ತಿರುವನಂತಪುರ: ಶೂಟಿಂಗ್ ವೇಳೆ ಅನೇಕಬಾರಿ ಅನೇಕ ರೀತಿಯ ಅನಾಹುತಗಳು ಸಂಭವಿಸುವುದು ಮಾಮೂಲು. ಅದರಲ್ಲಿಯೂ ಹೆಚ್ಚಾಗಿ ಅಪಾಯಕಾರಿ ಸ್ಟಂಟ್ಗಳನ್ನು ಖುದ್ದು ನಾಯಕ-ನಾಯಕಿಯರೇ ಮಾಡಲು ಮುಂದಾದಾಗ ಇಂಥ ಅಪಾಯಗಳು ಸಂಭವಿಸುವುದುಂಟು.
ಅಂಥದ್ದೇ ಒಂದು ಅನಾಹುತ ಮಲಯಾಳಂ ಸೆಟ್ನಲ್ಲಿ ಇಂದು ನಡೆದಿದೆ. ಖ್ಯಾತ ನಟ ಜಯಸೂರ್ಯ ಅವರು ಅಭಿನಯಿಸುತ್ತಿರುವ "ವೆಲ್ಲಂ" ಚಿತ್ರದ ಚಿತ್ರೀಕರಣದ ವೇಳೆ ಈ ಘಟನೆ ಸಂಭವಿಸಿದೆ.
ಈ ಚಿತ್ರದಲ್ಲಿ ಜಯಸೂರ್ಯ ಅವರು ಪವರ್ ಟಿಲ್ಲರ್ ಎಳೆದುಕೊಂಡು ಹೋಗುವ ದೃಶ್ಯವಿದೆ. ಆ ದೃಶ್ಯವನ್ನು ಮಾಡುತ್ತಿದ್ದ ಸಮಯದಲ್ಲಿ ನಿಯಂತ್ರಣ ತಪ್ಪಿ ಟಿಲ್ಲರ್ ಅವರನ್ನು ಎಳೆದುಕೊಂಡು ಹೋಗಿದೆ. ಕೂಡಲೇ ಭಯಭೀತರಾದ ನಟ ದಿಗಿಲುಗೊಳ್ಳುತ್ತಿದ್ದಂತೆಯೇ ಅಲ್ಲಿದ್ದ ಸಿಬ್ಬಂದಿ ಕೂಡಲೇ ಓಡೋಡಿ ಬಂದಿದ್ದಾರೆ.
ಅವರೆಲ್ಲರೂ ಸೇರಿ ನಟನನ್ನು ತಕ್ಷಣವೇ ಹಿಡಿದುಕೊಂಡ ಕಾರಣ, ಭಾರಿ ಅನಾಹುತ ತಪ್ಪಿದೆ. ಪವರ್ ಟಿಲ್ಲರ್ ದೃಶ್ಯವು ಸ್ವಲ್ಪಅಪಾಯಕಾರಿಯಾಗಿದ್ದು, ಡ್ಯೂಪ್ ಬಳಸಿಕೊಳ್ಳುವಂತೆ ಹೇಳಲಾಗಿತ್ತು. ಆದರೆ ಜಯಸೂರ್ಯ ಅವರು ಈ ದೃಶ್ಯವನ್ನು ತಾವೇ ಮಾಡುವುದಾಗಿ ಹೇಳಿ ಅದರ ತರಬೇತಿ ಕೂಡ ಪಡೆದುಕೊಂಡಿದ್ದರು.
ಆದರೆ ಶೂಟಿಂಗ್ ವೇಳೆ ನಿಯಂತ್ರಣ ತಪ್ಪಿಬಿಟ್ಟಿದೆ ಎಂದು ಚಿತ್ರತಂಡ ಹೇಳಿದೆ.
ಇದೇ ವೇಳೆ ತಮ್ಮ ನೂರನೇ ಚಿತ್ರವಾದ "ಸನ್ನಿ"ಯಲ್ಲಿ ಜಯಸೂರ್ಯ ನಟಿಸುತ್ತಿದ್ದು, ಆ ಚಿತ್ರದ ಚಿತ್ರೀಕರಣ ಮುಗಿಸಿ ಈ ಚಿತ್ರದ ಚಿತ್ರೀಕರಣಕ್ಕೆ ಬಂದಿದ್ದರು. ಸ್ವಲ್ಪ ಸುಸ್ತಾಗಿದ್ದರಿಂದ ಹೀಗಾಗಿರಬಹುದು ಎಂದು ತಂಡ ಹೇಳಿದೆ. ಒಟ್ಟಿನಲ್ಲಿ ಅಪಾಯ ತಪ್ಪಿದೆ.
ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದ್ದು, ಜಯಸೂರ್ಯ ಅವರ ಅಭಿಮಾನಿಗಳನ್ನು ಕಂಗೆಡಿಸಿದೆ. ತಮ್ಮ ನೆಚ್ಚಿನ ನಟನಿಗೆ ಏನೂ ಅಪಾಯ ಆಗದೇ ಇರುವ ಕಾರಣ ನೆಮ್ಮದಿಯ ಉಸಿರು ಬಿಟ್ಟಿದ್ದಾರೆ. ಈ ದೃಶ್ಯಕ್ಕೆ ಡ್ಯೂಪ್ ಬಳಸಿಕೊಳ್ಳುವಂತೆ ಸಲಹೆ ಕೊಟ್ಟಿದ್ದಾರೆ.