ನ್ಯೂಸ್

ಮೂರೇ ವಾರದಲ್ಲಿ ನಿರ್ಮಾಣವಾಯ್ತು 180 ಅಡಿ ಸೇತುವೆ- 20 ಹಳ್ಳಿಗರ ನಿಟ್ಟುಸಿರು

suchetana

ಜೌಲ್‌ಜಿಬಿ (ಉತ್ತರಾಖಂಡ): ಭಯಾನಕ ಮಳೆ. ಇರುವ ರಸ್ತೆಯು ಮಳೆಯ ಹೊಡೆತಕ್ಕೆ ಕೊಚ್ಚಿ ಹೋಗಿದೆ. ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಸಂಪರ್ಕ ಸಾಧಿಸಲು ರಸ್ತೆಯೇ ಇಲ್ಲ, ಒಂದು ವೇಳೆ ಪ್ರವಾಹ ಸ್ಥಿತಿ ಎದುರಾಗಿ ರಕ್ಷಣೆ ಮಾಡಿಕೊಳ್ಳಬೇಕೆಂದರೂ ರಸ್ತೆಯೇ ಇಲ್ಲ!

ಪರಿಸ್ಥಿತಿಯನ್ನೊಮ್ಮೆ ಊಹಿಸಿಕೊಂಡು ನೋಡಿ. ಅಬ್ಬಾ... ಎಂಬ ಉದ್ಗಾರವೇ ಬರಬಹುದು. ಇಂಥದ್ದೊಂದು ಸಂದಿಗ್ಧ ಪರಿಸ್ಥಿತಿ ಉಂಟಾಗಿದ್ದು ಉತ್ತರಾಖಂಡದ ಪಿಥೋರಾಘರ್‌ನ ಜೌಲ್‌ಜಿಬಿ ಸೆಕ್ಟರ್‌ ಪ್ರದೇಶದಲ್ಲಿ.

ಆದರೆ ಇದೀಗ ಜನರು ನೆಮ್ಮದಿಯ ಉಸಿರು ಬಿಟ್ಟಿದ್ದಾರೆ. ಏಕೆಂದರೆ ಇಲ್ಲೀಗ ಸೇತುವೆ ನಿರ್ಮಾಣವಾಗಿದೆ. ಕೇವಲ ಸೇತುವೆ ನಿರ್ಮಾಣವಾಗಿದ್ದರೆ ಇಷ್ಟೊಂದು ಸುದ್ದಿಯಾಗುತ್ತಿರಲಿಲ್ಲವೇನೋ. ಆದರೆ ಇದರಲ್ಲಿಯೇ ಇರುವುದು ವಿಶೇಷತೆ.

ಕೇಂದ್ರ ರಕ್ಷಣಾ ಇಲಾಖೆಯ ಅಡಿಯಲ್ಲಿ ಬರುವ ಗಡಿ ರಸ್ತೆ ಸಂಸ್ಥೆಯು (ಬಿಆರ್‌ಒ) ಇಲ್ಲಿ ನಿರ್ಮಿಸಿರುವ 180 ಅಡಿ ಉದ್ದದ ಸೇತುವೆ ನಿರ್ಮಾಣಕ್ಕೆ ತೆಗೆದುಕೊಂಡಿರುವ ಅವಧಿ ಎಷ್ಟು ಗೊತ್ತಾ? ಕೇವಲ ಮೂರೇ ವಾರ!

ಹೌದು. ಇಂಥದ್ದೊಂದು ಅದ್ಭುತ ಕಾರ್ಯ ನಡೆದಿದೆ. ಈ ಹಿಂದೆ ಇದ್ದ 50 ಮೀಟರ್‌ ಉದ್ದದ ಕಾಂಕ್ರೀಟ್‌ ಸೇತುವೆ ಜುಲೈ 27ರಂದು ಭಾರೀ ಮಳೆಗೆ ಕುಸಿದು ಹೋದ ಹಿನ್ನೆಲೆಯಲ್ಲಿ ಆ ಜಾಗದಲ್ಲಿಗ ಕೆಲವೇ ದಿನಗಳಲ್ಲಿ 180 ಅಡಿ ಉದ್ದದ ಸೇತುವೆ ನಿರ್ಮಾಣವಾಗಿದೆ.

ನಿರಂತರವಾಗಿ ಭಾರಿ ಮಳೆ, ಮಂಜು ಕವಿದ ವಾತಾವರಣ ಹಾಗೂ ಭೂ ಕುಸಿತ ಇದ್ದರೂ ಕೂಡ ಇದನ್ನ ಲೆಕ್ಕಿಸದೆ ಬಿಆರ್‌ಒ ಸಿಬ್ಬಂದಿಗಳು ಸೇತುವೆ ನಿರ್ಮಾಣ ಮಾಡಿ ಜನರಿಗೆ ಮುಕ್ತಮಾಡಿ ಕೊಟ್ಟಿದೆ.

ಇದರಿಂದಾಗಿ 20 ಹಳ್ಳಿಗಳ ಜನರು ನೆಮ್ಮದಿಯಿಂದ ಉಸಿರಾಡುವಂತಾಗಿದೆ. 15 ಸಾವಿರಕ್ಕೂ ಅಧಿಕ ಮಂದಿಯನ್ನು ಹೊಂದಿರುವ ಈ ಹಳ್ಳಿಯ ಜನರು ರಸ್ತೆಯಿಲ್ಲದೇ ಕಂಗಾಲಾಗಿ ಹೋಗಿದ್ದರು. ಇದೀಗ ಅವರೆಲ್ಲರೂ ಸೇತುವೆ ಮೇಲೆ ಓಡಾಡಲು ಆರಮಭಿಸಿದ್ದಾರೆ.