| ಸುರೇಶ್ ಮರಕಾಲ ಸಾಯ್ಬರಕಟ್ಟೆ
ಇಲ್ಲಿರುವ ಚಿತ್ರಗಳನ್ನು ನೋಡಿದಾಗ ನಿಮಗೆ ಏನನ್ನಿಸುತ್ತದೆ? ಖಂಡಿತವಾಗಿಯೂ ಇದು ಯಾವುದೋ ಅದ್ಭುತ ಚಿತ್ರ ಕಲಾವಿದನ ಕೈಚಳಕ ಎಂಬುದು ಸ್ಪಷ್ಟವಾಗುತ್ತದೆ..!! ಮೂರು ಪ್ರಕೃತಿ ಚಿತ್ರಗಳು ಎಂತಹ ರಸಿಕರನ್ನು ಮೋಡಿ ಮಾಡಬಹುದಾದರೆ, ಬಾಲ ಏಸುವನ್ನು ಒಪ್ಪಿಕೊಂಡಿರುವ ಮೇರಿ ಮಾತೆಯ ಚಿತ್ರವಂತೂ ಮಾತೃವಾತ್ಸಲ್ಯದ ಪ್ರತೀಕದಂತಿದೆ! ಈಗ ಚಿತ್ರಗಳನ್ನು ಸ್ವಲ್ಪ ಜೂಮ್ ಮಾಡಿ ನೋಡಿ..!! ಈಗ ಚಿತ್ರದಲ್ಲಿ ಕಲಾವಿದ ಬಳಸಿರಬಹುದಾದ ಬಣ್ಣಗಳ ಮಿಶ್ರಣ, ಬ್ರಷ್ ನ ಚುರುಕುತನ - ಒಟ್ಟಿನಲ್ಲಿ ಈ ಚಿತ್ರಗಳು 'ದೃಶ್ಯಕಾವ್ಯ'ವಾಗಿ ಎಂತಹವರನ್ನು ಸೆಳೆಯುತ್ತದೆ; ಇದರಲ್ಲಿ ಎರಡು ಮಾತಿಲ್ಲ! ಇಲ್ಲಿಗೆ ನಮ್ಮ ಮನಸ್ಸಿಗೆ "ಇಷ್ಟು ಚೆಂದದ ಚಿತ್ರಗಳನ್ನು ಬಿಡಿಸಿದ ಅದ್ಭುತ ಕಲಾವಿದ ಯಾರು?" ಎಂಬ ಪ್ರಶ್ನೆ ಬರುತ್ತದೆ.
ಈ ಚಿತ್ರಗಳನ್ನು ಬಿಡಿಸಿದ ಕಲಾವಿದ ಪ್ರಾಥಮಿಕ ಶಾಲೆಗೆ ಹೋಗುವ ಮಗುವಿನಿಂದ ಆರಂಭಿಸಿ ವೃದ್ಧರಾದಿಯಾಗಿ ನಮಗೆಲ್ಲರಿಗೂ ಚಿರಪರಿಚಿತನಾಗಿರುವವ!! ಬರಿಯ ಚಿತ್ರದಿಂದ ಮಾತ್ರವಲ್ಲ, ತನ್ನ ಸೆಳೆಯುವಂಥ ಮಾತಿನಿಂದ ಎಂತಹ ನಿರ್ವೀರ್ಯರನ್ನೂ ತನ್ನೆಡೆಗೆ ಸೆಳೆದುಕೊಂಡು ಬಿಡಬಲ್ಲ ಅದ್ಭುತ ಮಾತುಗಾರನಾಗಿದ್ದವ! ವಿಚಿತ್ರ ಚುರುಕು ಮೂರ್ತಿಯಾಗಿದ್ದ! ಎಂತಹಾ ಸಂದರ್ಭ ಬಂದರೂ ಕೂಡಾ, ತನ್ನ ದೈನಂದಿನ ಓದನ್ನು ನಿಲ್ಲಿಸದ ಅದ್ಭುತ ಓದುಗಾರನಾಗಿದ್ದ!! ಆದರೆ ವಿಚಿತ್ರ ನೋಡಿ ಯಾವ ಚಿತ್ರಗಳನ್ನು ನೋಡಿದರೆ ಅದನ್ನು ಬಿಡಿಸಿದ ಚಿತ್ರ ಕಲಾವಿದ ಪಾದ ಮುಟ್ಟಿ ನಮಸ್ಕಾರ ಮಾಡಬೇಕು ಎಂದೆನಿಸುತ್ತದೆಯೋ, ಯಾವ ವ್ಯಕ್ತಿ ತನ್ನ ಮಾತಿನಿಂದ ಇಡೀ ಪ್ರಪಂಚವನ್ನೇ ತನ್ನೆಡೆಗೆ ಸೆಳೆದುಕೊಳ್ಳಬಲ್ಲ ಶಕ್ತಿಯನ್ನು ಹೊಂದಿದ್ದನೋ, ಯಾವ ವ್ಯಕ್ತಿ ಅದ್ಭುತ ಕಲಾಕಾರನಾಗಿದ್ದನೋ - ಇಂದು ಆತನ ಹೆಸರನ್ನು ಅವನು ಹುಟ್ಟಿದ ದೇಶದವರೇ ನೆನಪಿಸಲು ಇಷ್ಟಪಡುವುದಿಲ್ಲ!! ಹೆಚ್ಚಿಗೆ ಇಂದು ಪ್ರಪಂಚ ಆತನನ್ನು ನೆನಪಿಸಿಕೊಳ್ಳುವುದು ಕಲೆಗಾರನಾಗಿ ಅಲ್ಲ ಕೊಲೆಗಾರನಾಗಿ..!! ಅದು ಒಂದೆರಡು ಕೊಲೆಗಳಲ್ಲ!, ನಮ್ಮ ಇಡೀ ಜೀವಮಾನದಲ್ಲಿ ತಿಳಿದೋ ತಿಳಿಯದೆಯೋ ನಾವು ಎಷ್ಟು ಇರುವೆಗಳನ್ನು ಕೊಂದಿರುತ್ತೇವೆಯೋ - ಅದರ ಹತ್ತು ಪಟ್ಟು ಮನುಷ್ಯರ ಕೊಲೆ ಮಾಡಿದ್ದ..!! ಇಲ್ಲಿಗೆ ಖಂಡಿತವಾಗಿಯೂ ನಿಮ್ಮ ಕುತೂಹಲದ ಕಟ್ಟೆ ಒಡೆದಿರಬಹುದು!! ಹೆಚ್ಚು ಕಾಯಿಸಲಾರೆ..!
ಈ ಚಿತ್ರಗಳಿಗೆ ಹಾಗೂ ಇವುಗಳನ್ನೂ ಮೀರಿಸುವ ಇನ್ನೂ ನೂರಾರು ಚಿತ್ರಗಳಿಗೆ ಜೀವತುಂಬಿದ ಕಲಾವಿದನೇ ಎರಡನೇ ಮಹಾಯುದ್ಧದ ಕಾಲದಲ್ಲಿ ಲಕ್ಷಲಕ್ಷ ಸಂಖ್ಯೆಯ ನಿಷ್ಪಾಪಿ ಯಹೂದಿಗಳ ಜೀವ ತೆಗೆದ ನರರೂಪದ ರಾಕ್ಷಸ ಅಡಾಲ್ಫ್ ಹಿಟ್ಲರ್!! ಅಂತಹ ರಾಕ್ಷಸನೊಳಗೆ ಎಂತಹಾ ಕಲಾವಿದನಿದ್ದ ಎಂಬುದು ಸೋಜಿಗವೆನಿಸುತ್ತದೆಯಲ್ಲವೆ?! 56 ವರ್ಷಗಳ ತನ್ನ ಒಟ್ಟು ಜೀವಿತಾವಧಿಯಲ್ಲಿ ಮಾನವ ಸಮಾಜ ಕಂಡುಕೇಳರಿಯದ ಕಗ್ಗೊಲೆಯನ್ನು ಮಾಡಿದ ಹಿಟ್ಲರ್, ತನ್ನ ಯೌವನದಲ್ಲಿ ತಾನೊಬ್ಬ ಚಿತ್ರ ಕಲಾವಿದನಾಗಬೇಕೆಂಬ ದೊಡ್ಡ ಕನಸನ್ನು ಹೊಂದಿದ್ದ! ಅಷ್ಟೇ ಅಲ್ಲ, ಅವನೊಳಗೆ ಒಬ್ಬ ಅದ್ಭುತ ಚಿತ್ರಕಲಾವಿದನೂ ಸುಪ್ತವಾಗಿ ಅಡಗಿಕೊಂಡಿದ್ದ.! ಮುಂದೆ ಚಿತ್ರಕಾರನಾಗಬೇಕೆಂದು ತನ್ನ ಯೌವನದಲ್ಲಿ ವಿಯನ್ನಾದ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ಸಂಸ್ಥೆಗೆ 1907 ಹಾಗೂ 1908 ರಲ್ಲಿ ನಿರಂತರವಾಗಿ ಎರಡು ವರ್ಷ ಸಲ್ಲಿಸಿದ. ಎಂತಹ ದೌರ್ಭಾಗ್ಯ ನೋಡಿ!, ಚಿತ್ರ ಕಲಾವಿದನಾಗುವ ಎಲ್ಲಾ ಅರ್ಹತೆಗಳಿದ್ದರೂ ಕೂಡ ಅವನ ಎರಡೂ ಅರ್ಜಿಗಳು ತಿರಸ್ಕೃತಗೊಂಡವು!! ಆದರೆ ಹಿಟ್ಲರ್ ಸುಲಭಕ್ಕೆ ಹಠ ಬಿಡುವ ವ್ಯಕ್ತಿಯೇ? ಅದೇ 1908ರಿಂದ 1913ರ ಐದು ವರ್ಷಗಳ ಮಧ್ಯಾವಧಿಯಲ್ಲಿ ನೂರಾರು ಚಿತ್ರಗಳನ್ನು ಪೋಸ್ಟ್ ಕಾರ್ಡುಗಳನ್ನು ಬಿಡಿಸಿದ, ಮಾರಿದ - ಹೊಟ್ಟೆಪಾಡಿಗಾಗಿ!! ಮುಂದೆ ಅವನ ಜೀವನ ಎಲ್ಲೆಲ್ಲೋ ಸಾಗಿತು..! ಕುಂಚ ಹಿಡಿದ ಕೈ ಕೊಲೆಮಾಡುವ ಕೋವಿಯನ್ನು ಹಿಡಿಯಿತು!, ಕಾಗದ, ಕ್ಯಾನ್ವಾಸ್‌ನೊಳಗೆ ವರ್ಣರಂಜಿತವಾಗಿ ತುಂಬುತ್ತಿದ್ದ ಬಣ್ಣಗಳ ಸ್ಥಾನವನ್ನು ನೋವು ಹತಾಶೆ ತಾಪಗಳಿಂದ ಕೂಡಿದ ಜನರ ರಕ್ತ ತುಂಬಿತು..!! ಆದರೆ ವಿಚಿತ್ರ!, ಏನೇ ಆದರೂ, ಎಂತಹಾ ಸಂದರ್ಭ ಬಂದರೂ ಹಿಟ್ಲರ್ ತನ್ನ ಜೀವಮಾನ ಪರ್ಯಂತ ಚಿತ್ರ ಬಿಡಿಸುವುದನ್ನು ಮಾತ್ರ ಬಿಡಲಿಲ್ಲ! ಅವನೊಳಗಿನ ಚಿತ್ರಕಲಾವಿದ ಯಾವತ್ತೂ ಕೂಡ ಮೌನವಾಗಿ ವಿಜೃಂಭಿಸುತ್ತಿದ್ದ!! ಗ್ರೀಕೋ-ರೋಮನ್ ಕ್ಲಾಸಿಕ್, ಇಟಾಲಿಯನ್ ಪುನರುತ್ಥಾನ ಕಾಲದ ಶೈಲಿ ಹಾಗೂ ನಿಯೋಕ್ಲಾಸಿಕಲ್ ಚಿತ್ರಕಲಾ ಶೈಲಿಗಳ ಸಮ್ಮಿಶ್ರಣವಾಗಿದೆ ಅವನ ಚಿತ್ರಗಳು ಇಂದಿಗೂ ನಮ್ಮ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ!
19ನೇ ಶತಮಾನದ ಆಸ್ಟ್ರಿಯಾದ ಶ್ರೇಷ್ಠ ಚಿತ್ರ ಕಲಾವಿದರಲ್ಲಿ ಒಬ್ಬನಾದ ರುಡಾಲ್ಫ್ ವಾನ್ ಆಲ್ಟ್‌ನನ್ನು ಹಿಟ್ಲರ್ ತನ್ನ ಗುರುವೆಂದು ಕರೆದುಕೊಂಡಿದ್ದ! ಅವನನ್ನು ಜೀವಮಾನವಿಡೀ ಆರಾಧಿಸುತ್ತಿದ್ದ! ಎಲ್ಲಿಯವರೆಗೆಂದರೆ, ಆಲ್ಟ್‌ನ ದೃಶ್ಯ ಹಾಗೂ ವಾಸ್ತುಚಿತ್ರಕಲೆಗೂ ಹಿಟ್ಲರನ ಚಿತ್ರಗಳಿಗೂ ಬಹಳ ನೇರ ಸಾಮ್ಯತೆ ಕಾಣಿಸುತ್ತದೆ!! ಆದರೆ ದುರ್ದೈವ, ಆಲ್ಟ್‌ನನ್ನು ತನ್ನ ಚಿತ್ರಗುರುವಾಗಿ ಸ್ವೀಕರಿಸಿದ ಹಿಟ್ಲರ್, ತನ್ನ ಗುರುವಿನಂತೆ ತಾನೂ ಕೂಡಾ ಜೀವಮಾನವಿಡೀ ಕಲಾವಿದನಾಗಿಯೇ ಮುಂದುವರೆದಿದ್ದರೆ ಅದೆಷ್ಟು ಜೀವಗಳು ಉಳಿಯುತ್ತಿದ್ದವೋ?! 1939ರಲ್ಲಿ ಇಂಗ್ಲೀಷ್ ರಾಯಭಾರಿಗೆ ನೀಡಿದ್ದ ಸಂದರ್ಶನದಲ್ಲಿ ಹಿಟ್ಲರ್, "ನಾನು ಹುಟ್ಟಾ ಕಲಾವಿದ, ರಾಜಕಾರಣಿಯಲ್ಲ!! ಒಮ್ಮೆ ಈ ಪೋಲೆಂಡಿನ ಸಮಸ್ಯೆ ಮುಕ್ತಾಯವಾಯಿತು ಎಂದರೆ, ನನ್ನ ಮುಂದಿನ ಜೀವನವನ್ನು ಕಲಾವಿದನಾಗಿ ನೆಮ್ಮದಿಯಿಂದ ಕಳೆಯುತ್ತೇನೆ.." ಎಂದಿದ್ದ! ಆದರೆ ಹಾಗಾಗಲೇ ಇಲ್ಲ..!
ಇಂದು ಜಗತ್ತು ಹಿಟ್ಲರ್‌ನನ್ನು ಮನುಷ್ಯನ ಮೃಗೀಯ ವರ್ತನೆಯ ಪರಾಕಾಷ್ಠೆ ಎಂದು ಹೇಳುತ್ತದೆ! ಯಾರು ಕೂಡ ನನ್ನ ಮಗ ಹಿಟ್ಲರ್ ಆಗಲಿ ಎಂದು ಕನಸಿನಲ್ಲಿ ಕೂಡಾ ಬಯಸುವುದಿಲ್ಲ!! ಅವನು ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಿ ಅವನಿಗೊಂದು ಸೀಟು ಕೊಟ್ಟಿದ್ದರೆ; ಯಾರಿಗೆ ಗೊತ್ತು ಅವನೊಬ್ಬ ಒಳ್ಳೆಯ ಕಲಾವಿದನಾಗಿ ಬದುಕುತ್ತಿದ್ದನೇನೋ?! ಇನ್ನೊಂದು ಕಡೆ ಮನಸ್ಸು ಹೇಳುತ್ತದೆ, ಸೀಟು ಸಿಗದಿದ್ದರೇನಂತೆ?! ತನ್ನಲ್ಲಿದ್ದ ಪ್ರತಿಭೆಯನ್ನು ಬಳಸಿಕೊಂಡು ಆತ ಮನಸ್ಸು ಮಾಡಿದ್ದರೆ ಅವನೊಬ್ಬ ಜಗತ್ತೇ ಆರಾಧಿಸುವ ಕಲಾವಿದನಾಗುತ್ತಿದ್ದ ಎಂದು! ಕಲಾವಿದ ಆಗದಿದ್ದರೆ ಹೋಗಲಿ, ಏನೂ ಇಲ್ಲದಿದ್ದರೂ ಕೂಡ ಮುಂದೆ ಅವನೊಬ್ಬ ಜಗತ್ತಿನ ಒಳ್ಳೆಯ ನಾಯಕನಾಗಿ, ಜನಮಾನಸದಲ್ಲಿ 'ಹೀರೋ' ಖಂಡಿತಾ ಆಗಬಹುದಿತ್ತು! ಆದರೆ ಕೈಯ್ಯಾರೆ ವಿಲಸ್ ಆದ!!
ಆಧುನಿಕ ತಂತ್ರಜ್ಞಾನದ ವಿಜ್ಞಾನ ಯುಗವಾದ ಇಂದು ಬಹುತೇಕ ಎಲ್ಲರೂ ಶಿಕ್ಷಿತರಾಗುತ್ತಿದ್ದೇವೆ. ಆದರೆ ಇದರಿಂದ ಸಮಾಜದಲ್ಲಿ ಅಪರಾಧಗಳು ನಡೆಯುವುದು ನಿಂತಿವೆಯೆ?! ಸಮಾಜಘಾತುಕ ಕೃತ್ಯಗಳನ್ನು ಮಾಡುತ್ತಿರುವವರು ಬಹುತೇಕ 'ವಿದ್ಯಾವಂತ' ಎಂದು ಕರೆಯುತ್ತಿರುವ ಯುವ ಜನಾಂಗವೇ ಅಲ್ಲವೆ?!! ಎಂತೆಂತಹ ಪ್ರತಿಭಾನ್ವಿತರು ಕೊಲೆ, ದರೋಡೆ, ಭಯೋತ್ಪಾದನೆಯಂತಹಾ ಸಮಾಜದ್ರೋಹಿ ಕೆಲಸಗಳಲ್ಲಿ ಭಾಗವಹಿಸುವುದನ್ನು ಕಂಡಾಗ ಮತ್ತೆ ಮತ್ತೆ ಇದೇ ಪ್ರಶ್ನೆ ಉದ್ಭವಿಸುತ್ತದೆ; "ಅಂದು ಹಿಟ್ಲರ್ ಎಲ್ಲಿ ತಪ್ಪಿದ? ಹಾಗೂ ಇಂದು ನಾವು ಎಲ್ಲಿ ತಪ್ಪುತ್ತಿದ್ದೇವೆ?! ಮತ್ತು ಇದನ್ನು ತಪ್ಪಿಸಲೇ ಬೇಕಾದ ತುರ್ತಿನಲ್ಲಿರುವ ನಾವಿಂದು ಏನು ಮಾಡಬೇಕಾಗಿದೆ"?!