ಮುಂಬೈ: ತಮ್ಮ ಪಾತ್ರಕ್ಕೆ ತಕ್ಕಂತೆ, ತೂಕವನ್ನು ಕಡಿಮೆ ಮಾಡಿಕೊಳ್ಳುವುದು, ಹೆಚ್ಚಿಸಿಕೊಳ್ಳುವುದು ಇತ್ಯಾದಿಗಳನ್ನು ನಟ-ನಟಿಯರು ಮಾಡುತ್ತಲೇ ಇರುತ್ತಾರೆ. ತಾವು ಅಭಿನಯಿಸುವ ಪಾತ್ರಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಬಹಳ ಸರ್ಕಸ್ ಮಾಡುವುದು ಗೊತ್ತೇ ಇದೆ. ಈಗ ಅಂಥದ್ದೇ ಒಂದು ಗುಟ್ಟನ್ನು ಬಾಲಿವುಡ್ ನಟ ಅಕ್ಷಯ್ ಕುಮಾರ್ ಪತ್ನಿ ನಟಿ ಟ್ವಿಂಕಲ್ ಖನ್ನಾ ಬಿಚ್ಚಿಟ್ಟಿದ್ದಾರೆ.
ಟ್ವೀಕ್ ಇಂಡಿಯಾ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ಸೆಲೆಬ್ರಿಟಿ ಡಿಸೈನರ್ ಮನೀಶ್ ಮಲ್ಹೋತ್ರಾ ಅವರು ನಡೆಸಿಕೊಟ್ಟ ಸಂದರ್ಶನದಲ್ಲಿ ಟ್ವಿಂಕಲ್ ಈ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಅದೇನೆಂದರೆ ನಟ ಶಾರುಖ್ ಖಾನ್ ನಟಿಸಿರುವ 'ಬಾದ್‌ಶಾ' ಚಿತ್ರದಲ್ಲಿ ಸಣ್ಣಗಾಗುವ ಉದ್ದೇಶದಿಂದ ಬರೀ ನೆನೆಸಿದ ಕಡಲೆಕಾಯಿಯನ್ನು ತಿಂದಿರುವ ಬಗ್ಗೆ ಅವರು ಹೇಳಿಕೊಂಡಿದ್ದಾರೆ.
ತಾವು ಈ ಸಂದರ್ಭದಲ್ಲಿ ದಪ್ಪಗಿದ್ದದ್ದರಿಂದ ಶಾರುಖ್ ಖಾನ್ ತಮ್ಮನ್ನು ಎತ್ತಿಕೊಳ್ಳಲು ಕಷ್ಟವಾಗುತ್ತದೆ ಎಂಬ ಉದ್ದೇಶದಿಂದ ಡಯಟ್ ಮಾಡಿ ಕೇವಲ ಕಡಲೆಕಾಯಿ ತಿಂದದ್ದನ್ನು ಅವರು ಸ್ಮರಿಸಿಕೊಂಡಿದ್ದಾರೆ. 'ನಾನು ತೂಕ ಕಡಿಮೆ ಮಾಡಿಕೊಳ್ಳುವುದಿಲ್ಲ ಎಂಬ ಕಾರಣಕ್ಕೆ ವಸ್ತ್ರ ವಿನ್ಯಾಸಕ ಮನೀಶ್ ಅವರು ಚಿಕ್ಕದಾದ ಉಡುಪು ಡಿಸೈನ್ ಮಾಡಿದ್ದರು. ಬಾದ್‌ಶಾ ಚಿತ್ರದಲ್ಲಿನ ‘ಮೊಹಬ್ಬತ್ ಹೋ ಗಯೀ ಹೈ’ ಹಾಡಿಗಾಗಿ ಈ ಉಡುಪನ್ನು ವಿನ್ಯಾಸಗೊಳಿಸಲಾಗಿತ್ತು. ಆ ಉಡುಪನ್ನು ನಾನು ಧರಿಸಿಕೊಳ್ಳಲು ಸಣ್ಣಗಾಗುವ ಅವಶ್ಯಕತೆ ಇತ್ತು. ಶಾರುಖ್ ಖಾನ್ ಕೂಡ ನನ್ನನ್ನು ಎತ್ತಿಕೊಳ್ಳಬೇಕಿದ್ದರಿಂದ ನಾನು ಕಷ್ಟಪಟ್ಟು ಈ ಡಯೆಟ್ ಮಾಡಿದೆ' ಎಂದು ಟ್ವಿಂಕಲ್ ಹೇಳಿಕೊಂಡಿದ್ದಾರೆ.
ಅದೇ ವೇಳೆ ಹಾಸ್ಯ ಮಾಡಿದ ಅವರು, ಕಡಲೆಕಾಯಿ ತುಂಬಾ ಗ್ಯಾಸ್. ಶಾರುಖ್ ಅವರು ನನ್ನನ್ನು ಎತ್ತಿಕೊಂಡಾಗ ಎಲ್ಲಿ ಹೊಟ್ಟೆ ಊದಿಕೊಂಡಿಬಿಟ್ಟರೆ ಗ್ಯಾಸ್ ಹೊರಬರುತ್ತದೆ ಎಂಬ ಭಯ ಕೂಡ ಕಾಡಿತ್ತು ಎಂದು ಅವರು ಹೇಳಿದ್ದಾರೆ. ಶಾರುಖ್ ನನ್ನನ್ನು ಎತ್ತಿದರೆ ನಾನು ಗ್ಯಾಸ್ ಬಾಲ್ ನಂತೆ ಇರುತ್ತೇನೆ ಎಂದು ನಾನು ತುಂಬಾ ಹೆದರುತ್ತಿದ್ದೆ, ನನ್ನ ಹೊಟ್ಟೆಯಲ್ಲಿ ಇದ್ದದ್ದು ಬರೀ ಕಡಲೆ ಮಾತ್ರ ಎಂದು ಅವರು ಹೇಳಿದ್ದಾರೆ.