ನ್ಯೂಸ್

ಎಸ್‌ಬಿಐಗೆ ನುಗ್ಗಿ ಗುಂಡು ಹಾರಿಸಿದ್ದ ದರೋಡೆಕೋರರು ಎಂಟೇ ಗಂಟೆಯಲ್ಲಿ ಅಂದರ್‌- ಚಪ್ಪಲಿಯಿಂದಾಗಿ ತಗ್ಲಾಕೊಂಡ ಖದೀಮರು

ಮುಂಬೈ: ಸ್ಟೇಟ್‌ ಬ್ಯಾಂಕ್ ಆಫ್‌ ಇಂಡಿಯಾದ ಮುಂಬೈ ಶಾಖೆಯಲ್ಲಿ ಹಗಲುಹೊತ್ತಿನಲ್ಲಿಯೇ ಒಳನುಗ್ಗಿ ದರೋಡೆ ನಡೆಸಿದ್ದ ಖದೀಮರನ್ನು ಎಂಟು ಗಂಟೆಗಳಲ್ಲಿ ಪೊಲೀಸರು ಬಂಧಿಸಿದ್ದಾರೆ.

ಮುಂಬೈನ ಎಂಎಚ್‍ಬಿ ಕಾಲೋನಿಯ ಜಯವಂತ್ ಸಾವಂತ್ ರಸ್ತೆಯಲ್ಲಿರುವ ಶಾಖೆಯಲ್ಲಿ ಈ ಭಯಾನಕ ಘಟನೆ ಇಂದು ಬೆಳಗ್ಗೆ ನಡೆದಿತ್ತು. ಈ ಬ್ಯಾಂಕ್‌ನಲ್ಲಿ ಭದ್ರತಾ ಸಿಬ್ಬಂದಿ ಇಲ್ಲದಿರುವುದನ್ನು ನೋಡಿಕೊಂಡಿದ್ದ ಯುವಕರ ಗುಂಪೊಂದು ಸಂಚುಹೂಡಿ ಈ ಕೃತ್ಯ ಎಸಗಿದ್ದರು.

ಬೆಳಗ್ಗೆ ಬ್ಯಾಂಕ್‌ ಕಾರ್ಯನಿರ್ವಹಿಸುತ್ತಿದ್ದಂತೆಯೇ ಇಬ್ಬರು ಮುಸುಕುಧಾರಿಗಳು ಬ್ಯಾಂಕ್‌ ಒಳಗೆ ನುಗ್ಗಿದ್ದರು. ಬ್ಯಾಂಕ್​ ಸಿಬ್ಬಂದಿ ಸಂದೇಶ್​ ಗೋಮನೆ ಹಣ ತುಂಬಿದ್ದ ಬ್ಯಾಗ್​ ನೀಡಲು ನಿರಾಕರಿಸಿದ್ದರಿಂದ ಅವರ ಮೇಲೆ ಗುಂಡು ಹಾರಿಸಲಾಗಿತ್ತು. ಪರಿಣಾಮ ಅವರು ಮೃತಪಟ್ಟಿದ್ದರಿ. ಇದಾದ ಮೇಲೆ ಬ್ಯಾಂಕ್‍ನಲ್ಲಿದ್ದ 2.5 ಲಕ್ಷ ರೂ. ದೋಚಿಕೊಂಡು ದರೋಡೆಕೋರರು ಪರಾರಿಯಾಗಿದ್ದರು.

ದರೋಡೆಕೋರರು ಸ್ಕಾರ್ಫ್ ಮತ್ತು ಕ್ಯಾಪ್‍ನಿಂದ ಮುಖವನ್ನು ಮುಚ್ಚಿಕೊಂಡಿದ್ದರು. ಇದರಿಂದಾಗಿ ಅವರ ಮುಖವನ್ನು ಗುರುತಿಸಲು ಸಾಧ್ಯವಾಗಿರಲಿಲ್ಲ.

ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್​​ನೊಳಗೆ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿ ವಶಕ್ಕೆ ಪಡೆದುಕೊಂಡಿದ್ದ ಪೊಲೀಸರು ಶೋಧ ನಡೆಸಿದ್ದರು. ಇದಕ್ಕಾಗಿ ಹೆಚ್ಚುವರಿ ಪೊಲೀಸ್​ ಆಯುಕ್ತರ ನೇತೃತ್ವದಲ್ಲಿ ಎಂಟು ತಂಡ ರಚನೆ ಮಾಡಲಾಗಿತ್ತು.

ಸುಲಭದಲ್ಲಿ ಈ ಖದೀಮರು ಸಿಕ್ಕಿಕೊಳ್ಳುತ್ತಿರಲಿಲ್ಲ. ಆದರೆ ದರೋಡೆ ಮಾಡಿ ಓಡಿಹೋಗುವ ಸಂದರ್ಭದಲ್ಲಿ ಒಬ್ಬಾತ ಚಪ್ಪಲಿ ಬಿಟ್ಟು ಹೋಗಿದ್ದ. ಅದರ ಸುಳಿವನ್ನು ಹಿಡಿದು ಇವರನ್ನು ಬಂಧಿಸಲಾಗಿದೆ. ಶ್ವಾನದಳವು ಚಪ್ಪಲಿಯ ವಾಸನೆಯ ಜಾಡು ಹಿಡಿದು ದರೋಡೆಕೋರರು ಹೋದ ದಿಕ್ಕಿನ ಜಾಡು ಹಿಡಿದಿದೆ.

ಅಲ್ಲಿಂದ ಸಿಸಿಟಿವಿ ಆಧಾರದ ಮೇಲೆ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.