ಬಹದ್ದೂರ್ಗಢ (ಹರಿಯಾಣ): ಕಾರು ಮತ್ತು ಟ್ರಕ್ ನಡುವೆ ಭೀಕರವಾಗಿ ರಸ್ತೆ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬಕ್ಕೆ ಸೇರಿರುವ ಎಂಟು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಹರಿಯಾಣದ ಜಜ್ಜರ್ ಜಿಲ್ಲೆಯ ಬಹದ್ದೂರ್ಗಢದಲ್ಲಿ ನಡೆದಿದೆ. ಈ ಘಟನೆಯಲ್ಲಿ ಮಗುವೊಂದು ಮಾತ್ರ ಬದುಕಿದ್ದು, ಹೆಣಗಳ ರಾಶಿಯಲ್ಲಿ ಮಗು ಅಳುತ್ತಿರುವ ದೃಶ್ಯ ಭೀಕರವಾಗಿತ್ತು.
ಕೆಎಂಪಿ ಎಕ್ಸ್‌ಪ್ರೆಸ್‌ವೇ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿದೆ. ಮೃತಪಟ್ಟವರಲ್ಲಿ ಒಬ್ಬ ಬಾಲಕಿ ಮತ್ತು ಮೂವರು ಮಹಿಳೆಯರು ಸೇರಿದ್ದಾರೆ. ಮೃತಪಟ್ಟವರೆಲ್ಲರೂ ರಾಜಸ್ಥಾನದಿಂದ ಉತ್ತರ ಪ್ರದೇಶದ ಕಡೆ ಪ್ರಯಾಣ ಬೆಳೆಸುತ್ತಿದ್ದರು. ಕಾರಿನಲ್ಲಿ 11 ಮಂದಿ ಇದ್ದರು. ಕಾರಿನ ಚಾಲಕ ಮೂತ್ರ ವಿಸರ್ಜನೆಗೆ ಹೋದ ಸಂದರ್ಭದಲ್ಲಿ ಟ್ರಕ್ ಹಿಂಭಾಗದಲ್ಲಿ ಕಾರನ್ನು ಪಾರ್ಕ್ ಮಾಡಿದ್ದಾನೆ. ಇದನ್ನು ಗಮನಿಸದ ಟ್ರಕ್ ಚಾಲಕ ಟ್ರಕ್ ಅನ್ನು ಹಿಂಬದಿ ಚಲಿಸಿದ್ದಾನೆ. ಈ ವೇಳೆ ಅಪಘಾತ ಸಂಭವಿಸಿದೆ.
ಸದ್ಯ ಮೃತರ ಗುರುತು ಪತ್ತೆಯಾಗಿಲ್ಲ, ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ಬಳಿಕ ಟ್ರಕ್ ಚಾಲಕ ಪರಾರಿಯಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.