ನ್ಯೂಸ್

ಜೈಲಿನಲ್ಲಿದ್ದೇ ಸಂಪಾದಿಸಿದ 215 ಕೋಟಿ ರೂ! ಬಾಲಿವುಡ್‌ ಬೆಡಗಿಯರು ಈತನ ಬುಟ್ಟಿಗೆ... ಖತರ್ನಾಕ್‌ ಖದೀಮನ ರೋಚಕ ಸ್ಟೋರಿ

ಮುಂಬೈ: ಸುಕೇಶ್‌ ಚಂದ್ರಶೇಖರ್‌...

ಈ ಭಯಂಕರ ಭೂಪನ ಹೆಸರು ಕಳೆದ ಕೆಲ ದಿನಗಳಿಂದ ಭಾರಿ ಸುದ್ದಿ ಮಾಡುತ್ತಿದೆ. 25 ಕೋಟಿ ಸುಲಿಗೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ವಿಚಾರಣೆ ಎದುರಿಸುತ್ತಿರುವ ಈ ಖದೀಮನ ಜೀವನ ಚರಿತ್ರೆಯೇ ಭಾರಿ ರೋಚಕವಾಗಿದೆ. ಈತನ ಬಗ್ಗೆ ಈಗ ಓಟಿಟಿಯಲ್ಲಿ ಸಿರೀಸ್‌ ಮಾಡಲು ನಿರ್ಮಾಪಕರು ತುದಿಗಾಲಿನಲ್ಲಿ ನಿಂತಿದ್ದಾರೆ.

ಬಾಲಿವುಡ್‌ ನಟಿಯರಾದ ಜಾಕ್ವಲಿನ್‌ ಫರ್ನಾಂಡಿಸ್‌, ಅದಿತಿ, ನೋರಾ ಫತೇಹಿ ಸೇರಿದಂತೆ ಹಲವರನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದ್ದ ಈತನ ಹಿಸ್ಟರಿ ಅಷ್ಟೇ ಕುತೂಹಲವಾಗಿದೆ. ಈತನ ಕೋಟಿ ಕೋಟಿ ಆಸ್ತಿ ನೋಡಿ ಈ ಸುಂದರಿಯರೂ ಇವನ ಬಳಿಗೆ ಹೋಗುತ್ತಿದ್ದು, ಈಗ ಜಾರಿ ನಿರ್ದೇಶನಾಲಯದಿಂದ ತನಿಖೆ ಎದುರಿಸುವಂತಾಗಿದೆ.

ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿದ್ದ ಈ ಖದೀಮ 12ನೇ ಕ್ಲಾಸಿಗೇ ಡ್ರಾಪ್‌ಔಟ್‌ ಆಗಿದ್ದವ. ಆದರೆ ಈತ ಕೋಟಿ ಕೋಟಿ ಆಸ್ತಿಯ ಮಾಲೀಕನಾಗಿದ್ದ ಹಿಂದೆ ಒಂದು ವಿಚಿತ್ರ ಕಥೆಯೇ ಇದೆ. ಚಿಕ್ಕವಯಸ್ಸಿನಲ್ಲಿಯೇ ಐಷಾರಾಮಿ ಜೀವನದ ಕನಸು ಕಂಡಿದ್ದ ಸುಕೇಶ್‌, ಹಲವಾರು ವ್ಯವಹಾರ ಮಾಡಿ ಕೈಸುಟ್ಟುಕೊಂಡವ. ಕೊನೆಗೆ ಇವನ ಕೈಹಿಡಿದದ್ದು ಮೋಸದ ಜಾಲ. ಹಲವಾರು ಬಾರಿ ಜೈಲಿಗೆ ಹೋಗಿ ಬಂದರೂ, ಹೊರಗಡೆ ಬಂದಾಗ ಈತ ಮಾಡುತ್ತಿದ್ದುದು ಇದೇ ಕೆಲಸವೇ. ಜೈಲಿನಲ್ಲಿ ಇದ್ದುಕೊಂಡೇ ಭಾರಿ ವ್ಯವಹಾರ ಕುದುರಿಸಿಕೊಳ್ಳುತ್ತಿದ್ದ ಇವನ ಕಥೆ ಕೇಳಿದರೆ ನಂಬುವುದೇ ಕಷ್ಟ.

ಇಂತಿಪ್ಪ ಸುಕೇಶ್‌ 215 ಕೋಟಿ ರೂಪಾಯಿಗಳನ್ನು ಜೈಲಿನಲ್ಲಿಯೇ ಇದ್ದುಕೊಂಡು ಸಂಪಾದಿಸಿದ ಎಂದರೆ ಯಾರಾದರೂ ನಂಬುತ್ತಾರೆಯೇ? ಆಗಿದ್ದು ಏನೆಂದರೆ, ಫಾರ್ಮಾ ಕಂಪೆನಿಯೊಂದರ ಮಾಲೀಕ ಶುವೇಂದರ್‌ ಸಿಂಗ್‌ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲಿನಲ್ಲಿದ್ದ. ಈಗ ನೂರಾರು ಕೋಟಿ ರೂಪಾಯಿಗಳ ಒಡೆಯ. ಇವರ ಪರಿಚಯ ಸುಕೇಶ್‌ಗೆ ಆಗಿದೆ. ಅಲ್ಲಿಂದಲೇ ತನ್ನ ಭವಿಷ್ಯದ ಬಗ್ಗೆ ಯೋಚನೆ ಮಾಡಿದ್ದ ಈ ಆಸಾಮಿ.

ಅದಾಗಲೇ ವಿವಿಧ ತಂತ್ರಜ್ಞಾನದಲ್ಲಿ ಪಳಗಿದ್ದ ಸುಕೇಶ್‌. ದೊಡ್ಡ ದೊಡ್ಡ ರಾಜಕಾರಣಿಗಳ, ಸಚಿವರ ಮನೆ ಹಾಗೂ ಕಚೇರಿಗಳ ಫೋನ್‌ ಹ್ಯಾಕಿಂಗ್‌ ಮಾಡುವ ತಂತ್ರಜ್ಞಾನದಲ್ಲಿ ಪಳಗಿಬಿಟ್ಟಿದ್ದ. ಫೋನ್‌ ಕರೆ ಸ್ವೀಕರಿಸಿದವರಿಗೆ ಈ ಕರೆ ರಾಜಕಾರಣಿಗಳ ಕಚೇರಿಯಿಂದ ಬಂದಿರುವ ರೀತಿಯಲ್ಲಿಯೇ ಡಿಸ್‌ಪ್ಲೇ ಆಗುವ ತಂತ್ರಜ್ಞಾನವಿದು. ಈತನಿಗೆ ಜೈಲಿನಲ್ಲಿ ಇದ್ದುಕೊಂಡೇ ಇದಕ್ಕೆ ಸಹಾಯ ಮಾಡುತ್ತಿದ್ದವರು ವಿವಿಧ ಕೇಸ್‌ಗಳಲ್ಲಿ ಜೈಲು ಪಾಲಾಗಿರೋ ಸರ್ಕಾರಿ ಅಧಿಕಾರಿಗಳು! ಅವರಿಗೆ ಬೇಕಾದಷ್ಟು ಹಣ ಕೊಟ್ಟು ಜೈಲಿನಲ್ಲಿಯೇ ಅವರನ್ನು ಖರೀದಿ ಮಾಡುತ್ತಿದ್ದ ಸುಕೇಶ್‌!

ಇದೇ ತಂತ್ರಜ್ಞಾನ ಬಳಸಿಕೊಂಡು ಗೃಹ ಇಲಾಖೆ ಹಾಗೂ ಕಾನೂನು ಇಲಾಖೆಗಳ ಫೋನ್‌ಗಳನ್ನು ಹ್ಯಾಕ್‌ ಮಾಡಿ, ಉದ್ಯಮಿ ಶುವೇಂದರ್‌ ಸಿಂಗ್‌ ಪತ್ನಿಗೆ ಕರೆ ಮಾಡಿದ್ದಾನೆ. ಅದಾಗಲೇ ಹೇಗಾದರೂ ಮಾಡಿ ಪತಿಯನ್ನು ಜೈಲಿನಿಂದ ಬಿಡಿಸಿಕೊಳ್ಳಲು ಅವರ ಪತ್ನಿ ಹರಸಾಹಸ ಪಡುತ್ತಿದ್ದರು. ಅದನ್ನೇ ಬಳಸಿಕೊಂಡ ಸುಕೇಶ್‌, ತಾವು ಗೃಹ ಇಲಾಖೆ, ಕಾನೂನು ಇಲಾಖೆಯಿಂದ ಕರೆ ಮಾಡುತ್ತಿರುವುದಾಗಿ ಹೇಳಿ ಇಷ್ಟು ಹಣ ಕೊಟ್ಟರೆ ಪತಿಯನ್ನು ಜೈಲಿನಿಂದ ಬಿಡುಗಡೆಗೊಳಿಸಬಹುದು ಎಂದಿದ್ದಾನೆ. ಈ ಸಂಖ್ಯೆಗಳನ್ನು ನೋಡಿದ ಅವರ ಪತ್ನಿ ನಿಜವೆಂದು ನಂಬಿ ತಮ್ಮಲ್ಲಿದ್ದ ಆಸ್ತಿ ಪಾಸ್ತಿ, ಚಿನ್ನಾಭರಣ ಎಲ್ಲವನ್ನೂ ಮಾರಿ 215 ಕೋಟಿ ರೂಪಾಯಿ ನೀಡಿದ್ದಾರೆ.

ಇದೇ ಹಣದಲ್ಲಿ ತನಗೆ ಬೇಕಾದ ಐಷಾರಾಮಿ ವಸ್ತುಗಳನ್ನು ಖರೀದಿ ಮಾಡಿದ್ದ ಸುಕೇಶ್‌ ಬಾಲಿವುಡ್‌ ಸುಂದರಿಯನ್ನು ಹತ್ತಿರ ಸೆಳೆದುಕೊಳ್ಳುವ ಕೆಲಸಕ್ಕೆ ಶುರುಹಚ್ಚಿಕೊಂಡ. ಈತನ ಐಷಾರಾಮಿ ಮನೆ, ಕಾರು, ಬಂಗಲೆ ಎಲ್ಲವನ್ನೂ ನೋಡಿದ ಬೆಡಗಿಯರು ಈತನ ಬಲೆಗೆ ಬಿದ್ದರು.

ಅಲ್ಲಿಂದ ಇವನಿಗೆ ಶ್ರೀಲಂಕನ್‌ ಮೂಲದ ಬಾಲಿವುಡ್‌ ನಟಿ ಜಾಕ್ವಲಿನ್‌ ಫರ್ನಾಂಡೀಸ್‌ ಮೇಲೆ ಮನಸ್ಸಾಗಿದೆ. ಗೃಹ ಸಚಿವ ಅಮಿತ್‌ ಷಾ ಅವರ ಕಚೇರಿಯಿಂದ ಕರೆ ಮಾಡುವುದಾಗಿ ಹೇಳಿ ನಟಿಯನ್ನು ಸೆಳೆದುಕೊಳ್ಳುವಲ್ಲಿ ಈತ ಸಫಲನಾಗಿದ್ದಾನೆ. ಆಕೆಗಾಗಿ ಲಕ್ಷ ಲಕ್ಷ ರೂಪಾಯಿಗಳ ಗಿಫ್ಟ್‌ ಕೊಟ್ಟಿದ್ದಾನೆ. 52 ಲಕ್ಷ ರೂಪಾಯಿ ಕುದುರೆಯನ್ನೂ ಖರೀದಿಸಿಕೊಟ್ಟಿದ್ದಾರೆ. ಲಕ್ಸುರಿ ಮಾಲ್‌ಗಳಲ್ಲಿ ಷಾಪಿಂಗ್‌ ಮಾಡಿಸಿ ಅದರ ಬಿಲ್‌ ತಾನೇ ಕೊಟ್ಟಿದ್ದಾನೆ. ಇದೇ ರೀತಿ ವಿವಿಧ ಬಾಲಿವುಡ್‌ ನಟಿಯರಿಗೂ ಗಿಫ್ಟ್‌ ಆಮಿಷ ಒಡ್ಡಿ ಬಲೆಗೆ ಬೀಳಿಸಿಕೊಂಡಿದ್ದಾನೆ. ಇವುಗಳಿಗೆಲ್ಲಾ ಈತನ ಪತ್ನಿ ಕೂಡ ಸಾಥ್‌ ನೀಡುತ್ತಿದ್ದುದು ವಿಚಿತ್ರ!

ಇದೀಗ ಒಂದೊಂದೇ ಹಗರಣಗಳೂ ಬೆಳಕಿಗೆ ಬಂದಿದ್ದು, ಇನ್ನೆಷ್ಟು ಕಥೆಗಳು ಹೊರಬರಬೇಕಿದೆಯೋ ಗೊತ್ತಿಲ್ಲ. ಸುಕೇಶ್‌ ಮತ್ತು ಜಾಕ್ವಲಿನ್‌ ಅವರ ಕಥೆಯನ್ನು ಸಿನಿಮಾ ಮಾಡಲು ಹಾಗೂ ಓಟಿಟಿಯಲ್ಲಿ ಸಿರೀಸ್‌ ಮಾಡಲು ನಿರ್ಮಾಪಕರು ಕಾತರರಾಗಿದ್ದಾರೆ.