ನ್ಯೂಸ್

ಬೆಕ್ಕು ತಾನೆ? ಕಚ್ಚಿದರೆ ಏನಾಗುವುದಿಲ್ಲ ಎಂಬ ನಿರ್ಲಕ್ಷ್ಯ ಬೇಡ: ಪ್ರಾಣ ಕಳೆದುಕೊಂಡ ಮಹಿಳೆಯರು!

ವಿಜಯವಾಡ: ನಾಯಿ ಕಚ್ಚಿದರೆ ಸಾಯುವ ವಿಷಯ ಹೊಸತೇನಲ್ಲ. ಆದರೆ ಬೆಕ್ಕು ಕಚ್ಚಿದ ಕಾರಣ ಇಬ್ಬರು ಮಹಿಳೆಯರು ಪ್ರಾಣ ಕಳೆದುಕೊಂಡಿರುವ ಘಟನೆ ಆಂಧ್ರ ಪ್ರದೇಶ ರಾಜ್ಯದ ವಿಜಯವಾಡದಲ್ಲಿ ನಡೆದಿದೆ.

ಬೆಕ್ಕು ಕಚ್ಚಿದ ಎರಡು ತಿಂಗಳ ಬಳಿಕ ಇಬ್ಬರು ಮಹಿಳೆಯರು ಮೃತಪಟ್ಟಿರುವ ಭಯಾನಕ ಘಟನೆ ಇದು. ವೇಮುಲವಾಡ ಗ್ರಾಮದ ಮೊವ್ವ ಮಂಡಲ ಎಂಬಲ್ಲಿ ಈ ಘಟನೆ ನಡೆದಿದೆ. ಸಾಲಿ ಕಮಲ (46) ಮತ್ತು ಬೊಡ್ಡು ನಾಗಮಣಿ (43) ಮೃತ ಮಹಿಳೆಯರು.

ಇವರು, ತಮ್ಮ ತಮ್ಮ ಮನೆಯ ಮುಂದೆ ಕುಳಿತಿದ್ದ ವೇಳೆ ಅಲ್ಲಿಗೆ ಬೆಕ್ಕೊಂದು ಬಂದಿದೆ. ಇಬ್ಬರ ಮೇಲೆ ದಾಳಿ ಮಾಡಿದೆ. ಮಹಿಳೆಯರನ್ನು ಅದು ಕಚ್ಚುತ್ತಿದ್ದಂತೆಯೇ ಬಿಡಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಮೊದಲು ಬೆಕ್ಕು ಸಾಲಿ ಕಮಲಾರನ್ನು ಕಚ್ಚಿದೆ. ಅವರು ಕಿರುಚಾಡಲು ಶುರು ಮಾಡಿದಾಗ ಬೆಕ್ಕಿನಿಂದ ತಪ್ಪಿಸಲು ಬೊಡ್ಡು ನಾಗಮಣಿ ಬಂದಿದ್ದಾರೆ. ಅವರನ್ನೂ ಬೆಕ್ಕು ಕಚ್ಚಿ ಗಾಯಗೊಳಿಸಿದೆ.

ಕಚ್ಚಿದ ಜಾಗದಲ್ಲಿ ಗಾಯವಾಗಿದ್ದು, ಅದಕ್ಕೆ ಇಬ್ಬರೂ ಮಾಮೂಲಿ ಚಿಕಿತ್ಸೆ ಮಾಡಿಸಿಕೊಂಡರು. ಆದರೆ ಗಾಯ ಉಲ್ಬಣ ಆಗುತ್ತಿದ್ದಂತೆಯೇ ಇಬ್ಬರನ್ನೂ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ವೈದ್ಯರು ಟೆಟನಸ್ ಚುಚ್ಚುಮದ್ದು ನೀಡಿದ್ದಾರೆ. ಬಳಿಕ ವೈದ್ಯರೂ ಅವರ ಆರೋಗ್ಯವನ್ನು ನಿಯಮಿತವಾಗಿ ಗಮನಿಸುತ್ತಾ ಇದ್ದರು.

ಹೀಗಿದ್ದರೂ ಎರಡು ತಿಂಗಳ ಬಳಿಕ ಮಹಿಳೆಯರಿಬ್ಬರೂ ತೀವ್ರ ಅಸ್ವಸ್ಥಗೊಂಡರು. ನಂತರ ಮೃತಪಟ್ಟಿದ್ದಾರೆ. ಕೊನೆಗೆ ಪರೀಕ್ಷೆಯಿಂದ ತಿಳಿದದ್ದು ಏಕೆಂದರೆ ಬೆಕ್ಕಿನಿಂದ ಸೋಂಕಿಗೆ ಒಳಗಾದ ನಂತರ ಇಬ್ಬರು ಮಹಿಳೆಯರು ರೇಬೀಸ್‌ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಬೆಕ್ಕು ಕಚ್ಚಿದ ಕೂಡಲೇ ಚಿಕಿತ್ಸೆ ಪಡೆದರೆ ಹೀಗಾಗುತ್ತಿರಲಿಲ್ಲ. ರೇಬಿಸ್‌ನಿಂದಾಗಿಯೇ ಸೋಂಕು ಜಾಸ್ತಿಯಾಗಿ ಮಹಿಳೆಯರು ಸತ್ತಿರುವ ಬಗ್ಗೆ ವೈದ್ಯರು ದೃಢಪಡಿಸಿದ್ದಾರೆ.

ನಾಯಿ, ಇಲಿ, ಹಾವು ಕಚ್ಚಿದರೆ ಕೂಡಲೇ ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯಬೇಕು. ಅವುಗಳ ದಾಳಿಯನ್ನು ನಿರ್ಲಕ್ಷ್ಯ ಮಾಡಬಾರದು ಎಂದು ಆರೋಗ್ಯ ಕೇಂದ್ರದ ಅಧಿಕಾರಿ ಸಲಹೆ ಕೊಟ್ಟಿದ್ದಾರೆ.