ನ್ಯೂಸ್

ರ‍್ಯಾಪಿಡೋ ಬೈಕ್ ರೈಡರ್‌ ಬುಕ್‌ ಮಾಡಿ ಥಳಿಸಿದ ಆಟೋ ಚಾಲಕರು? ತಮ್ಮ ಬಾಡಿಗೆಗೆ ಕುತ್ತು ಎಂದು ಗಲಾಟೆ

suchetana

ಬೆಂಗಳೂರು: ರ‍್ಯಾಪಿಡೋ ಬೈಕ್ ಟ್ಯಾಕ್ಸಿಯಿಂದಾಗಿ ಆಟೋ ಚಾಲಕರ ಬಾಡಿಗೆಗೆ ಕುತ್ತು ಬಂದಿದೆ ಎಂದು ಆಟೋ ಚಾಲಕರು ರ‍್ಯಾಪಿಡೋ ರೈಡರ್‌ಗಳನ್ನು ತಡೆದು ನಿಲ್ಲಿಸಿ ಗಲಾಟೆ ಮಾಡಿರುವ ಘಟನೆ ಶನಿವಾರ ರಾಜಾಜಿನಗರದ ಆರ್‌ಟಿಒ ಕಚೇರಿ ಬಳಿ ನಡೆದಿದೆ.

ಆಟೋ ಚಾಲಕರೆಲ್ಲಾ ಮೊದಲೇ ಯೋಜನೆ ರೂಪಿಸಿ ಮೊಬೈಲ್ ಆ್ಯಪ್ ಮೂಲಕ ರ‍್ಯಾಪಿಡೋ ಬೈಕ್ ಟ್ಯಾಕ್ಸಿಯನ್ನು ಆರ್‌ಟಿಒ ಕಚೇರಿ ಸ್ಥಳದಿಂದಲೇ ಬುಕ್ ಮಾಡಿದ್ದಾರೆ. ಪ್ರಯಾಣಿಕರನ್ನು ಕರೆದೊಯ್ಯಲು ಬಂದಾಗ ಬೈದು ಆರ್‌ಟಿಇ ಕಚೇರಿ ಆವರಣದಲ್ಲಿ ಕುಳ್ಳರಿಸಿದ್ದಾರೆ. ಈ ರೀತಿ 20ಕ್ಕೂ ಹೆಚ್ಚು ರೈಡರ್‌ಗಳಿಗೆ ಅಟೋ ಚಾಲಕರು ಬುದ್ಧಿ ಹೇಳಿದ್ದು, ಅಲ್ಲದೆ, ಅದೇ ನೆಪದಲ್ಲಿ ಥಳಿಸಿದ್ದಾರೆ ಎನ್ನಲಾಗಿದೆ.

ಈ ರೀತಿ ಬೈಕ್ ಟ್ಯಾಕ್ಸಿ ಕೆಲಸ ಮಾಡುವುದರಿಂದ ಆಟೋದವರ ಬಾಡಿಗೆ ಕುತ್ತು ಬೀಳಲಿದೆ. ಲಕ್ಷಾಂತರ ಬಂಡವಾಳ ಹಾಕಿ ಆಟೋ ತೆಗೆದುಕೊಂಡಿರುವವರು ಎಲ್ಲಿಗೆ ಹೋಗಬೇಕು? ತಕ್ಷಣ ಮೊಬೈಲ್‌ನಲ್ಲಿರುವ ರ‍್ಯಾಪಿಡೋ ಆ್ಯಪ್‌ನ ಡೆಲಿಟ್ ಮಾಡುವಂತೆ ಒತ್ತಾಯ ಮಾಡಿಸಿ ಡೆಲಿಟ್ ಮಾಡಿಸಿದ್ದಾರೆ. ಬೈಕ್ ಟ್ಯಾಕ್ಸಿ ಚಾಲನೆ ಮಾಡುವುದು ತಪ್ಪು. ಇದು ಸಾರಿಗೆ ಇಲಾಖೆಯ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಬೈಕ್ ರೈಡರ್‌ಗಳಿಗೆ ತಿಳಿಸಿದ್ದಾರೆ.

ನಾಲ್ಕನೇ ಶನಿವಾರವಾಗಿದ್ದರಿಂದ ಸಾರಿಗೆ ಇಲಾಖೆ ರಜೆ ಇದ್ದರಿಂದ ಕಚೇರಿ ಆವರಣದಲ್ಲಿ ಯಾವುದೇ ಅಧಿಕಾರಿಗಳು ಇರಲಿಲ್ಲ. ಅಟೋ ಚಾಲಕರೇ ಸಂಚಾರ ವಿಭಾಗದ ಪೊಲೀಸರನ್ನು ಕರೆಸಿದ್ದಾರೆ. ಪೊಲೀಸರು ಬೈಕ್‌ಗಳು ಸಂಚಾರ ನಿಯಮ ಉಲ್ಲಂಸಿದ್ದ ಪ್ರಕರಣಗಳನ್ನು ತೋರಿಸಿ ರ‍್ಯಾಪಿಡೋ ರೈಡರ್‌ಗಳಿಂದ ದಂಡ ವಸೂಲಿ ಮಾಡಿ ಆನಂತರ ಅಲ್ಲಿಂದ ಅವರನ್ನು ಕಳುಹಿಸಿದ್ದಾರೆ.

ಬೆಳಗ್ಗೆ 9.30ಕ್ಕೆ ಕರೆತಂದ ಬೈಕ್ ರೈಡರ್‌ಗಳನ್ನು ಮಧ್ಯಾಹ್ನ 1.30ಕ್ಕೆ ಬಿಡುಗಡೆ ಮಾಡಿದ್ದಾರೆಂದು ನೋಂದ ಬೈಕ್ ರೈಡರ್ ಹೇಳಿಕೊಂಡಿದ್ದಾರೆ.

ನಮಗೂ ಕೆಲಸ ಇಲ್ಲ. ನಾವು ದುಡಿಮೆ ಮಾಡಬೇಕಿದೆ. ಕಂಪನಿಯವರು ಕೆಲಸ ಮಾಡಿ ಎನ್ನುತ್ತಾರೆ. ಆದರೆ, ಈ ರೀತಿಯ ಸಮಸ್ಯೆಗಳನ್ನು ಬಗೆಹರಿಸುವವರ‍್ಯಾರು? ಕೊನೆಗೆ ನಾವೇ ಬಲಿಪಶುವಾಗುತ್ತೇವೆಂದು ರೈಡರ್‌ಗಳು ರ‍್ಯಾಪಿಡೋ ಕಂಪನಿ ಮತ್ತು ಸದ್ಯದ ಪರಿಸ್ಥಿತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.