ನ್ಯೂಸ್

'ಮಕಾಟ್​' ವಿವಿ ಪಠ್ಯದಲ್ಲಿ ಸುಶಾಂತ್​, ಶ್ರೀದೇವಿ ಸಾವಿನ ಅಧ್ಯಯನ

ಕೋಲ್ಕತಾ: ಬಾಲಿವುಡ್​ ನಟರಾದ ಸುಶಾಂತ್​ ಸಿಂಗ್​ ರಜಪೂತ್​ ಹಾಗೂ ಶ್ರೀದೇವಿಯವರ ಸಾವಿನ ಕುರಿತಾದ ಅಧ್ಯಯನವನ್ನು ಮೌಲಾನಾ ಅಬುಲ್ ಕಲಾಂ ಆಜಾದ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ (ಮಕಾಟ್) ವಿಶ್ವವಿದ್ಯಾಲಯದ ಪಠ್ಯಕ್ರಮದಲ್ಲಿ ಅಳವಡಿಸಲಾಗಿದೆ.

ಈ ಇಬ್ಬರೂ ತಾರೆಯರ ಸಾವಿನ ಕುರಿತು ಇದಾಗಲೇ ವರದಿಗಳು ಬಂದಿದ್ದರೂ, ಸಾವಿನ ರಹಸ್ಯ ಮಾತ್ರ ರಹಸ್ಯವಾಗಿಯೇ ಉಳಿದಿದೆ. ಈ ವಿಷಯದ ಕುರಿತ ಅಧ್ಯಯನವನ್ನು ಮಕಾಟ್​ ವಿದ್ಯಾರ್ಥಿಗಳು ಕಲಿಯಲಿದ್ದಾರೆ. ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ವಿಧಿವಿಜ್ಞಾನ ವಿಷಯದ ಅಧ್ಯಯನ ನಡೆಸುವವರಿಗೆ ಪೂರ್ವ ಭಾರತದಲ್ಲಿರುವ ಏಕೈಕ ಸರ್ಕಾರಿ ಸಂಸ್ಥೆಯಾಗಿದೆ ಮಕಾಟ್​. ಸುಶಾಂತ್ ಸಿಂಗ್ ರಜಪೂತ್ ಮತ್ತು ಶ್ರೀದೇವಿ ಅವರ ಸಾವಿನ ಪ್ರಕರಣಗಳನ್ನು ಪಠ್ಯಕ್ರಮದಲ್ಲಿ ಕೇಸ್ ಸ್ಟಡಿಯನ್ನಾಗಿ ಮಾಡಿಕೊಳ್ಳಲಾಗಿದೆ.

ವಿಧಿವಿಜ್ಞಾನ ವಿಷಯದ ಅಧ್ಯಯನ ನಡೆಸುವವರಿಗೆ ಇಂಥ ಪ್ರಕರಣಗಳ ಕೇಸ್​ ಸ್ಟಡಿಗಳ ಅಗತ್ಯವಿದೆ. ಆದರೆ ಕೆಲವೊಂದು ಘಟನೆಗಳು ತಾರ್ಕಿಕ ಅಂತ್ಯ ಕಾಣುತ್ತಿಲ್ಲ. ಇವುಗಳನ್ನು ಉದಾಹರಣೆಯಾಗಿಟ್ಟುಕೊಂಡು ವಿದ್ಯಾರ್ಥಿಗಳೇ ತಾರ್ಕಿಕ ವಿವರಣೆ ನೀಡುವಂತೆ ಮಾಡುವುದು ಪಠ್ಯಕ್ರಮದ ಉದ್ದೇಶ. ಕೆಲ ವರ್ಷಗಳಲ್ಲಿ ಅಪರಾಧ ಮಾದರಿಗಳು ಮತ್ತು ಪ್ರತಿಕ್ರಿಯೆ ಶೈಲಿ ಬದಲಾಗಿರುವ ಹಿನ್ನೆಲೆಯಲ್ಲಿ ಬಹು ಚರ್ಚಿತವಾಗಿರುವ ಈ ಎರಡು ಸಾವಿನ ಪ್ರಕರಣಗಳನ್ನು ವಿದ್ಯಾರ್ಥಿಗಳ ಕೇಸ್​ ಸ್ಟಡಿಯನ್ನಾಗಿ ಬಳಸಿಕೊಳ್ಳಲಾಗಿದೆ ಎಂದು ವಿಶ್ವವಿದ್ಯಾನಿಲಯದ ವಿಧಿವಿಜ್ಞಾನ ವಿಭಾಗದ ಪ್ರಾಧ್ಯಾಪಕ ಸುಜಯ್ ಮಿತ್ರ ಹೇಳಿದ್ದಾರೆ.

ಎರಡು ದಶಕಗಳ ಹಿಂದೆ ಯಾವುದೇ ಸಾವಿನ ಬಗ್ಗೆ ಇಷ್ಟು ಚರ್ಚೆಯಾಗುತ್ತಿರಲಿಲ್ಲ. ಇದೀಗ ಕೆಲವೊಂದು ಸಾವುಗಳು ಬಹಳ ಕುತೂಹಲಕ್ಕೆ ಕಾರಣವಾಗುತ್ತಿವೆ. ಖಿನ್ನತೆ ಕೂಡ ಇದರಲ್ಲಿ ಒಂದು. ಸುಶಾಂತ್​ ಅವರ ಪ್ರಕರಣದಲ್ಲಿ ಖಿನ್ನತೆ ಎಂಬುದು ಥಳಕು ಹಾಕಿದ್ದರೆ ಶ್ರೀದೇವಿ ಅವರ ಪ್ರಕರಣದಲ್ಲಿ ಸಹಜಸಾವು ಎಂದು ಬಿಂಬಿತವಾಗಿದೆ. ಇಂಥ ಸಾವಿನ ಪ್ರಕರಣಗಳನ್ನು ವಿಧಿವಿಜ್ಞಾನ ವಿಷಯವನ್ನು ಅಧ್ಯಯನ ಮಾಡುವವರಿಗೆ ಅಗತ್ಯವಿದೆ ಎನ್ನುತ್ತಾರೆ ಪ್ರಾಧ್ಯಾಪಕರು.

ಶ್ರೀದೇವಿಯವರು 2018ರ ಫೆಬ್ರುವರಿ 24ರಂದು ಮೃತಪಟ್ಟಿದ್ದರೆ, ಸುಶಾಂತ್​ ಕಳೆದ ಜೂನ್​ 14ರಂದು ಮೃತಪಟ್ಟಿದ್ದಾರೆ. ಇವರಿಬ್ಬರ ಸಾವಿನ ಬಗ್ಗೆ ಅನೇಕ ಸಂಶಯಗಳು ಇವೆ.