ನ್ಯೂಸ್

ವಿಡಿಯೋ: ಅತ್ಯಾಚಾರದ ಆರೋಪಿಗೆ ಕಾಂಗ್ರೆಸ್​ ಟಿಕೆಟ್​ ಪ್ರಶ್ನಿಸಿದ್ದಕ್ಕೆ ಕಾರ್ಯಕರ್ತೆಯ ಮೇಲೆ ಹಲ್ಲೆ

ಡಿಯೋರಿಯಾ (ಉತ್ತರ ಪ್ರದೇಶ)​: ಅತ್ಯಾಚಾರದ ಆರೋಪ ಹೊತ್ತವರಿಗೆ ಟಿಕೆಟ್​ ನೀಡಬೇಡಿ ಎಂದು ಕಾಂಗ್ರೆಸ್​ ಕಾರ್ಯಕರ್ತೆಯೊಬ್ಬರು ದನಿ ಎತ್ತಿದ ಹಿನ್ನೆಲೆಯಲ್ಲಿ ಅವರ ಪಕ್ಷದಿಂದಲೇ ಕಾರ್ಯಕರ್ತೆಯ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ಈ ಘಟನೆ ನಡೆದಿದ್ದು, ಇದೀಗ ಇದರ ವಿಡಿಯೋ ವೈರಲ್​ ಆಗಿದೆ. ಈ ಘಟನೆ ಕುರಿತಂತೆ ಹಲವಾರು ಟೀಕೆಗಳು ವ್ಯಕ್ತವಾಗಿವೆ.

ಉತ್ತರ ಪ್ರದೇಶದ ಉಪಚುನಾವಣೆಗೆ ಸ್ಪರ್ಧಿಸಲು ಮುಕುಂದ್ ಭಾಸ್ಕರ್ ಎಂಬುವವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಆದರೆ ಇವರ ವಿರುದ್ಧ ಅತ್ಯಾಚಾರದ ಆರೋಪವಿದೆ. ಆದ್ದರಿಂದ ಇವರಿಗೆ ಟಿಕೆಟ್​ ನೀಡಬಾರದು ಎಂದು ಕಾಂಗ್ರೆಸ್ ಕಾರ್ಯಕರ್ತೆ ತಾರಾ ಯಾದವ್ ಪ್ರತಿಭಟಿಸಿದ್ದರು.

ಆಗ ಮಾತಿಗೆ ಮಾತು ಬೆಳೆದು ಕಾರ್ಯಕರ್ತರು ತಾರಾ ಅವರ ಮೇಲೆ ಕೈ ಮಾಡಿದ್ದಾರೆ.

ಅತ್ಯಾಚಾರದ ಆರೋಪಿಗೆ ಟಿಕೆಟ್ ನೀಡಿದ್ದನ್ನು ವಿರೋಧಿಸಿದ್ದಕ್ಕಾಗಿ ನನ್ನ ಮೇಲೆ ಹಲ್ಲೆ ನಡೆದಿದೆ. ಈಗ ನಾನು ಪ್ರಿಯಾಂಕಾ ಗಾಂಧಿ ಕ್ರಮ ಕೈಗೊಳ್ಳುವುದಕ್ಕಾಗಿ ಕಾಯುತ್ತಿದ್ದೇನೆ ಎಂದು ತಾರಾ ಯಾದವ್ ಹೇಳಿದ್ದಾರೆ.

ಈ ಹಲ್ಲೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ತಾರಾ ಯಾದವ್ ಮೇಲೆ ನಡೆದ ಹಲ್ಲೆ ಕಾಂಗ್ರೆಸ್ ಪಕ್ಷದಲ್ಲಿ ಮಹಿಳೆಯರಿಗೆ ಗೌರವ ಎಷ್ಟಿದೆ ಎಂಬುದನ್ನು ತೋರಿಸುತ್ತದೆ ಎಂದು ಬಿಜೆಪಿ ಪ್ರತಿಕ್ರಿಯೆ ನೀಡಿದ್ದರೆ, ಘಟನೆಯನ್ನು ಖಂಡಿಸಿರುವ ಕೇಂದ್ರ ಸಚಿವ ಹರದೀಪ್​ ಸಿಂಗ್ ಪುರಿ ರಾಷ್ಟ್ರೀಯ ಮಹಿಳಾ ಆಯೋಗ ಈ ಘಟನೆಯನ್ನು ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದಾರೆ.