ಮುಂಬೈ: ಮಿಲ್ಕಿ ಬ್ಯೂಟಿ ಎಂದೇ ಪ್ರಸಿದ್ಧಿಯಾಗಿರುವ ನಟಿ ತಮನ್ನಾ ಭಾಟಿಯಾ ಸದ್ಯ ಅವರ ಅಭಿಮಾನಿಗಳಿಗೆ ಚಿಕ್ಕದೊಂದು ಶಾಕ್ ಕೊಟ್ಟಿದ್ದಾರೆ. ಇವರು ಬ್ಯೂಟಿ ಕ್ರೀಮ್ ಸೇರಿದಂತೆ ಕೆಲವು ಜನಪ್ರಿಯ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾರಣ, ಅವರ ಕೆಲ ಅಭಿಮಾನಿಗಳು ಇವರ ಸೌಂದರ್ಯದ ಗುಟ್ಟು ಅದೇ ಕ್ರೀಮ್ ಎಂದುಕೊಂಡಿದ್ದರು.
ಆದರೆ ಇದೀಗ ನಿಜವಾಗಿಯೂ ಸೌಂದರ್ಯದ ಹಿಂದಿರುವ ಸೀಕ್ರೆಟ್ ಏನು ಎಂಬುದನ್ನು ತಮನ್ನಾ ರಿವೀಲ್ ಮಾಡಿದ್ದಾರೆ. ಅದೇ ಎಂಜಲು! ನಮ್ಮದೇ ಎಂಜಲಿನಲ್ಲಿ ಹಲವು ಔಷಧಗಳು ಇರುತ್ತವೆ ಎಂಬುದು ಇದಾಗಲೇ ವೈಜ್ಞಾನಿಕವಾಗಿಯೂ ಸಾಬೀತಾಗಿದ್ದೆ. ಅದೇ ಕಾರಣಕ್ಕೆ ಚರ್ಮದ ಆರೋಗ್ಯಕ್ಕೆ ಬೆಳಗ್ಗೆ ಎದ್ದಾಕ್ಷಣ, ಎಂಜಲನ್ನು ಮುಖಕ್ಕೆ ಹಚ್ಚಿಕೊಳ್ಳುವವರೂ ಇದ್ದಾರೆ.
ಆದರೆ ಎಂಜಲು ಎಂದಾಕ್ಷಣ ಒಂದು ರೀತಿಯಲ್ಲಿ ಕಾಣುವ ಅಭಿಮಾನಿಗಳಿಗೆ, ತಮನ್ನಾ ಈಗ ಅದೇ ಸೀಕ್ರೆಟ್ ಹೇಳಿಕೊಟ್ಟಿದ್ದಾರೆ. ತಮ್ಮ ಕೋಮಲವಾದ ತ್ವಚೆಯ ಸೀಕ್ರೆಟ್ ನನ್ನ ಎಂಜಲು ಎಂದು ಹೇಳಿದ್ದಾರೆ. ಪದೇ ಪದೇ ಅವರ ಸೌಂದರ್ಯದ ಗುಟ್ಟನ್ನು ಕೇಳಲಾಗುತ್ತಿತ್ತು. ಆದ ಕಾರಣ ಸಂದರ್ಶನವೊಂದರಲ್ಲಿ ಈ ಗುಟ್ಟನ್ನು ಅವರು ಬಹಿರಂಗಗೊಳಿಸಿದ್ದಾರೆ.
ಮೊದಲು ಮೊಡವೆ ಸಮಸ್ಯೆ ಇತ್ತು. ಅದನ್ನು ಹೋಗಲಾಡಿಸಲು ಎಂಜಲೇ ಔಷಧ ಎಂದು ತಿಳಿಯಿತು. ಮೊದಮೊದಲು ಮುಜುಗರವಾಯಿತು. ನಂತರ ಬೆಳಗಿನಜಾವದ ಸಮಯದಲ್ಲಿ ಬರುವ ಎಂಜಲನ್ನು ಮುಖಕ್ಕೆ ಹಚ್ಚಿಕೊಳ್ಳುತ್ತಿದ್ದೇನೆ. ಇದರಿಂದ ಮೊಡವೆಗಳು ಒಣಗಿ ಸೌಂದರ್ಯವೂ ವೃದ್ಧಿಸಿದೆ. ಜತೆಗೆ, ಯಾವುಕೇ ಕೃತಕ ರಾಸಾಯನಿಕಗಳಿಗೆ ಮೊರೆ ಹೋಗದೇ ಮನೆಯಲ್ಲಿ ಸಿಗುವ ವಸ್ತುಗಳಿಂದಲೇ ಕೂದಲ ಆರೈಕೆ ಮಾಡುವೆ ಎಂದಿದ್ದಾರೆ ತಮನ್ನಾ. ಇದನ್ನು ಕೇಳಿದ ಹಲವು ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಆಗ್ತಿಲ್ಲ. ನಿಜಕ್ಕೂ ನೀವು ಎಂಜಲು ಹಚ್ಚುತ್ತೀರಾ? ಇದರಿಂದ ಇಷ್ಟೊಂದು ಒಳ್ಳೆಯದು ಇದೆಯೆ? ನೀವು ಸುಳ್ಳು ಹೇಳುತ್ತಿಲ್ಲ ತಾನೆ ಎಂದೆಲ್ಲಾ ಪ್ರಶ್ನೆಗಳ ಸುರಿಮಳೆಯನ್ನೇ ಮಾಡುತ್ತಿದ್ದಾರೆ.