ಹೈದರಾಬಾದ್: ತೆಲಂಗಾಣ ರಾಷ್ಟ್ರೀಯ ಸಮಿತಿಯ (ಟಿಆರ್‌ಎಸ್) ಮುಖಂಡ ತಮ್ಮಿನೇನಿ ಕೃಷ್ಣಯ್ಯ ಅವರನ್ನು ಖಮ್ಮಂ ಜಿಲ್ಲೆಯ ಮಂಡಲದ ತೆಲದರುಪಲ್ಲಿ ಗ್ರಾಮದಲ್ಲಿ ನಾಲ್ವರು ಅಪರಿಚಿತ ವ್ಯಕ್ತಿಗಳು ಕೊಚ್ಚಿ ಕೊಲೆ ಮಾಡಿದ್ದಾರೆ. ಸ್ವಾತಂತ್ರ್ಯದ ದಿನದ ನಿಮಿತ್ತ ಅವರು ತೆಲದರುಪಲ್ಲಿ ಗ್ರಾಮದಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸಿ ಹಿಂದಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಟಿಆರ್‌ಎಸ್ ನಾಯಕ ತಮ್ಮಿನೇನಿ ಕೃಷ್ಣಯ್ಯ ಅವರು ಧ್ವಜಾರೋಹಣ ಮಾಡಿ ಬೈಕ್‌ನಲ್ಲಿ ಹಿಂದಿರುಗುತ್ತಿದ್ದ ವೇಳೆ ತೆಲದರುಪಲ್ಲಿ ಗ್ರಾಮದ ಪ್ರವೇಶ ದ್ವಾರದಲ್ಲಿ ಆಟೋರಿಕ್ಷಾದಲ್ಲಿ ಬಂದ ನಾಲ್ವರು ಅಪರಿಚಿತರು ನಾಯಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಖಮ್ಮಂ ಜಿಲ್ಲೆಯ ಸಹಾಯಕ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ಘಟನೆಯ ಸ್ವಲ್ಪ ಸಮಯದ ನಂತರ, ಸಿಪಿಐ(ಎಂ) ನಾಯಕ ತಮ್ಮಿನೇನಿ ಕೋಟೇಶ್ವರ ರಾವ್ ಅವರ ನಿವಾಸದ ಮುಂದೆ ಕಲ್ಲು ತೂರಾಟಕ್ಕೆ ಗುಂಪು ಜಮಾಯಿಸಿತು. ಈ ಹಿನ್ನೆಲೆಯಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಗಮನಿಸಿದ ಪೊಲೀಸ್ ಅಧಿಕಾರಿಗಳು 144 ಸೆಕ್ಷನ್ ಜಾರಿಗೊಳಿಸಿದ್ದಾರೆ.
ಈ ನಾಲ್ವರು ಆರೋಪಿಗಳ ಪತ್ತೆಗೆ ನಾಲ್ಕು ತಂಡಗಳನ್ನು ರಚಿಸಿದ್ದೇವೆ. ತಮ್ಮಿನೇನಿ ಕೃಷ್ಣಯ್ಯ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದಿದ್ದಾರೆ.
ಇನ್ನು ತಮ್ಮಿನೇನಿ ಕೃಷ್ಣಯ್ಯ ಅವರು ಸಿಪಿಎಂ ತೊರೆದು ತೆಲಂಗಾಣ ರಾಷ್ಟ್ರೀಯ ಸಮಿತಿ ಸೇರಿದ್ದರು ಎಂಬುವುದು ಉಲ್ಲೇಖನೀಯ. ಇದೇ ಕಾರಣಕ್ಕೆ ಸಿಪಿಎಂ ನಾಯಕ ತಮ್ಮಿನೇನಿ ಕೋಟೇಶ್ವರ್ ರಾವ್ ಅವರ ನಿವಾಸದ ಮುಂದೆ ಜಮಾಯಿಸಿ ಕಲ್ಲು ತೂರಾಟ ನಡೆಸಿದ್ದಾರೆ. ನಾಯಕರ ನಿವಾಸದ ಕೆಲವು ಭಾಗಗಳಿಗೆ ಹಾನಿಯಾಗಿದ್ದು ಕೂಡಲೇ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. (ಏಜೆನ್ಸೀಸ್)