ನ್ಯೂಸ್

ಮನೆಯಿಂದ ಹೊರತಳ್ಳಿದರು... ಬೆಲೆ ಬಾಳುವ ವಸ್ತು ಲೂಟಿ ಮಾಡಿದರು: ಬಿಜೆಪಿ ಮುಖಂಡೆ ವಿರುದ್ಧ ಗಂಭೀರ ಆರೋಪ

ಭುವನೇಶ್ವರ: ಮನೆ ಖರೀದಿ ವಿಷಯಕ್ಕೆ ಸಂಬಂಧಿಸಿದಂತೆ, ಮನೆಯಲ್ಲಿ ಬಾಡಿಗೆಗೆ ಇದ್ದವನ ಮೇಲೆ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಭುವನೇಶ್ವರದ ಬಿಜೆಪಿ ಮುಖಂಡೆ ಉಪಾಸನಾ ಮೋಹಾಪಾತ್ರ ಇದೀಗ ಭಾರಿ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾರೆ.

ಉಪಾಸನಾ ಅವರು ಕಾಂಗ್ರೆಸ್​ ಮುಖಂಡರಾಗಿದ್ದ ಹಾಗೂ ಮೂರು ಬಾರಿ ಕಾಂಗ್ರೆಸ್​ ಶಾಸಕರಾಗಿದ್ದ ಲಾಲಟೆಂಡು ವಿದ್ಯಾಧರ್ ಮೋಹಪಾತ್ರ ಅವರ ಪುತ್ರಿ, ಉಪಾಸನಾ ಹಾಗೂ ಅವರ ಅವರ ಪತಿ ಶುಭ್ರಾಂಶು ಶೇಖರ್​ ಸೇರಿದಂತೆ ಸುಮಾರು 40 ಮಂದಿ ವಿರುದ್ಧ ಪ್ರಣಬ್​ ರೇ ಎನ್ನುವವರು ದೂರು ದಾಖಲು ಮಾಡಿದ್ದು, ಇವರು ರೌಡಿಗಳಂತೆ ವರ್ತಿಸಿರುವುದಾಗಿ ಆರೋಪಿಸಲಾಗಿದೆ.

ತಾವು ಖರೀದಿ ಮಾಡಿದ್ದ ಮನೆಯಲ್ಲಿದ್ದ ಬಾಡಿಗೆದಾರರನ್ನು ತೆರವುಗೊಳಿಸಲು 40ಕ್ಕೂ ಅಧಿಕ ಗೂಂಡಾಗಳನ್ನು ಕರೆದುಕೊಂಡು ಹೋಗಿ ಹಲ್ಲೆ ಮಾಡಿರುವ ಆರೋಪ ಇವರ ಮೇಲಿದೆ.

ಏನಿದು ಘಟನೆ? ಉಪಾಸನಾ ಅವರ ಪತಿ ಶುಭ್ರಾಂಶು ಅವರು, ಬಿಜಯ್ ನಾಯಕ್ ಎನ್ನುವವರಿಂದ ಮನೆ ಖರೀದಿ ಮಾಡಿದ್ದರು. ಆ ಮನೆಯ ಮೊದಲ ಮಹಡಿಯಲ್ಲಿ ಪ್ರಣಬ್​ ಕಚೇರಿ ಇಟ್ಟುಕೊಂಡಿದ್ದರು. ಅದರ ಒಳಾಂಗಣ ವಿನ್ಯಾಕ್ಕೆ 60 ಲಕ್ಷ ರೂಪಾಯಿ ಖರ್ಚು ಮಾಡಿದ್ದರು. ಆದರೆ ಆ ಜಾಗ ಬಿಟ್ಟು ಹೋಗುವಂತೆ ಉಪಾಸನಾ ದಂಪತಿ ಒತ್ತಾಯ ಮಾಡುತ್ತಿದ್ದರು. ಇದನ್ನು ಪ್ರಶ್ನಿಸಿ ಪ್ರಣವ್​ ಕೋರ್ಟ್​ ಮೊರೆ ಹೋಗಿದ್ದಾಗ, ಸದ್ಯ ಯಥಾಸ್ಥಿತಿ ಕಾಯ್ದುಕೊಳ್ಳಲು ಕೋರ್ಟ್​ ಆದೇಶಿಸಿತ್ತು.

ಆದರೆ ಈ ನಡುವೆಯೇ ತಮ್ಮ ಮೇಲೆ ಬಂದು ದಂಪತಿ ಹಾಗೂ ಅವರ ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎಂದು ಪ್ರಣವ್​ ಆರೋಪಿಸಿದ್ದಾರೆ. ದಂಪತಿ ತಮ್ಮ ಬೆಂಬಲಿಗರ ಜತೆಗೂಡಿ ಹಲ್ಲೆ ಮಾಡಿದ್ದೂ ಅಲ್ಲದೇ, ತಮ್ಮನಮ್ನು ಮನೆಯಿಂದ ಹೊರಕ್ಕೆಳೆದು ಬೆಲೆ ಬಾಳುವ ವಸ್ತುಗಳನ್ನು ಲೂಟಿ ಮಾಡಿರುವುದಾಗಿ ಅವರು ಆರೋಪಿಸಿದ್ದಾರೆ. ಮಾತ್ರವಲ್ಲದೇ ಈ ಘಟನೆಗೆ ಸಾಕ್ಷಿಯಾಗಿದ್ದ ಸಿಸಿಟಿವಿಗಳನ್ನು ಒಡೆದು ಹಾಕಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ಪ್ರಕರಣದ ವಿಚಾರಣೆ ಮುಂದುವರೆದಿದ್ದು, ತಲೆಮರೆಸಿಕೊಂಡಿರುವ ಇತರ ಆರೋಪಿಗಳ ಹುಡುಕಾಟದ ಪ್ರಯತ್ನ ನಡೆಸಲಾಗುತ್ತಿದೆ.