ನ್ಯೂಸ್

ಯುದ್ಧಭೂಮಿಗೆ ಇಳಿದಿರುವುದಾಗಿ ಹೇಳಿ ವಿಶ್ವದ ಮೆಚ್ಚುಗೆ ಗಳಿಸಿದ್ದ ಯೂಕ್ರೇನ್​ ಅಧ್ಯಕ್ಷನ ಹೊಸ ಫೋಟೋಶೂಟ್​- ಎಲ್ಲೆಡೆ ಆಕ್ರೋಶ

ಯೂಕ್ರೇನ್​: ಯೂಕ್ರೇನ್​ ವಿರುದ್ಧ ರಷ್ಯಾ ಸಮರ ಸಾರಿ ಆರು ತಿಂಗಳು ಕಳೆಯುತ್ತಾ ಬಂದಿದೆ. ಯುದ್ಧ ದಿನೇ ದಿನೇ ಭೀಕರ ರೂಪ ಪಡೆಯುತ್ತಲೇ ಇದೆ. ಇದರಲ್ಲಿ ಸಹಸ್ರಾರು ಮಂದಿ ಮೃತಪಟ್ಟಿದ್ದು, ಸದ್ಯ ಯುದ್ಧ ನಿಲ್ಲುವಂತೆ ಕಾಣುತ್ತಿಲ್ಲ. ತಾವೂ ಯೋಧನ ಡ್ರೆಸ್​ ತೊಟ್ಟು ಯುದ್ಧದ ಕಣಕ್ಕಿಳಿಯುವಂತೆ ಫೋಟೋಗಳಿಗೆ ಪೋಸ್​ ನೀಡಿ ಜಗತ್ತಿನ ಗಮನ ಸೆಳೆದಿದ್ದ ಯೂಕ್ರೇನ್​ ಅಧ್ಯಕ್ಷ ವೊಲೊದಿಮಿರ್ ಝೆಲೆನ್​ಸ್ಕಿ ಈಗ ಪತ್ನಿಯೊಂದಿಗೆ ಫೋಟೋ ಶೂಟ್​ ಮಾಡಿಸಿಕೊಂಡಿದ್ದಾರೆ.

ಯುದ್ಧಭೂಮಿಗೆ ಇಳಿದಿರುವುದಾಗಿ ಹೇಳಿದಾಗ ಇವರನ್ನು ಹೊಗಳಿದವರೇ ಇದೀಗ ಇವರ ವಿರುದ್ಧ ಟೀಕಾ ಪ್ರಹಾರ ಶುರು ಮಾಡಿದ್ದಾರೆ. ಅದೂ ಫ್ಯಾಷನ್​ ಮ್ಯಾಗಜೀನ್‌ಗಾಗಿ ಯುದ್ಧಭೂಮಿಯ ನಡುವೆಯೇ ಪತ್ನಿ ಒಲೆನಾ ಜತೆ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ ಅಧ್ಯಕ್ಷ!

ಈ ಚಿತ್ರಗಳನ್ನು ಒಲೆನಾ ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಸಂತಸದಿಂದ ಹಂಚಿಕೊಂಡಿದ್ದಾರೆ. ವೋಗ್ ನಿಯತಕಾಲಿಕದ ಮುಖಪುಟದಲ್ಲಿ ಕಾಣಿಸಿಕೊಳ್ಳುವುದು ಅನೇಕ ಜನರ ಕನಸು ಮತ್ತು ಇದು ಅತ್ಯಂತ ಪ್ರತಿಷ್ಠೆಯ ವಿಷಯವಾಗಿದೆ, ಈ ಆಸೆ ಈಡೇರಿದೆ ಎಂದು ಒಲೆನಾ ಬರೆದುಕೊಂಡಿದ್ದಾರೆ.

ಯುದ್ಧದ ಬಗ್ಗೆಯೂ ಮಾತನಾಡಿದ ಅವರು, ಯುದ್ಧದಿಂದ ಬಳಲುತ್ತಿರುವ ಯೂಕ್ರೇನ್​ನ ಪ್ರತಿಯೊಬ್ಬ ಮಹಿಳೆಯನ್ನು ನಿರಾಶ್ರಿತರ ಶಿಬಿರಗಳಲ್ಲಿ ನೋಡಲು ನಾನು ಬಯಸುತ್ತೇನೆ ಎಂದಿದ್ದಾರೆ. ಆದರೆ ಫೋಟೋಶೂಟ್​ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಭಾರಿ ಆಕ್ರೋಶ ವ್ಯಕ್ತವಾಗಿದೆ.

ಸೈನಿಕರಿಗೆ ತಾವು ಬೆಂಬಲಿಸುತ್ತಿರುವುದಾಗಿ ಸೈನಿಕರ ಸಮವಸ್ತ್ರ ಧರಿಸಿ, ಕೈಯಲ್ಲಿ ಬಂದೂಕು ಹಿಡಿದು ಇವರು ಫೋಟೋಗೆ ಪೋಸ್​ ಕೊಟ್ಟಾಗ, ಇವರೇ ಯುದ್ಧಭೂಮಿಗೆ ಇಳಿದು ಶತ್ರುಗಳ ಜತೆ ಸೆಣೆಸಾಡಿದರು ಎಂದು ಭಾರಿ ಸುದ್ದಿಯಾಗಿತ್ತು. ಇವರ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗಿತ್ತು. ತಮ್ಮ ತಮ್ಮ ದೇಶದ ನಾಯಕನನ್ನು ಇವರಿಗೆ ಹೋಲಿಸಿ, ಯುದ್ಧ ಭೂಮಿಗೆ ಹೋಗದ ತಮ್ಮ ನಾಯಕರನ್ನು ಟೀಕಿಸಿದವರೇ ಹೆಚ್ಚು.

ಅಂದ ಹಾಗೆ ಈ ಜೋಡಿ ಒಂದೇ ಶಾಲೆಯಲ್ಲಿ ಅಧ್ಯಯನ ಮಾಡಿದವರು, ಪ್ರೀತಿಸಿ ಮದುವೆಯಾಗಿದ್ದಾರೆ. ಒಲೆನಾ ವಾಸ್ತುಶಿಲ್ಪವನ್ನು ಅಧ್ಯಯನ ಮಾಡಿದ್ದಾರೆ. ನಂತರ ಬರವಣಿಗೆಯಲ್ಲಿ ಆಸಕ್ತಿ ತೋರಿದರು. ವೊಲೊಡಿಮಿರ್ ರಾಜಕೀಯಕ್ಕೆ ಬರುವ ಮೊದಲು ಹಾಸ್ಯನಟ ಎಂದು ಗುರುತಿಸಿಕೊಂಡವರು. ಆಗ ಇವರ ವಿವಾಹ ನಡೆದಿದೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. (ಏಜೆನ್ಸೀಸ್​)