ನ್ಯೂಸ್

ಅಂಗದಾನಕ್ಕೆ ವೈದ್ಯರು ಸಜ್ಜಾಗುತ್ತಿದ್ದಂತೆಯೇ ಎದ್ದು ಕುಳಿತ 'ಮೃತ' ಯುವಕ- ಕಂಗಾಲಾದ ಡಾಕ್ಟರ್ಸ್​!

ಲಂಡನ್​: ಒಮ್ಮೊಮ್ಮೆ ಆಯಸ್ಸು ಮುಗಿದಿದೆ ಎಂದರೂ ಮುಗಿದಿರುವುದೇ ಇಲ್ಲ. ಮೃತಪಟ್ಟ ಎಂದುಕೊಂಡವರು ಎಚ್ಚರಗೊಳ್ಳುವ, ಉಸಿರಾಡುವ, ಕೈಕಾಲು ಆಡಿಸುವ ಕೆಲವು ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಲೇ ಇರುತ್ತವೆ.

ಅಂಥದ್ದೇ ಒಂದು ಘಟನೆ ಲಂಡನ್​ನಲ್ಲಿ ನಡೆದಿದೆ. ರಸ್ತೆ ಅಪಘಾತದಲ್ಲಿ ಮೆದುಳು ಸ್ವಾಧೀನ ಕಳೆದುಕೊಂಡಿದ್ದ ಯುವಕನ ದೇಹದಲ್ಲಿನ ಅಂಗಾಂಗಗಳನ್ನ ದಾನ ಮಾಡಲು ವೈದ್ಯರು ಸಕಲ ಸಲಕರಣೆಗಳ ಜತೆ ಸಜ್ಜಾಗುತ್ತಿದ್ದರಂತೆಯೇ ಆ ವ್ಯಕ್ತಿ ಎಚ್ಚರಗೊಂಡ ಘಟನೆ ನಡೆದಿದೆ. ಅರೆ ಕ್ಷಣ ವೈದ್ಯರೇ ಕಂಗಾಲಾಗಿ ಹೋಗಿದ್ದಾರೆ.

18 ವರ್ಷದ ಲೆವೀಸ್​​ ರಾಬರ್ಟ್ಸ್ ಎಂಬಾತನಿಗೆ ಅಪಘಾತ ಸಂಭವಿಸಿತ್ತು. ಮಾರ್ಚ್ 13ರಂದು ವ್ಯಾನ್​ಗೆ ಡಿಕ್ಕಿ ಹೊಡೆದ ಪರಿಣಾಮ ಆತನನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ತಲೆಗೆ ಭಾರೀ ಪ್ರಮಾಣದಲ್ಲಿ ಹೊಡೆತ ಬಿದ್ದಿತ್ತು. ಆದರೆ ಈ ಘಟನೆ ನಡೆದ ನಾಲ್ಕು ದಿನಗಳ ಬಳಿಕ ಆತನ ಮೆದುಳು ಸಂಪೂರ್ಣ ನಿಷ್ಕ್ರಿಯವಾಗಿತ್ತು. ಇದರಿಂದ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

ಆತನ ಕುಟುಂಬಸ್ಥರ ಇಚ್ಛೆಯಂತೆ ಮೃತದೇಹದಿಂದ ಅಂಗಾಂಗಗಳನ್ನು ಬೇರ್ಪಡಿಸಿ ಅಗತ್ಯ ಇರುವವರಿಗೆ ದಾನ ಮಾಡಲು ವೈದ್ಯರು ಸಜ್ಜಾಗಿದ್ದರು. ಆಗ ಇದ್ದಕ್ಕಿದ್ದಂತೆಯೇ ಲೆವೀಸ್​ ಉಸಿರಾಡಲು ಆರಂಭಿಸಿದ್ದಾನೆ. ಸರ್ಜರಿ ಮಾಡಲು ಸಲಕರಣೆ ಕೈಗೆತ್ತಿಕೊಂಡಿದ್ದ ವೈದ್ಯರೇ ದಂಗಾಗಿ ಹೋಗಿದ್ದಾರೆ. ಸದ್ಯ ಆತನಿಗೆ ಚಿಕಿತ್ಸೆ ಮುಂದುವರೆದಿದೆ.