ನವದೆಹಲಿ: ಸದ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಬದಲಾವಣೆ ಆಗಬೇಕು ಎಂಬ ಕೂಗು ಕೇಳುಬರುತ್ತಿರುವ ನಡುವೆಯೇ ಹಿರಿಯ ನಾಯಕ ಶಶಿ ತರೂರ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಸಂದೇಹ ರಾಜಕೀಯ ವಲಯದಲ್ಲಿ ಶುರುವಾಗಿದೆ.
ಈ ಬಗ್ಗೆ ಸ್ಪಷ್ಟವಾಗಿ ತರೂರ್ ಯಾವುದೇ ಪ್ರತಿಕ್ರಿಯೆ ನೀಡದಿದ್ದರೂ ಅವರು ಇಂಥದ್ದೊಂದು ಅವಕಾಶಕ್ಕಾಗಿ ಕಾಯುತ್ತಿದ್ದಾರೆ ಎಂದೇ ಹೇಳಲಾಗುತ್ತಿದೆ.
ಇದಕ್ಕೆ ಬಲವಾದ ಕಾರಣವೆಂದರೆ ಮಲಯಾಳಿ ದಿನಪತ್ರಿಕೆಯೊಂದರಲ್ಲಿ ಅವರು ಬರೆದಿರುವ ಲೇಖನ. ತಿರುವನಂತಪುರ ಲೋಕಸಭಾ ಕ್ಷೇತ್ರದ ಸಂಸದರೂ ಆಗಿರುವ ತರೂರ್ ಲೇಖನದಲ್ಲಿ, ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವುದು ಕಾಂಗ್ರೆಸ್ ಪಕ್ಷದ ಪುನಶ್ಚೇತನಕ್ಕೆ ಅತ್ಯಗತ್ಯ ಆರಂಭಿಕ ಹೆಜ್ಜೆಯಾಗಿದೆ ಎಂದಿದ್ದಾರೆ.
'ಮುಕ್ತ ಮತ್ತು ನ್ಯಾಯಸಮ್ಮತ' ಚುನಾವಣೆಗೆ ಅವರು ಕರೆ ನೀಡುವ ಜತೆಗೆ, "ಎಐಸಿಸಿ ಮತ್ತು ಪಿಎಸಿಯಿಂದ ಆಯ್ಕೆಯಾದ ಪಕ್ಷದ ಸದಸ್ಯರಿಗೆ ಈ ಪ್ರಮುಖ ಹುದ್ದೆಗಳಲ್ಲಿ ಪಕ್ಷವನ್ನು ಯಾರು ಮುನ್ನಡೆಸಬೇಕು ಎಂದು ನಿರ್ಧರಿಸುವ ಅವಕಾಶ ನೀಡುವುದು, ನಾಯಕರ ಗುಂಪನ್ನು ಕಾನೂನುಬದ್ಧಗೊಳಿಸುವ ಮತ್ತು ಪಕ್ಷವನ್ನು ಮುನ್ನಡೆಸುವ ವಿಶ್ವಾಸಾರ್ಹ ಶಕ್ತಿಯನ್ನು ನೀಡಲು ಸಹಾಯ ಮಾಡಲಿದೆ" ಎಂದು ಹೇಳಿದ್ದಾರೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಒಳಗೆ ಹತ್ತಾರು ಸ್ಥಾನಗಳಿಗೆ ಕೂಡ ಚುನಾವಣೆ ನಡೆಯಬೇಕಿದ್ದು, ಅದಕ್ಕೂ ಪಕ್ಷವು ಚುನಾವಣೆ ಘೋಷಣೆ ಮಾಡಬೇಕಿತ್ತು ಎಂದು ಲೇಖನದಲ್ಲಿ ತರೂರ್ ಬರೆದಿದ್ದಾರೆ. ಇದಲ್ಲದೇ ಅವರ ನಡೆ ಕೂಡ ಕೆಲವೊಂದು ಮಟ್ಟಿಗೆ ಕುತೂಹಲಕ್ಕೆ ಕಾರಣವಾಗಿದೆ.
ಸಾಂಸ್ಥಿಕ ಸುಧಾರಣೆಗಳನ್ನು ನಡೆಸುವಂತೆ 2020ರಲ್ಲಿ ಪಕ್ಷದ ಅಧ್ಯೆ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದ 23 ನಾಯಕರ ಗುಂಪಿನಲ್ಲಿ ತರೂರ್ ಕೂಡ ಒಬ್ಬರಾಗಿದ್ದರು.
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅಕ್ಟೋಬರ್ 17ರಂದು ಚುನಾವಣೆ ನಡೆಯಲಿದ್ದು, ಅಕ್ಟೋಬರ್ 19ರಂದು ಮತ ಎಣಿಕೆಯಾಗಿ ಹೊಸ ಅಧ್ಯಕ್ಷರ ಘೋಷಣೆ ಆಗಲಿದೆ. ಸೆಪ್ಟೆಂಬರ್ 24ರಿಂದ 30ರವರೆಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ. ಅಕ್ಟೋಬರ್ 1ರಂದು ನಾಮಪತ್ರ ಪರಿಶೀಲನೆ ಆಗಲಿದ್ದು, ನವೆಂಬರ್ 8ರವರೆಗೂ ನಾಮಪತ್ರ ವಾಪಸ್ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ. (ಏಜೆನ್ಸೀಸ್)