ನ್ಯೂಸ್

ಕೃಷಿ ಕಾಯ್ದೆ: ನಿಮ್ಮ ಕೆಲಸ ನೀವು ಮಾಡಿ- ನಮ್ಮ ಕೆಲಸ ನಾವು ಮಾಡುತ್ತೇವೆ ಎಂದ ಸುಪ್ರೀಂಕೋರ್ಟ್​

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳನ್ನು ರದ್ದು ಮಾಡುವಂತೆ ಕೋರಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಸಮಿತಿಯನ್ನು ರಚಿಸುವುದಾಗಿ ಸುಪ್ರೀಂಕೋರ್ಟ್​ ಹೇಳಿದೆ.

' ನಾವು ಸಮಿತಿಯೊಂದನ್ನು ರಚನೆ ಮಾಡುತ್ತಿದ್ದೇವೆ. ಆಗ ಮಾತ್ರ ಸಂಪೂರ್ಣ ಚಿತ್ರಣ ಸಿಗಲು ಸಾಧ್ಯ. ಖುದ್ದು ಪ್ರಧಾನಿಯರವೇ ರೈತರ ಬಳಿ ಹೋಗಿ ಮಾತನಾಡಿ ಎಂದು ನಾವು ಹೇಳುವುದಿಲ್ಲ. ಸಮಿತಿ ರಚನೆ ಮಾಡಿ ಅದರಲ್ಲಿ ಕೃಷಿ ಕಾಯ್ದೆಗೆ ಸಂಬಂಧಿಸಿದ ಸಾಧಕ ಬಾಧಕಗಳ ಚರ್ಚೆಯ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ಎಸ್​.ಎ.ಬೊಬ್ಡೆ ನೇತೃತ್ವದ ಪೀಠ​ ಹೇಳಿದೆ.

ಇದೇ ವೇಳೆ ತನ್ನ ಮುಂದಿನ ಆದೇಶದವರೆಗೆ ಈ ಕಾಯ್ದೆಗಳನ್ನು ಜಾರಿಗೊಳಿಸದಂತೆ ಕೇಂದ್ರಕ್ಕೆ ಕೋರ್ಟ್​ ಸೂಚನೆ ನೀಡಿದೆ.

ಒಂದು ವೇಳೆ ಸಮಿತಿಯನ್ನು ರಚನೆ ಮಾಡಿದರೆ, ರೈತರು ಸಮಿತಿ ಮುಂದೆ ಬರದೇ ಇರಬಹುದು ಎಂದು ವಕೀಲರು ವಾದ ಮಂಡಿಸಿದರು. ಅದಕ್ಕೆ ನ್ಯಾಯಮೂರ್ತಿಗಳು, ಈ ವಾದಗಳೆಲ್ಲ ನಮಗೆ ಬೇಕಾಗಿಲ್ಲ. ನಾವು ಸಮಸ್ಯೆಯನ್ನು ಬಗೆಹರಿಸಲು ನೋಡುತ್ತಿದ್ದೇವೆ. ಒಂದು ವೇಳೆ ನೀವು (ರೈತರು) ಅನಿರ್ದಿಷ್ಟಾವಧಿ ಆಂದೋಲನ ಮುಂದುವರಿಸುವುದೇ ಆದರೆ, ನೀವು ಮುಂದುವರಿಸಬಹುದು, ಸಮಿತಿ ರಚನೆಯ ಕೆಲಸವನ್ನು ನಾವು ಮಾಡುತ್ತೇವೆ ಎಂದು ನ್ಯಾಯಮೂರ್ತಿಗಳು ಹೇಳಿದರು.

ಪ್ರತಿಭಟನೆ ನಡೆಸಲು ರಾಮಲೀಲಾ ಮೈದಾನವನ್ನು ನೀಡಲು ಸರ್ಕಾರಕ್ಕೆ ಅನುಮತಿ ನೀಡುವಂತೆ ಅರ್ಜಿದಾರರ ಪರ ವಕೀಲರು ಕೋರಿಕೊಂಡರು. ಅದಕ್ಕೆ ನ್ಯಾಯಮೂರ್ತಿಗಳು, ಒಂದು ವೇಳೆ ನಾವೇನಾದರೂ ಅಲ್ಲಿ ಪ್ರತಿಭಟನೆ ಮಾಡಲು ಅನುಮತಿ ಕೊಟ್ಟಿದ್ದೇ ಆದರೆ ಪ್ರತಿಭಟನೆಯ ಎಲ್ಲಾ ನಿಯಮಗಳನ್ನು ಪಾಲನೆ ಮಾಡುವುದಾಗಿ ಹೇಳಬೇಕು, ಅಲ್ಲಿಯ ಯಾವುದೇ ಆಸ್ತಿ ಪಾಸ್ತಿಗಳಿಗೆ ಹಾನಿ ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.