ಕರಾಚಿ: ಪಾಕಿಸ್ತಾನದಲ್ಲಿ ಹೊಸದೊಂದು ದಾಖಲೆ ಸೃಷ್ಟಿಯಾಗಿದೆ. ಸುಪ್ರೀಂಕೋರ್ಟ್‌ಗೆ ಮಹಿಳೆಯೊಬ್ಬರ ನೇಮಕವಾಗಿದೆ. ಮೊದಲ ಮಹಿಳಾ ನ್ಯಾಯಮೂರ್ತಿಯಾಗಿ ಆಯೇಷಾ ಮಲ್ಲಿಕ್ ಅವರು ನೇಮಕಗೊಂಡಿದ್ದು, ಪ್ರಮಾಣವಚನ ಸ್ವೀಕರಿಸಿದ್ದಾರೆ.
ಇಸ್ಲಾಮಾಬಾದ್ನ ಸುಪ್ರೀಂಕೋರ್ಟ್ನಲ್ಲಿ ಸೋಮವಾರ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ 16 ಪುರುಷ ನ್ಯಾಯಮೂರ್ತಿಗಳ ಜತೆ ಕುಳಿತ ಆಯೇಷಾ ಪ್ರಮಾಣವಚನ ಸ್ವೀಕರಿಸಿದ್ದರು. ಪಾಕಿಸ್ತಾನದಲ್ಲಿ ಮಹಿಳಾ ಹಕ್ಕುಗಳಿಗೆ ಬೆಲೆಯಲಿಲ್ಲ. ಅದನ್ನು ಹತ್ತಿಕ್ಕಲಾಗುತ್ತಿದೆ ಎಂಬ ಆರೋಪಕ್ಕೆ ಸದ್ಯ ಈ ಬೆಳವಣಿಗೆಯ ನಂತರ ಬ್ರೇಕ್ ಬಿದ್ದಿದೆ. ಇದೊಂದು ಪಾಕಿಸ್ತಾನದಲ್ಲಿ ದೊಡ್ಡ ಮೈಲಿಗಲ್ಲು ಎಂದೇ ಪರಿಗಣಿಸಲಾಗಿದೆ.
ಆಯೇಷಾ ಮಲ್ಲಿಕ್ ಅವರು ಹುಟ್ಟಿದ್ದು 1966ರಲ್ಲಿ. ಪ್ಯಾರಿಸ್, ನ್ಯೂಯಾರ್ಕ್ ಮತ್ತು ಕರಾಚಿಯಲ್ಲಿ ಶಿಕ್ಷಣ ಪಡೆದಿದ್ದಾರೆ. ಪಾಕಿಸ್ತಾನದ ಕಾನೂನು ಕಾಲೇಜಿನಲ್ಲಿಯೇ ಅವರು ಲಾ ಓದಿದ್ದಾರೆ. ನಂತರ ಎಲ್ಎಲ್ಎಂ ಪದವಿಯನ್ನು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪಡೆದಿದ್ದಾರೆ.
ಪಾಕಿಸ್ತಾನದ ಪೂರ್ವ ನಗರವಾದ ಲಾಹೋರ್ನ ಹೈಕೋರ್ಟ್ನಲ್ಲಿ ಕಳೆದ 20 ವರ್ಷಗಳಿಂದ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು. ಅವರನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯನ್ನಾಗಿ ನೇಮಿಸಲು ಪಾಕಿಸ್ತಾನ ಅಧ್ಯಕ್ಷ ಆರಿಫ್ ಅಲ್ವಿ ಜನವರಿ 21ರಂದು ಅನುಮೋದನೆ ನೀಡಿದ್ದರು. ಪಂಜಾಬ್ ಪ್ರಾಂತ್ಯದ ಕೋರ್ಟ್ನಲ್ಲಿದ್ದಾಗ ಇವರು ಪಿತೃಪ್ರಧಾನ ಕಾನೂನು ನೀತಿಗಳನ್ನು ಹಿಂಪಡೆದು ಸಂಚಲನ ಸೃಷ್ಟಿಸಿದ್ದರು. ಅಷ್ಟೇ ಅಲ್ಲ, ಮಹಿಳೆಯರು ಲೈಂಗಿಕ ಅನುಭವ ಹೊಂದಿದ್ದಾರೆಯೋ ಇಲ್ಲವೋ ಎಂದು ತಿಳಿಯಲು ಬಳಸುವ ವೈದ್ಯಕೀಯ ಪರೀಕ್ಷೆಯನ್ನು ಕಾನೂನುಬಾಹಿರಗೊಳಿಸಿದ್ದರು ಇವರೇ.
2031ರವರೆಗೆ ಅವರ ಅಧಿಕಾರಾವಧಿಯಿದ್ದು, ಮುಖ್ಯ ನ್ಯಾಯಮೂರ್ತಿ ಹುದ್ದೆಯನ್ನೂ ಏರುವ ಅವಕಾಶವಿದೆ.