ನ್ಯೂಸ್

ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಿಗೆ ಇಂಗ್ಲಿಷ್​ ಬದಲು ಸಂಸ್ಕೃತದಲ್ಲಿ ಪ್ರಮಾಣವಚನ: ಡೀನ್ ಎತ್ತಂಗಡಿ!

ಚೆನ್ನೈ: ವೈದ್ಯಕೀಯ ವಿದ್ಯಾರ್ಥಿಗಳು ಇಂಗ್ಲಿಷ್​ ಬದಲಾಗಿದೆ ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಲು ಹೇಳಿದ ತಮಿಳುನಾಡು ಸರ್ಕಾರ ಕಾಲೇಜಿನ ಡೀನ್ ಎ.ರಾಥಿನಾವೆಲ್​ ಅವರನ್ನು ಎತ್ತಂಗಡಿ ಮಾಡಲಾಗಿದೆ!

ಪ್ರಥಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳು ಇಂಗ್ಲಿಷ್ ಬದಲು ಮಹರ್ಷಿ ಚರಕ ಅವರ ಪ್ರಮಾಣವನ್ನು ಸಂಸ್ಕೃತದಲ್ಲಿ ತೆಗೆದುಕೊಳ್ಳುವಂತೆ ಮಾಡಲಾಗಿತ್ತು. ಈ ಬಗ್ಗೆ ಭಾರಿ ವಿವಾದ ಸೃಷ್ಟಿಯಾಗಿತ್ತು. ಈ ಮೆಡಿಕಲ್ ಕಾಲೇಜಿನಲ್ಲಿ ತಲೆತಲಾಂತರಗಳಿಂದ ನಡೆದುಬಂದಿರುವ ಹಿಪೊಕ್ರೆಟಿಕ್ ಪ್ರಮಾಣ ವಚನದ ಬದಲು ಸಂಸ್ಕೃತದಲ್ಲಿ ಅದನ್ನು ತೆಗೆದುಕೊಳ್ಳುವಂತೆ ಮಾಡಿರುವುದು ಸರಿಯಲ್ಲ ಎಂಬ ಕಾರಣಕ್ಕೆ ಡೀನ್​ ಅವರನ್ನು ಎತ್ತಂಗಡಿ ಮಾಡಲಾಗಿದೆ.

ಕಳೆದ ಶನಿವಾರ ಪ್ರಮಾಣ ವಚನ ಸಮಾರಂಭ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ತಮಿಳುನಾಡು ಸರ್ಕಾರದ ಹಣಕಾಸು ಸಚಿವರಾದ ಪಿಟಿಆರ್ ಪಳನಿವೇಲ್ ತ್ಯಾಗ ರಾಜನ್ ಹಾಗೂ ವಾಣಿಜ್ಯ ತೆರಿಗೆ ಸಚಿವ ಪಿ ಮೂರ್ತಿ ಅವರು ಉಪಸ್ಥಿತರಿದ್ದರು. ಸಂಸ್ಕೃತದಲ್ಲಿ ಪ್ರಮಾಣ ವಚನ ತೆಗೆದುಕೊಳ್ಳುತ್ತಿದ್ದಂತೆಯೇ ಉಪಸ್ಥಿತರಿದ್ದ ಸಚಿವರು ಈ ಪ್ರಕ್ರಿಯೆಗೆ ತಕ್ಷಣ ವಿರೋಧ ವ್ಯಕ್ತಪಡಿಸಿದರೆನ್ನಲಾಗಿದೆ. ನಾವು ಹಿಂದಿ ಅಥವಾ ಇನ್ನಾವುದೇ ಭಾಷೆಯ ಹೇರಿಕೆಯನ್ನು ಸಹಿಸುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ (ಡಿಎಂಇ) ಈ ಘಟನೆಯ ತನಿಖೆ ನಡೆಸಲು ಆದೇಶ ನೀಡಿದೆ ಎನ್ನಲಾಗಿದೆ.