಗ ಅವು ವಿದ್ಯುತ್ ಗ್ರಿಡ್ ಆಧಾರಿತ ವಿದ್ಯುತ್ ಪಡೆಯುತ್ತಿವೆ.