ನ್ಯೂಸ್

ಟ್ರಕ್‌ ಚಾಲಕನ ನಿರ್ಲಕ್ಷ್ಯಕ್ಕೆ ಬಲಿಯಾಯ್ತು ಐದು ಜೀವ- ಡಿವೈಡರ್‌ಗೆ ಗುದ್ದಿದ ಪರಿಣಾಮ ನಡೆಯಿತು ಅನಾಹುತ

ಪುಣೆ: ಇತ್ತೀಚೆಗೆ ಟ್ರಕ್‌, ಲಾರಿಗಳು ಡಿವೈಡರ್‌ಗೆ ಗುದ್ದುತ್ತಿರುವ ಘಟನೆ ಹೆಚ್ಚುತ್ತಿದ್ದು, ಇದರಿಂದ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅತಿವೇಗದಿಂದ ಚಾಲನೆ ಮಾಡಿಕೊಂಡು ಬರುವ ಚಾಲಕರು ನಿಯಂತ್ರಣ ತಪ್ಪಿ ಡಿವೈಡರ್‌ಗಳಿಗೆ ಗುದ್ದುವುದು, ಲಾರಿ ಪಲ್ಟಿಯಾಗಿ ಅಥವಾ ಡಿಕ್ಕಿಯಾಗಿ ಅದರ ಸಮೀಪ ಹೋಗುತ್ತಿರುವ ಬೈಕ್‌, ಕಾರುಗಳ ಸವಾರರು ಸಾಯುವ ಘಟನೆಗಳು ವರದಿಯಾಗುತ್ತಿವೆ.

ಅಂಥದ್ದೇ ಒಂದು ಘಟನೆ ಪುಣೆ - ಅಹಮ್ಮದ್‌ನಗರ ರಸ್ತೆಯಲ್ಲಿ ನಡೆದಿದ್ದು, ಟ್ರಕ್‌ ಚಾಲಕನ ನಿರ್ಲಕ್ಷ್ಯದಿಂದಾಗಿ ಐವರು ಸ್ಥಳದಲ್ಲಿಯೇ ಅಸು ನೀಗಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ. ಟ್ರಕ್‌ ಡಿವೈಡರ್‌ಗೆ ಗುದ್ದಿ ಅತ್ತ ಕಡೆಯಿಂದ ಬರುತ್ತಿದ್ದ ಬೈಕ್‌ ಮತ್ತು ಕಾರಿನ ಮೇಲೆ ಉರುಳಿಬಿದ್ದುದರಿಂದ ಈ ಅನಾಹುತ ನಡೆದಿದೆ.

ಟ್ರಕ್ ಪುಣೆಯಿಂದ ಅಹಮ್ಮದ್‌ನಗರಕ್ಕೆ ಬರುತ್ತಿತ್ತು. ಕಾರು ಮತ್ತು ಬೈಕ್‌ ಸವಾರರು ಅಹಮ್ಮದ್‌ನಗರದಿಂದ ಪುಣೆ ಮಾರ್ಗವಾಗಿ ಸಂಚರಿಸುತ್ತಿದ್ದರು. ಈ ಸಂದರ್ಭದಲ್ಲಿ ಟ್ರಕ್‌ ವೇಗದಲ್ಲಿ ಇದ್ದುದರಿಂದ ಚಾಲಕ ನಿಯಂತ್ರಣ ತಪ್ಪಿಸಿಕೊಂಡಿದ್ದಾನೆ. ಟ್ರಕ್ ಡಿವೈಡರ್​​​ಗೆ ಗುದ್ದಿ ವಿರುದ್ಧ ದಿಕ್ಕಿಗೆ ಹೋಗಿದೆ. ಅತ್ತ ಕಡೆಯಿಂದ ಬರುತ್ತಿದ್ದ ಬೈಕ್‌ ಮತ್ತು ಕಾರಿಗೆ ಅದು ಡಿಕ್ಕಿಹೊಡೆದು ಕಾರು ಮತ್ತು ಬೈಕ್‌ನಲ್ಲಿದ್ದವರು ಅಸು ನೀಗಿದ್ದಾರೆ.

ಕಾರಿನಲ್ಲಿದ್ದ ವಿಠ್ಠಲ್ ಹಿಂಗಾಡೆ, ರೇಷ್ಮಾ ಹಿಂಗಾಡೆ, ಲೀನಾ ನಿಕ್ಸಿ ಎನ್ನುವವರು ಕಾರಿನಲ್ಲಿದ್ದು ಎಲ್ಲರೂ ಸ್ಥಳದಲ್ಲಿಯೇ ಪ್ರಾಣಬಿಟ್ಟಿದ್ದಾರೆ. ಇನ್ನು ಇಬ್ಬರ ಗುರುತು ಪತ್ತೆಯಾಗಬೇಕಿದೆ. ಪೊಲೀಸರು ರಕ್ಷಣಾ ಕಾರ್ಯಾಚರಣೆ ಕೈಗೊಂಡು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಶಿಕ್ರಾಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.