ನ್ಯೂಸ್

ಸ್ವಾತಂತ್ರ್ಯ ಪೂರ್ವದಿಂದಲೂ ವಿದ್ಯುತ್ತನೇ ಕಾಣದ ಊರಲ್ಲೀಗ ಹಬ್ಬದ ಕಳೆ: 80 ವರ್ಷಗಳ ಬಳಿಕ ಬಂದ ಬೆಳಕು

ಅಗರ್ತಲಾ: ತ್ರಿಪುರದ ಖೋವೈ ಜಿಲ್ಲೆಯ ಸರ್ಖಿಪಾರ ಎಂಬ ಗ್ರಾಮದಲ್ಲೀಗ ಹಬ್ಬದ ವಾತಾವಣೆ. ಏಕೆಂದರೆ ಕಳೆದ 80 ವರ್ಷಗಳಿಂದ ಇಲ್ಲಿಯ ಜನ ವಿದ್ಯುತ್ತನ್ನೇ ಕಂಡಿರಲಿಲ್ಲ. ಇದೀಗ ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾಗಿರುವ 'ಗ್ರಾಮೀಣ ಬಜಾರ್ ಅಲೋಕ್ ಜ್ಯೋತಿ ಯೋಜನೆ'ಯಿಂದ ಈಗ ಗ್ರಾಮ ವಿದ್ಯುತ್ತನ್ನು ಕಂಡಿದೆ.

ಬುಡಕಟ್ಟು ಜನರು ವಾಸಿಸುವ ಈ ಗ್ರಾಮದಲ್ಲೀಗ ಸೌರಶಕ್ತಿಯ ಸಹಾಯದಿಂದ ಪ್ರಕಾಶಮಾನ ಬೆಳಕನ್ನು ಪಡೆಯಲಾಗುತ್ತಿದೆ. ಸೂರ್ಯ ಅತ್ತ ಅಸ್ತ ಆಗುತ್ತಿದ್ದಂತೆಯೇ ಮನೆಯೊಳಕ್ಕೆ ಜನರು ಸೇರಿಕೊಳ್ಳುವ ಸ್ಥಿತಿ ಇಷ್ಟು ವರ್ಷ ಇದ್ದವು. ಹೆಣ್ಣುಮಕ್ಕಳ ಸ್ಥಿತಿಯಂತೂ ಶೋಚನೀಯವಾಗಿತ್ತು. ಆದರೆ ಇದೀಗ ಜನರು ವಿದ್ಯುಚ್ಛಕ್ತಿಯಿಂದಾಗಿ ಹರ್ಷಿತರಾಗಿದ್ದಾರೆ. ಕುಲಕಸುಬಾಗಿರುವ ಕರಕುಶಲ ವಸ್ತುಗಳನ್ನು ತಯಾರಿಸಲು ನಮಗೀಗ ರಾತ್ರಿಯೂ ಸಾಧ್ಯವಾಗಿದೆ ಎಂದು ಬೀಗುತ್ತಿದ್ದಾರೆ ಗ್ರಾಮಸ್ಥರು.

ಸೌರ ವಿದ್ಯುತ್ ಯೋಜನೆಗೆ ಧನ್ಯವಾದಗಳು. ಈಗ ಕೆಲಸದ ಅವಧಿಯು ಹೆಚ್ಚಾಗಿದೆ. ಆರ್ಥಿಕವಾಗಿ ಸದೃಢರಾಗಲು ಸಾಧ್ಯವಾಗಿದೆ. ‘ಹಾಟ್ಸ್'(ಗ್ರಾಮ ಮಾರುಕಟ್ಟೆಗಳು) ಈಗ ಮುಸ್ಸಂಜೆಯ ನಂತರವೂ ತೆರೆದಿರುತ್ತವೆ. ಈಗ ಹಳ್ಳಿಯಿಂದ ಮಾರುಕಟ್ಟೆ ರಸ್ತೆಗಳು ಪ್ರಕಾಶಿಸಲ್ಪಟ್ಟಿವೆ. ಗ್ರಾಮಸ್ಥರು ಸುಲಭವಾಗಿ ದೂರದ ಊರಿಗೂ ಹೋಗುವುದಕ್ಕೆ ಸಹಾಯವಾಗುತ್ತೆ ಎಂದು ಹೇಳುತ್ತಿದ್ದಾರೆ ಗ್ರಾಮಸ್ಥರು. ಟ್ರೆಡಾ ಎಂಬ ಸರ್ಕಾರಿ ಸಂಸ್ಥೆಯು ರಾಜ್ಯದ 12 ಬ್ಲಾಕ್‌ಗಳಲ್ಲಿ 239 ಮಾರುಕಟ್ಟೆಗಳಲ್ಲಿ 2930 ಸೋಲಾರ್ ಬೀದಿ ದೀಪಗಳನ್ನು ಅಳವಡಿಸಿದೆ.

ಇದು ನಮಗೆ ಕನಸು ನನಸಾಗುವಂತಿದೆ. ಮುಸ್ಸಂಜೆಯ ನಂತರ ಸೀಮೆಎಣ್ಣೆ ದೀಪಗಳು ಮತ್ತು ಬ್ಯಾಟರಿ ಫ್ಲ್ಯಾಷ್‍ಲೈಟ್‍ಗಳು ಮಾತ್ರ ಬೆಳಕಿನ ಮೂಲಗಳಾಗಿದ್ದವು. ಹಳ್ಳಿಯು ರಾತ್ರಿಯಲ್ಲಿ ಭೂತದ ಸ್ಥಳದಂತೆ ಕಾಣುತ್ತಿತ್ತು. ಈಗ ಮಕ್ಕಳು ರಾತ್ರಿಯಲ್ಲಿ ಓದಬಹುದು, ನಾವು ಟಿವಿ ನೋಡಬಹುದು. ನಮ್ಮ ಜೀವನವೇ ಬದಲಾಗಿದೆ ಎಂದು ಹರ್ಷದಿಂದ ನುಡಿಯುತ್ತಿದ್ದಾರೆ ಜನರು.

ಈ ಭಾಗವು ಗುಡ್ಡಗಾಡು ಆಗಿರುವ ಹಿನ್ನೆಲೆಯಲ್ಲಿ ಸೌರಶಕ್ತಿಯ ಘಟಕವನ್ನು ನಿರ್ವಹಿಸುವುದು ಕಷ್ಟಸಾಧ್ಯ. ಆದರೂ ಸರ್ಕಾರ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಿ ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಸರ್ಕಾರಿ ಅಧಿಕಾರಿಗಳು ಹೇಳಿದ್ದಾರೆ (ಏಜೆನ್ಸೀಸ್​)